ಈರುಳ್ಳಿ ತಂಬುಳಿ

Three onions on a white background.

ತಂಬುಳಿ ಆರೋಗ್ಯಕ್ಕೆ ಬಹಳ  ಒಳ್ಳೆಯದು. ಸ್ವಲ್ಪ ನೀರಿನ ಪದಾರ್ಥವಾದದ್ದರಿಂದ  ಊಟದ ಮೊದಲ ಭಾಗದ ಅನ್ನವನ್ನು ಇದರೊಂದಿಗೆ ಕಲಿಸಿಕೊಂಡು ತಿನ್ನುವುದು ರೂಢಿ. ಇದರಿಂದ ಸಂಕುಚಿತವಾದ ಅನ್ನ ನಾಳದೊಳಗೆ ಸುಲಭವಾಗಿ ನೀರಿನಂಶವಿರುವ ಪದಾರ್ಥ  ಇಳಿಯಬಲ್ಲದು. ನಂತರ  ಉಳಿದ ಗಟ್ಟಿ ಪದಾರ್ಥ ತಿನ್ನುವುದು ಸುಲಭವೆನ್ನುವುದೂ ತಂಬುಳಿಯ ಶೋಧನೆಯ ಹಿಂದಿದೆ.

ಮೆಂತ್ಯೆ, ಒಂದೆಲಗ (ಬ್ರಾಹ್ಮಿ), ಜೀರಿಗೆಯಲ್ಲದೇ ಇತ್ಯಾದಿ ಸೊಪ್ಪುಗಳ ತಂಬುಳಿ ಮಾಡುವ ಕ್ರಮವಿದೆ. ಬೆಳ್ಳುಳ್ಳಿಯ ತಂಬುಳಿಯೂ ಬಹಳ ಚೆನ್ನಾಗಾಗುತ್ತದೆ. ನಾನು ಉಲ್ಲೇಖಿಸುತ್ತಿರುವುದು ಈರುಳ್ಳಿ ತಂಬುಳಿ.

ಮನೆಯ ನಾಲ್ಕು ಜನಕ್ಕೆ, ಒಂದು ಊಟದ ಲೆಕ್ಕದಲ್ಲಿ ಬೇಕಾಗುವ ಸಾಮಾನು

ಮೂರು ಸ್ವಲ್ಪ ದೊಡ್ಡ ಈರುಳ್ಳಿ (ಕುಮಟಾ ಭಾಗದ ಚಿಕ್ಕ  ಈರುಳ್ಳಿಯಾದರೆ ಸುಮಾರು 7-8 ಬೇಕು)

10-15 ಕೊತ್ತಂಬರಿ ಕಾಳು

ಒಂದೆರಡು ಹಸಿಮೆಣಸು

ಎರಡು ಚಮಚ ಎಣ್ಣೆ

ಒಂದು ಚಿಕ್ಕ ಲೋಟ ಮಜ್ಜಿಗೆ

ಸ್ವಲ್ಪ ತೆಂಗಿನಕಾಯಿ

*

ಸಿಪ್ಪೆ ಬಿಡಿಸಿದ ಈರುಳ್ಳಿಯನ್ನು ಸ್ವಲ್ಪ ಸಣ್ಣಗೆ ಚೂರು ಮಾಡಿ, ಒಂದೆರಡು ಚಮಚ  ಎಣ್ಣೆ ಹಾಕಿ, ಈರುಳ್ಳಿಯನ್ನು ಕೆಂಪಗಾಗುವಷ್ಟು ಹುರಿಯಬೇಕು. ಇನ್ನೇನು ಕೆಂಪಗಾಗುತ್ತಿದೆ ಎನ್ನುವಾಗ ಕೊತ್ತಂಬರಿ ಬೀಜವನ್ನು ಹಾಕಿಕೊಂಡು ಹುರಿಯಬೇಕು. ನಂತರ ತುರಿದ ತೆಂಗಿನಕಾಯಿ, ಹಸಿಮೆಣಸನ್ನು ಇದರೊಂದಿಗೆ ಬೆರೆಸಿ ಅರೆಯಬೇಕು. ತದನಂತರ, ಮಜ್ಜಿಗೆಯೊಂದಿಗೆ ಬೆರೆಸಬೇಕು. ಅಗತ್ಯವಿದ್ದರೆ ಒಂದು ಒಗ್ಗರಣೆಯನ್ನು ಕೊಡಬಹುದು.

ಟಿಪ್ಸ್ :

1.  ಅರೆದು ಸಿದ್ಧವಾದ ತಂಬುಳಿಗೆ ಒಗ್ಗರಣೆ ಕೊಡುವಾಗ  ಈರುಳ್ಳಿಯನ್ನು ಚಿಕ್ಕದಾಗಿ ಕತ್ತರಿಸಿ, ಹುರಿದು ಮಿಕ್ಸ್ ಮಾಡಿದರೆ ರುಚಿ ಬಹಳ ಭಿನ್ನವಾಗಿರುತ್ತದೆ.

2. ಕೊತ್ತಂಬರಿ ಬದಲು ಜೀರಿಗೆಯನ್ನೂ ಬಳಸಬಹುದು. ಆದರೆ, ಆಗ ಈರುಳ್ಳಿಯ ಪರಿಮಳ ಬರುವುದು ಕಡಿಮೆ, ಜೀರಿಗೆಯ  ಪರಿಮಳವೇ ಬರುತ್ತದೆ.

3. ಕುಮಟಾದ ಬದಿಯ  ಈರುಳ್ಳಿ ಸ್ವಲ್ಪ ಸಿಹಿ ಅಂಶವನ್ನು ಹೊಂದಿರುವುದರಿಂದ, ಅದನ್ನು ಬಳಸಿದರೆ ಇನ್ನೂ ರುಚಿ.

4. ಒಗ್ಗರಣೆಯ ಸಂದರ್ಭದಲ್ಲಿ ಇಂಗನ್ನೂ ಬಳಸಬೇಡಿ. ಬಳಸಿದರೆ ಅದರ ಪ್ರಯೋಜನವಿರದು.

5. 15 ನಿಮಿಷದಲ್ಲಿ ಮಾಡಿ ಮುಗಿಸಬಹುದಾದ ಪದಾರ್ಥ.

6. ಕೆಂಪು ಮೆಣಸನ್ನೂ ಬಳಸಬಹುದು.

7. ಹೆಚ್ಚು ಮೆಣಸು ಬಳಸಬೇಡಿ. ಊಟದ  ಆರಂಭದಲ್ಲೇ ಖಾರ  ಎನಿಸಿದರೆ ಉಳಿದದ್ದರ ಬಗ್ಗೆ ಆಸಕ್ತಿ ಹೋಗಬಹುದು.

Advertisements