ಟೊಮೆಟೊ ರೈಸ್ ಬಾತು-ಹೀಗೂ ಮಾಡಬಹುದು

ಟೊಮೆಟೋ ರೈಸ್ ಬಾತ್ ಹೀಗೆ ಮಾಡಿ ನೋಡೋಣ ಅನ್ನಿಸಿತು. ಮಾಡಿದೆವು, ಚೆನ್ನಾಗಿ ಆಯಿತು.
ಸಾಮಾನ್ಯವಾಗಿ ಟೊಮೆಟೊ ರೈಸ್ ಬಾತ್ ಮಾಡುವ ವಿಧಾನವೆಂದರೆ, ಒಗ್ಗರಣೆ ಹಾಕಿ, ಅದಕ್ಕೆ ಗರಂ ಮಸಾಲೆ, ಕಾಯಿ ಅರೆದದ್ದನ್ನು ಹಾಕಿ, ಹುರಿದಂತೆ ಮಾಡಿ, ನೀರನ್ನು ಹಾಕಿ ಕುದಿಸಿ, ಅಕ್ಕಿ ಹಾಕಿ, ಬೆಂದ ಮೇಲೆ ಇಳಿಸಿಬಿಡುವುದು.

ಇನ್ನೊಂದು ರೀತಿ ಹೀಗೆ ಮಾಡಬಹುದು.

 1. ಒಂದು ಲೋಟ ಅಕ್ಕಿ
 2. ನಾಲ್ಕು ಟೊಮೆಟೊ
 3. ಸ್ವಲ್ಪ ಹುಣಸೆಹಣ್ಣು
 4. ಕೊತ್ತಂಬರಿ ಸೊಪ್ಪು
 5. ಕರಿಬೇವಿನ ಸೊಪ್ಪು
 6. ಮೂರು ಹಸಿಮೆಣಸು
 7. ಒಗ್ಗರಣೆಗೆ ಸಾಸಿವೆ
 8. ಎರಡು ಈರುಳ್ಳಿ
 9. ಬೆಳ್ಳುಳ್ಳಿ ಎಂಟ್ಹತ್ತು ಎಸಳು (ಬೇಕಾಗಿದ್ದರೆ)
 10. ನಿಮ್ಮ ಕೈ ಬೆರಳಿನ ಅರ್ಧದಷ್ಟು ಗಾತ್ರದ ಚಕ್ಕೆ
 11. ಒಂದೆರಡು ಮರಾಠ್ ಮೊಗ್ಗು
 12. ಒಂದೆರಡು ಲವಂಗ
 13. ಕೊತ್ತಂಬರಿ ಕಾಳು 20 ಗ್ರಾಂ ನಷ್ಟು
 14. ಐದು ಗ್ರಾಂನಷ್ಟು ಜೀರಿಗೆ
 15. ಎಂಟು ಒಣಮೆಣಸು
 16. ಕಾಲು ತೆಂಗಿನಕಾಯಿ (ಇದೂ ಬೇಕಾದವರು ಬಳಸಬಹುದು)

(ಸಾಮಾನ್ಯ ಮಾದರಿಯ ಟೊಮೆಟೊ ರೈಸ್ ಬಾತ್ ಗೂ ಇಷ್ಟೇ ಸಾಮಗ್ರಿಗಳು ಬೇಕು)

ಮೊದಲು ಅನ್ನವನ್ನು ಮಾಡಿಟ್ಟುಕೊಳ್ಳಿ. ಆದಷ್ಟು ಉದುರುಉದುರಾಗಿರಲಿ, ಮುದ್ದೆಯಾದರೆ ಚೆನ್ನಾಗಿರದು. ಎರಡು ವಿಶಲ್ ಆದ ಕೂಡಲೇ ಕುಕ್ಕರ್‌ನ್ನು ಕೆಳಗಿಟ್ಟರೆ ಸಾಕು.

ಲವಂಗ, ಮರಾಠ್ ಮೊಗ್ಗು, ಚಕ್ಕೆ, ಕೊತ್ತಂಬರಿ ಕಾಳು, ಜೀರಿಗೆಯನ್ನು ಹುರಿದಿಟ್ಟುಕೊಳ್ಳಿ. ಹುರಿಯುವುದೆಂದರೆ ಎಣ್ಣೆ ಹಾಕಿಯಲ್ಲ. ಹಾಗೆಯೇ, ಚೆನ್ನಾಗಿ ಬಿಸಿಯಾಗುವಂತೆ, ಅದರ ಹಸಿ ವಾಸನೆ ಹೋಗುವವರೆಗೆ ಹುರಿದರೆ ಸಾಕು.

ನಂತರ ಒಣಮೆಣಸು, ಅದಕ್ಕೆ ಸ್ವಲ್ಪ ಎಣ್ಣೆ ಹಾಕಿ (ಮೆಣಸಿನಕಾಯಿ ಮುಳುಗಿದಂತೆ ತೋರುವಷ್ಟು, ಸಂಪೂರ್ಣ ಮುಳುಗುವಷ್ಟಲ್ಲ), ಚೆನ್ನಾಗಿ ಹುರಿಯಿರಿ. ಸ್ವಲ್ಪ ತಣ್ಣಗಾಗಲು ಬಿಡಿ ಎಲ್ಲವನ್ನೂ.

ನಾಲ್ಕು ಟೊಮೆಟೊನಲ್ಲಿ ಒಂದೆರಡನ್ನು ಸ್ವಲ್ಪ ಸಣ್ಣ ಹೋಳುಗಳನ್ನಾಗಿ, ಇನ್ನೆರಡನ್ನು ಉದ್ದುದ್ದ ಸೀಳನ್ನಾಗಿ ಮಾಡಿಟ್ಟುಕೊಳ್ಳಿ. ಉದ್ದುದ್ದ ಸೀಳಿದ್ದದ್ದನ್ನು, ಆ ಒಣಮೆಣಸು ಹುರಿದು ಉಳಿದಿದ್ದ ಎಣ್ಣೆಯಲ್ಲಿ ಹಾಫ್ ಫ್ರೈ ಮಾಡಿ. ನಂತರ ಅದನ್ನು ತೆಂಗಿನಕಾಯಿ ಮತ್ತು ಮಸಾಲೆಯೊಂದಿಗೆ ಸೇರಿಸಿ ಅರೆಯಿರಿ. (ಬೆಳ್ಳುಳ್ಳಿ ಹಾಕುವವರು ಈ ಅರೆಯುವ ಸಾಮಗ್ರಿಯೊಂದಿಗೆ ಸೇರಿಸಿ ಅರೆದಿಡಬೇಕು)

ಈರುಳ್ಳಿಯನ್ನು ತೆಳುವಾಗಿ, ಉದ್ದುದ್ದ ಸೀಳಿಕೊಳ್ಳಿ. ಅನ್ನದ ಪಾತ್ರೆಯನ್ನು ತೆಗೆದು, ಅಗಲವಾದ ತಟ್ಟೆಗೆ ಅನ್ನವನ್ನು ಹರಡಿಸಿಟ್ಟುಕೊಳ್ಳಿ.
ಬಾಣಲೆಗೆ ಎಣ್ಣೆಯನ್ನು ಹಾಕಿ ಒಲೆ ಹಚ್ಚಿ, (ಇಲ್ಲೂ ಎಣ್ಣೆ ಜಾಸ್ತಿ ಬೇಕು ಎನಿಸಿದವರು, ತಮಗೆ ಸೂಕ್ತವೆನಿಸುವಷ್ಟು ಹಾಕಿಕೊಳ್ಳಬಹುದು) ಆಮೇಲೆ ಹತ್ತು ಕಾಳು ಜೀರಿಗೆ ಹಾಕಿ, ನಂತರ ಕರಿಬೇವು ಹಾಕಿ, ಸಣ್ಣಗೆ ಮಾಡಿದ ಈರುಳ್ಳಿ ಹಾಕಿ ಫ್ರೈ ಮಾಡಿ. ನೀರು ಬಳಸಬೇಡಿ. ಈರುಳ್ಳಿ ಸ್ವಲ್ಪ ಕೆಂಪಗಾಗುತ್ತಿದ್ದಂತೆ ಟೊಮೆಟೋ ಹಾಕಿ. ಚೆನ್ನಾಗಿ ಹುರಿಯಿರಿ. ನೆನಸಿಟ್ಟ ಹುಣಸೆಹಣ್ಣನು ಹಿಂಡಿ ರಸ ತೆಗೆದು, ಅದನ್ನು ಬಾಣಲೆಗೆ ಹಾಕಿ. ಒಂದು ಚಮಚದಷ್ಟು ಸಕ್ಕರೆ, ಅಗತ್ಯದಷ್ಟು ಉಪ್ಪು ಹಾಕಿ ಹುರಿಯಿರಿ. ಟೊಮೆಟೊ ಕರಗಿದಂತೆ ಕಂಡುಬಂದು, ರಸ ಬಿಡತೊಡಗುತ್ತದೆ. ಆಗ ಅರೆದ ಮಸಾಲೆ ಹಾಕಿ ಮಿಕ್ಸ್ ಮಾಡಿ. ಮಸಾಲೆಯನ್ನು ಫ್ರೈ ಮಾಡಬೇಕು ಚೆನ್ನಾಗಿ. ಆಗ ಹಸಿ ವಾಸನೆಯೆಲ್ಲಾ ಹೋಗಿ, ಹೊಸ ಪರಿಮಳ ಬರತೊಡಗುತ್ತದೆ. ಆಗ ಅನ್ನವನ್ನು ಚೆನ್ನಾಗಿ ಮಿಕ್ಸ್ ಮಾಡಿ.

ಮತ್ತೆ ಬಾಣಲಿಯಿಟ್ಟು, ಹಸಿಮೆಣಸನ್ನು ಸ್ವಲ್ಪ ಸಣ್ಣ ಸಣ್ಣ ಹೋಳು ಮಾಡಿ, ಸೀಳಿಕೊಂಡು, ಅದನ್ನು ಕಾದ ಎಣ್ಣೆಯಲ್ಲಿ ಕರಿಯಿರಿ. ಬಳಿಕ ಅದನ್ನು ಈ ಅನ್ನದೊಂದಿಗೆ ಮಿಕ್ಸ್ ಮಾಡಿ. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಇದರ ಮೇಲೆ ಹರಡಿ ಅಲಂಕಾರ ಮಾಡಿ. ಇದಕ್ಕೆ ಜತೆಗೆ ಬೇರೇನೂ ಇಲ್ಲದಿದ್ದರೂ ಪರವಾಗಿಲ್ಲ.

ಟಿಪ್ಸ್

 1. ಎಣ್ಣೆಯ ಬದಲು ತುಪ್ಪವನ್ನೂ ಬಳಸಬಹುದು. ಆದರೆ, ಎಣ್ಣೆಗಿರುವಷ್ಟು ತೇಜಿ ಗುಣ ತುಪ್ಪಕ್ಕಿರದು.
 2. ಮಸಾಲೆ ಸಾಮಾನುಗಳನ್ನು ಜಾಸ್ತಿ ಎಣ್ಣೆಯಲ್ಲಿ ಕರಿದಂತೆ ಹುರಿಯುವ ಅಭ್ಯಾಸವೂ ಇದೆ. ಅದು ಎಲ್ಲದಕ್ಕೂ ಚೆಂದವಲ್ಲ. ಬಿಸಿಬೇಳೆಬಾತ್ ಗೆ ಹಾಗೆ ಕರಿದರೆ ಚೆಂದ.
 3. ಸಾಮಾನ್ಯವಾಗಿ ಈಗ ಸಿಗುವ ಟೊಮೆಟೊ ಹುಳಿ ಕಡಿಮೆ ಇರುವುದರಿಂದ, ಹುಣಸೆಹಣ್ಣನ್ನೂ ಜತೆಗೆ ಬಳಸುವುದು ಸೂಕ್ತ.
 4. ಅರೆದಮಸಾಲೆಯನ್ನು ಸರಿಯಾಗಿ ಹುರಿಯದಿದ್ದರೆ, ಸಂಜೆಯಾಗುವುದರೊಳಗೆ ಬಾತು ಹಳಸಿದಂತೆ ವಾಸನೆ ಬರುತ್ತದೆ.
 5. ಕರಿದ ಹಸಿಮೆಣಸು ಬೇರೆಯದೇ ರುಚಿಯನ್ನು ನೀಡುತ್ತದೆ.
 6. ಬಹಳ ಹಸಿ ಖಾರ ಬೇಕೆನ್ನುವವರು ನಾಲ್ಕು ಮೆಣಸು ಜಾಸ್ತಿ ಕರಿದುಕೊಳ್ಳಬಹುದು.
 7. ಕೊನೆಯಲ್ಲಿ ಮತ್ತೆರಡು ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ, ಬಾತಿನೊಂದಿಗೆ ಹಸಿಯಾಗಿಯೇ ಮಿಕ್ಸ್ ಮಾಡಿದರೂ ರುಚಿ ಭಿನ್ನವಾಗಿರುತ್ತದೆ.
Advertisements