ಸೆಟ್ ದೋಸೆ ಹೀಗೆ ಮಾಡಿದರೆ ಸುಲಭ…!

ಸೆಟ್ ದೋಸೆ ಮಾಡಲು ಒಂದು ಸುಲಭ ಉಪಾಯವಿದೆ. ಅದೇ ನನ್ನ ಹೊಸರುಚಿ

ಸೆಟ್ ದೋಸೆ ಮಾಡೋದು ಹೇಗೆ ಎಂದು ಮೊನ್ನೆ ಒಬ್ಬರು ಕೇಳಿದರು. ಅವರ ಪ್ರಶ್ನೆಗೂ ಒಂದು ಕಾರಣವಿತ್ತು. ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ದೋಸೆ ಹಿಟ್ಟಿನಲ್ಲಿ ಸೆಟ್ ದೋಸೆ ಮಾಡೋದು ಕಷ್ಟ. ಕಾರಣ, ನಾವು ಅರೆಯುವ ಹಿಟ್ಟು ಇಲ್ಲವೇ ಉದ್ದಿನ ದೋಸೆಗೆ ಅಥವಾ ಮಸಾಲೆ ದೋಸೆಗೆ ಸೂಕ್ತವಾಗಿರುತ್ತೆ. ಸೆಟ್ ದೋಸೆ ಅವೆರಡೂ ಅಲ್ಲ. ಅದಕ್ಕೆ ಬೇರೆ ಹದವಾದ ಹಿಟ್ಟು ಬೇಕು. 

set

ಬೆಂಗಳೂರಿನಲ್ಲಿ ರಾಮಕೃಷ್ಣ ಆಶ್ರಮದ ಬಳಿ ದ್ವಾರಕಾ ಎನ್ನೋ ಹೋಟೆಲ್ಲಿತ್ತು. ಅದು ಅತ್ಯಂತ ಹಳೆಯ ಹೋಟೆಲ್. ಈಗ ಅಲ್ಲಿಲ್ಲ. ಬಹುಶಃ ನರಸಿಂಹರಾಜ ಕಾಲೋನಿ ಬಳಿ ಹೊಸ ರೂಪ ಪಡೆದಿದೆ. ರುಚಿಯೂ ಕಳೆದುಕೊಂಡಿದೆ. ಅಲ್ಲಿ ಖಾಲಿ ದೋಸೆ ಸಿಗುತ್ತಿತ್ತು. ಎಷ್ಟು ಚೆನ್ನಾಗಿತ್ತೆಂದರೆ ಮಲ್ಲಿಗೆ ಹೂವಿನ ಹಾಗೆಯೇ. 

ಅಲ್ಲಿ ಖಾಲಿ ದೋಸೆಗೆ ಚಟ್ನಿ ಬಿಟ್ಟರೆ ಬೇರೇನೋ ಕೊಡುತ್ತಿರಲಿಲ್ಲ. ಅದೂ ಬರೀ ಕಾಯಿ ಚಟ್ನಿ. ಗಟ್ಟಿ ಚಟ್ನಿ ಕೇಳುವಂತೆಯೇ ಇರಲಿಲ್ಲ. ನೀರಾಗಿರುತ್ತಿದ್ದ ಚಟ್ನಿಯನ್ನೂ ಮೂರನೇ ಬಾರಿಗಿಂತ ಹೆಚ್ಚು ಕೇಳುವಂತಿರಲಿಲ್ಲ. ಆ ಹೋಟೆಲ್ ಬಗ್ಗೆಯೇ ದಂತಕಥೆ ಇದೆ. ಇನ್ನೊಮ್ಮೆ ಹೇಳುತ್ತೇನೆ. ಆ ನಮೂನೆಯ ಅಷ್ಟೊಂದು ಮೃದುವಾದ ಖಾಲಿದೋಸೆ ಮಾಡೋದು ಹೇಗೆ ಎನ್ನುವುದು ಆಗಿನ ಕುತೂಹಲವಾಗಿತ್ತು. 

ಈಗ ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿ ಸಿಗೋ ದೋಸೆಯೆಂದರೆ ಸೆಟ್ ದೋಸೆ. ಬಹುತೇಕ ನಗರಗಳಲ್ಲಿ ಖಾಲಿ ದೋಸೆಯ ಸ್ಥಾನವನ್ನು ಕೊಂಚ ದುಬಾರಿ ದರದಲ್ಲಿ ಸೆಟ್ ದೋಸೆ ಆವರಿಸಿಕೊಂಡಿದೆ. ಇಂಥ ಸೆಟ್ ದೋಸೆ ಕೆಲವೊಂದು ಕಡೆ ಮೃದುವಾಗಿರುವುದಿಲ್ಲ, ಕೆಲವೊಂದು ಕಡೆ ಸೊರಗಿದಂತಿರುತ್ತಿದೆ. 

ಸೆಟ್ ದೋಸೆ ಹೇಗೆ ?

ಆದರೆ ಬಹಳ ಸುಲಭವಾಗಿ ಸೆಟ್ ದೋಸೆ ಮಾಡುವುದು ಹೀಗೆ. 

ಈ ದೋಸೆಗೆ ಉದ್ದಿನ ಬೇಳೆಯ ಅಗತ್ಯವಿಲ್ಲ. ಸಾಮಾನ್ಯವಾಗಿ ದೋಸೆ ಎಂದರೆ ಉದ್ದು ಇಲ್ಲದೇ ಆಗುವುದಿಲ್ಲ. ನಾಲ್ಕು ಮಂದಿಯ ಲೆಕ್ಕದಲ್ಲಿ ವಿವರಿಸುತ್ತೇನೆ. 

ಎರಡು ಲೋಟ ಅಕ್ಕಿಯನ್ನು ನೆನೆಸಿ. ಮುಕ್ಕಾಲುಗಂಟೆ ನೆನೆದರೆ ಸಾಕು. ಅಕ್ಕಿಯನ್ನು ನೆನೆಸಿದ ಹದಿನೈದು ನಿಮಿಷದ ನಂತರ ಮುಕ್ಕಾಲು ಲೋಟಕ್ಕಿಂತ ಕೊಂಚ ಕಡಿಮೆ ದಪ್ಪ ಅವಲಕ್ಕಿಯನ್ನು ನೆನೆಸಿಡಿ. ತೊಳೆದ ಅಕ್ಕಿಯನ್ನು ಅರೆಯುವಾಗ ಈ ನೆನೆದ ದಪ್ಪ ಅವಲಕ್ಕಿಯನ್ನೂ ಹಾಕಿ ನುಣ್ಣಗೆ ರುಬ್ಬಿ. ಮಿಕ್ಸಿಯಲ್ಲಿ ಅರೆದರೂ ಸಾಕು. 

ಅರೆದು ತೆಗೆಯುವ ಮೊದಲು ಒಂದು ಕಪ್ ಮೊಸರನ್ನು ಹಾಕಿ ಮತ್ತೊಂದು ಸುತ್ತು ರುಬ್ಬಿರಿ. ನಂತರ ಪಾತ್ರೆಗೆ ತೆಗೆದು ಉಪ್ಪನ್ನು ಹಾಕಿಡಿ. ಬೆಳಗ್ಗೆ ಆ ಹಿಟ್ಟು ಹುಳಿ ಬಂದಿರುತ್ತದೆ. ಒಂದಕ್ಕಿಂತ ಹೆಚ್ಚು ಕಪ್ ಮೊಸರು ಹಾಕಿದರೆ ಹುಳಿ ಜಾಸ್ತಿಯಾಗಿ ಹುಳಿ ವಾಸನೆ ಬರಬಹುದು. 

ಬೆಳಗ್ಗೆ ಆ ಹಿಟ್ಟಿಗೆ ಒಂದು ಚಮಚ ಸಕ್ಕರೆ ಹಾಕಿ ಕಲಸಿ. ಹಿಟ್ಟು ಸ್ವಲ್ಪ ನೀರಾಗಿರಬೇಕು. ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿ ದೋಸೆ ಹೆಂಚಿಗೆ ಸುರಿಯಿರಿ. ಒಂದು ಸೌಟ್ಟು ಹಿಟ್ಟು ಹಾಕಿದರೆ ಅದೇ ಹರಡಿಕೊಳ್ಳುತ್ತದೆ. ನೀವು ಮತ್ತೆ ರೌಂಡಾಗಿ ಸೌಟಿನಲ್ಲಿ ಸುತ್ತುವುದು ಬೇಡ. ಈ ಸೆಟ್ ದೋಸೆಗೆ ಕಾಯಿ ಚಟ್ನಿ ಅಥವಾ ಸಾಗು, ಬಾಂಬೆ ಸಾಗುವಿದ್ದರೆ ಹೆಚ್ಚು ರುಚಿ. 

ಗಮನಿಸಬೇಕಾದ ಅಂಶಗಳು

* ಅವಲಕ್ಕಿ ಹೆಚ್ಚಾಗಿ ಹಾಕಿದರೆ ಬಹಳ ಮೃದುವಾಗುತ್ತದೆ. ಹೆಂಚಿನಿಂದ ತೆಗೆಯಲು ಕಷ್ಟವಾಗುತ್ತದೆ.

* ಸಕ್ಕರೆ ಹಾಕಿದರೆ ದೋಸೆಯ ಬುಡ ಕೆಂಪಾಗುತ್ತದೆ.

*  ಸೆಟ್ ದೋಸೆಯ ಜತೆಗೆ ಬೆಣ್ಣೆ ಇದ್ದರೆ ಮತ್ತೂ ರುಚಿ.

Advertisements