ಈರುಳ್ಳಿ ಪಕೋಡ

ಹೋಟೆಲ್‌ನಲ್ಲಿ ಇರೋ ಈರುಳ್ಳಿ ಪಕೋಡಕ್ಕೆ ಏಕೆ ಅಷ್ಟೊಂದು ರುಚಿ ? – ಈ ಪ್ರಶ್ನೆಯನ್ನು ಹಲವರಿಂದ ಕೇಳಿದ್ದೇನೆ. ನನ್ನ ಮನೆಗೆ ಬರುವ ಅತಿಥಿಗಳಿಂದಲೂ ಸಹ. ಸುಮ್ಮನೆ ಇದನ್ನು ಯೋಚಿಸ್ತಿದ್ದಾಗ ಗರಂ ಗರಿಮುರಿ ಪಕೋಡ ಮಾಡೋಣ ಅನ್ನಿಸ್ತು. ಅದಕ್ಕೇ ಈ ರೆಸಿಪಿ ಹಾಕ್ತೀದ್ದೀನಿ. ಮಾಡಿದ್ಮೇಲೆ ಪ್ರತಿಕ್ರಿಯಿಸಿ.

ಈರುಳ್ಳಿ ಪಕೋಡಕ್ಕೆ ಬಳಸುವ ಸಾಮಾನು : ಈರುಳ್ಳಿ, ಕರಿಬೇವಿನಸೊಪ್ಪು, ಹಸಿಮೆಣಸು, ಹತ್ತು ಕಾಲು ಕೊತ್ತಂಬರಿ ಬೀಜ, ಕಡಲೆಹಿಟ್ಟು, ಸ್ವಲ್ಪ ಎಣ್ಣೆ, ಕರಿಯಲು ಅಗತ್ಯವಿರುವ ಎಣ್ಣೆ, ಉಪ್ಪು ಹಾಕಬೇಕಾದದ್ದು ಗೊತ್ತೇ ಇದೆಯಲ್ಲ.

ಮನೆಯಲ್ಲಿ ಮೂವರಿದ್ದರೆ ದೊಡ್ಡ ಗಾತ್ರದ ನಾಲ್ಕೈದು ಈರುಳ್ಳಿಗಳು ಸಾಕು. ಅದನ್ನು ಎರಡು ಭಾಗ ಮಾಡಿಕೊಂಡು, ಉದ್ದುದ್ದ ಕತ್ತರಿಸಬೇಕು. ಅದು ತೆಳ್ಳಗಿದ್ದಷ್ಟೂ ಪಕೋಡ ಚೆನ್ನಾಗಿ ಬರುತ್ತದೆ. ಕೂದಲಿನಷ್ಟು ತೆಳ್ಳಗಿದ್ದರೆ ಪಕೋಡದ ನಾಜೂಕುತನ ಅರಿವಾಗಬಹುದು. ಹಸಿಮೆಣಸೂ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಚಿಕ್ಕದಾದಷ್ಟೂ ತಿನ್ನುವಾಗ ಖಾರದ ಕಿರಿಕಿರಿಯಾಗದು. ಹುಷಾರ್, ಕೈ ಕೊಯ್ಯಿಕೊಂಡಿದ್ದೀರಿ !

ಹಾಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸನ್ನು ಹಿಟ್ಟು ಕಲೆಸುವ ಪಾತ್ರಕ್ಕೆ ಸುರಿದುಕೊಂಡು, ಕಾಯಲು ಒಲೆಯ ಮೇಲಿಟ್ಟ ಎಣ್ಣೆಯನ್ನು ಸ್ವಲ್ಪ ಎಂದರೆ ಐದಾರು ಚಮಚ ಹಾಕಿಕೊಂಡು ನಾದಬೇಕು. ಬರೀ ಈರುಳ್ಳಿಯನ್ನು ನಾದಿದಾಗ ಅದರೊಳಗಿನ ವಲಯವೆಲ್ಲಾ ಬಿಟ್ಟುಕೊಂಡು ಈರುಳ್ಳಿಯ ಪ್ರತಿ ಬಿಲ್ಲೆಗಳೂ ನೂಲಿನ ಎಳೆಯಂತೆ ಬೇರೆ ಬೇರೆಯಾಗುತ್ತವೆ. ಆಗ ಕೊತ್ತಂಬರಿ ಕಾಳನ್ನು ಕೈಯಲ್ಲೇ ಚೆನ್ನಾಗಿ ತಿಕ್ಕಿ ಹಾಕಿಕೊಳ್ಳಿ. ಉಪ್ಪು ಮಿಶ್ರಣ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಗುಂಪನ್ನು ಮಾಡಿಕೊಳ್ಳಿ ಅಥವಾ ಒಂದು ಭಾಗವನ್ನು ಪ್ರತ್ಯೇಕವಾಗಿರಿಸಿಕೊಳ್ಳಿ.

ಎಣ್ಣೆ ಕಾವು ಬಂದಿದೆಯೇ ನೋಡಿಕೊಂಡು (ತೀರಾ ಹೆಚ್ಚಿನ ಕಾವಿದ್ದರೆ ಕಷ್ಟ) ಪ್ರತ್ಯೇಕವಾಗಿರಿಸಿಕೊಂಡ ಭಾಗದ ಮೇಲೆ ಕಡಲೆಹಿಟ್ಟನ್ನು ಸಿಂಪಡಿಸುವಂತೆ ಹಾಕಬೇಕು. ಐದು ಈರುಳ್ಳಿಗಳ ಪಕೋಡಕ್ಕೆ ಸುಮಾರು ೧೫೦ ರಿಂದ ೧೭೫ ಗ್ರಾಂ ಕಡಲೆ ಹಿಟ್ಟು ಸಾಕು. ಒಮ್ಮೆಲೆ ಸುರಿದು ಕಲೆಸಲು ಹೋಗಬಾರದು. ಜತೆಗೆ ಹಿಟ್ಟು ಹಾಕಿದ ಮೇಲೆ ನಾದಲೂ ಹೋಗಬಾರದು. ಹಿಟ್ಟು ಸಿಂಪಡಿಸಿ ಮೆಲ್ಲಗೆ ನಾಜೂಕಿನಿಂದ ಎಣ್ಣೆಗೆ ಬಿಡುತ್ತಾ ಬರಬೇಕು. ಉಳಿದ ಈರುಳ್ಳಿಗೂ ಹಾಗೆಯೇ ಮಾಡಬೇಕು. ಕೆಂಪನೆಯ ಬಣ್ಣಕ್ಕೆ ಬಂದ ಮೇಲೆ ತೆಗೆಯಬಹುದು. ಕೊನೆಗೆ ಬರೀ ಕರಿಬೇವುಗಳನ್ನು ಕರೆದು ಅದರ ಮೇಲೆ ಅಲಂಕರಿಸಿದರೆ ಈರುಳ್ಳಿ ಪಕೋಡ ರೆಡಿ.
ಇದು ಸಲ್ಲದು :
ಸಾಮಾನ್ಯವಾಗಿ ಎಲ್ಲರೂ ಮಾಡುವುದೆಂದರೆ ಈರುಳ್ಳಿಯೊಂದಿಗೆ ಕಡಲೆಹಿಟ್ಟು ಎಲ್ಲದರಂತೆ ಕಲೆಸಿಬಿಡುತ್ತಾರೆ. ಇನ್ನು ಕೆಲವರು ಅದಕ್ಕೆ ನೀರು ಬೆರೆಸಿ ಕಲೆಸುತ್ತಾರೆ. ಅದೂ ಸಲ್ಲದು. ಇದರಿಂದ ಪಕೋಡ ಗಟ್ಟಿಯಾಗುತ್ತದೆ. ಗರಿಮುರಿ ಬರದು.

Advertisements

ಹೆಸರು ಕಾಳಿನ ಪೊಂಗಲ್

ಹೆಸರುಕಾಳು ಪೊಂಗಲ್ (ನಾಲ್ಕು ಜನಕ್ಕೆ)
ಬೇಕಾಗುವ ಪದಾರ್ಥಗಳು
ಕಾಫಿ ಲೋಟದ ಲೆಕ್ಕದಲ್ಲಿ ಎರಡು ಲೋಟ ಹೆಸರುಕಾಳು, ಒಂದು ಅಕ್ಕಿ, 4 ಅಚ್ಚು ಬೆಲ್ಲ, ಲವಂಗ, ಗೋಡಂಬಿ, ದ್ರಾಕ್ಷಿ.
ಹೆಸರುಕಾಳನ್ನು ಒಂದು ಗಂಟೆ ನೆನೆಹಾಕಬೇಕು. ನಂತರ ಕುಕ್ಕರಿನಲ್ಲಿ ಒಂದು ವಿಷಲ್ ಬೇಯಿಸಬೇಕು. ಒಂದು ವೇಳೆ ನೇರವಾಗಿ ಒಲೆಯ ಮೇಲೆ ಬೇಯಿಸುವುದಾದರೆ ಸುಮಾರು 20 ನಿಮಿಷ ಸಣ್ಣ ಕುದಿಯಲ್ಲಿ ಬೇಯಿಸಬೇಕು. ನಂತರ ತೊಳೆದ ಅಕ್ಕಿಯನ್ನು ಹಾಕುವುದು. ಮುಕ್ಕಾಲು ಭಾಗ ಅಕ್ಕಿ ಬೆಂದ ಮೇಲೆ ಬೆಲ್ಲವನ್ನು ಹುಡಿ ಮಾಡಿಹಾಕುವುದು. ಅದಕ್ಕೆ ಲವಂಗ, ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಿ ಕಲಸುವುದು. ಮತ್ತೆ 5 ನಿಮಿಷ ಕಾಯಿಸಿದ ಮೇಲೆ ಕೆಳಗಿಳಿಸುವುದು.

ಟಿಪ್ಸ್
*ಹೆಸರುಕಾಳನ್ನು ನೆನಸದಿದ್ದರೆ ಎರಡು ವಿಷಲ್ ಕೂಗಿಸಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಅಕ್ಕಿಯ ಜತೆಗೆ ಬೇಗ ಕರಗುವುದಿಲ್ಲ.
* ಒಂದು ವೇಳೆ ಹೆಸರುಕಾಳು ಕುಕ್ಕರಿನಲ್ಲಿ ಹೆಚ್ಚು ಬೆಂದಿದ್ದರೆ (ಅದರ ಸಿಪ್ಪೆ ಬಿಟ್ಟು ಕರಗುವಂತಿದ್ದರೆ) ಅಕ್ಕಿ ಬೆಂದ ಮೇಲೆ ಅದರೊಂದಿಗೆ ಬೆರಸಬೇಕು. ಕಾಳಿನಂತೆಯೇ ಇದ್ದರೆ ಅಕ್ಕಿಯೊಂದಿಗೆ ಬೇಯಿಸಬಹುದು.
* ಅಕ್ಕಿಯೊಂದಿಗೆ ಅರೆ ಬೆಂದ ಹೆಸರುಕಾಳನ್ನೂ ಬೇಯಿಸಿದರೆ ಎರಡು ಧಾನ್ಯಗಳ ನಡುವೆ ಹೊಂದಿಕೆ ಉಂಟಾಗಿ ರುಚಿ ಹೆಚ್ಚುತ್ತದೆ.
* ಬೆಲ್ಲವನ್ನು ಸೇರಿಸಿದ ಮೇಲೆ ಆಗಾಗ್ಗೆ ಸೌಟಿನಿಂದ ತಿರುವುತ್ತಿರಬೇಕು.
* ಬೆಲ್ಲ ಕರಗಿ ಪಾಕ ಉಂಟಾಗುವುದರಿಂದ ತಿರುವದಿದ್ದರೆ ತಳ ಹಿಡಿಯುವುದು ಬೇಗ.

ಹೆಸರುಬೇಳೆ ಸಿಹಿ ಬೋಂಡಾ
ನೂರೈವತ್ತು ಗ್ರಾಂ ಹೆಸರುಬೇಳೆಯನ್ನು ಮೊದಲು ಬೇಯಿಸಿಕೊಳ್ಳಬೇಕು. ನಂತರ ಒಂದು ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಬೇಕು. ಅದಕ್ಕೆ ಸ್ವಲ್ಪ ಏಲಕ್ಕಿ ಬೆರಸಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. 5 ಅಚ್ಚು ಬೆಲ್ಲವನ್ನು ಒಲೆಯ ಮೇಲೆ ಪಾಕವನ್ನಾಗಿ ಮಾಡಿಕೊಳ್ಳಬೇಕು. ನಂತರ ಬೇಯಿಸಿದ ಹೆಸರುಬೇಳೆ ಮತ್ತು ತೆಂಗಿನಕಾಯಿಯನ್ನು ಹಾಕಿ ಸ್ವಲ್ಪ ಬಾಡಿಸಬೇಕು. ಕಂಪು ಬರುವವರೆಗೆ ಅದನ್ನು ಬಾಡಿಸಿ ಒಂದು ಬಟ್ಟಲಿಗೆ ಹಾಕಿ ಆರಲು ಬಿಡಬೇಕು. ಸ್ವಲ್ಪ ಹೊತ್ತಿನ ಬಳಿಕ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಬೇಕು. ಅದಕ್ಕಿಂತ ಒಂದು ಗಂಟೆ ಮೊದಲು ಎರಡು ಮುಷ್ಟಿ ಅಕ್ಕಿಯನ್ನು ನೆನೆಸಿ ದೋಸೆ ಹಿಟ್ಟಿನ ಮಾದರಿಯಲ್ಲಿ ಅರೆದಿಟ್ಟುಕೊಳ್ಳಬೇಕು.
ಆ ಉಂಡೆಯನ್ನು ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಕಾಯಲಿಡಬೇಕು. ಹದ ಕಾವು ಬಂದ ಮೇಲೆ ಅರೆದಿಟ್ಟ ಅಕ್ಕಿ ಹಿಟ್ಟಿನಲ್ಲಿ ಉಂಡೆಗಳನ್ನು ಹಾಕಿ ಬೋಂಡಾ ಬಿಡುವಂತೆ ಎಣ್ಣೆಯಲ್ಲಿ ಕರಿಯಬೇಕು.
ಕೆಂಪಾದ ಮೇಲೆ ತೆಗೆದರೆ ಹೆಸರು ಬೇಳೆ ಸಿಹಿ ಬೋಂಡಾ ರೆಡಿ.

ಟಿಪ್ಸ್
* ಉಂಡೆಯನ್ನು ಕರೆಯಲು ಅರೆದ ಅಕ್ಕಿ ಹಿಟ್ಟಿನ ಬದಲು ಹಸಿ ಹಿಟ್ಟು (ಅಂಗಡಿಯಲ್ಲಿ ದೊರೆಯುವ ಅಕ್ಕಿ ಹಿಟ್ಟು)ನ್ನೂ ಬಳಸಬಹುದು. ಆದರೆ ಅದು ಅಷ್ಟು ಚನ್ನಾಗಿ ಕೂಡಿಕೊಳ್ಳುವುದಿಲ್ಲ.
* ಬೆಲ್ಲದೊಂದಿಗೆ ಹೆಸರುಬೇಳೆ ಮತ್ತು ತೆಂಗಿನಕಾಯಿ ಬಾಡಿಸುವಾಗ ಎಚ್ಚರ ಅವಶ್ಯ. ಇಲ್ಲದಿದ್ದರೆ ಬಲುಬೇಗ ತಳ ಹಿಡಿಯುತ್ತದೆ.
* ಬೆಲ್ಲ ಹಾಕಿದಷ್ಟು ರುಚಿ ಹೆಚ್ಚು. ಹಾಗೆಂದು ಸಿಕ್ಕಾಪಟ್ಟೆ ಹಾಕಿದರೆ ಹೆಚ್ಚು ತಿನ್ನಲು ಆಗದು, ಬಾಯಿ ಕಟ್ಟಿಕೊಳ್ಳುತ್ತದೆ.
* ಇದನ್ನು ಒಂದು ವಾರದವರೆಗೆ ಇಟ್ಟು ತಿನ್ನಬಹುದು.

ಹೆಸರುಕಾಳಿನ ಪಾನಕ
ಹೆಸರುಕಾಳನ್ನು ರಾತ್ರಿಯೇ ನೆನಸಿಡಬೇಕು. ಬೆಳಗ್ಗೆ ಅದನ್ನು ನುಣ್ಣಗೆ ರುಬ್ಬಿ ನಂತರ ತೆಳುವಾದ ಬಟ್ಟೆಯನ್ನು ತೆಗೆದುಕೊಂಡು ಸೋಸಿ ಅದರ ಹಾಲನ್ನು ತೆಗೆಯಬೇಕು. ಅದಕ್ಕೆ ಬೆಲ್ಲ ಬೆರಸಿ ಅಥವಾ ಸಕ್ಕರೆಯನ್ನಾದರೂ ಬೆರಸಬಹುದು. ಏಲಕ್ಕಿಯನ್ನು ಬೆರಸಿಕೊಂಡರೆ ಸುವಾಸನೆಯುಕ್ತ ಪಾನಕ ರೆಡಿ. ಸ್ವಲ್ಪ ಭಿನ್ನವಾದ ರುಚಿಗೆ ನಿಂಬೆಹಣ್ಣನ್ನು ಹಿಂಡಿಕೊಂಡರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

ಹೋಟೆಲಿನಲ್ಲಿ ಮಾಡೋ ಮಂಗಳೂರು ಬಜ್ಜಿ

ಮಂಗಳೂರು ಬಜ್ಜಿಗೆ ಗೋಳಿ ಬಜೆ ಎಂದೂ ಹೆಸರು. ಬಹಳ ಸುಲಭವಾಗಿ ಮಾಡಬಹುದಾದ ತಿಂಡಿಯೂ ಹೌದು.

ಮಧ್ಯಾಹ್ನ ಊಟ ಮಾಡಿ ಮಲಗಿ ಎದ್ದಾಗ ಏನೋ ತಿನ್ನಬೇಕೆನಿಸುತ್ತದೆ. ಆಗ ತಕ್ಷಣವೇ 20 ನಿಮಿಷದಲ್ಲಿ ಮಾಡಬಹುದಾದ ತಿಂಡಿಯೆಂದರೆ ಗೋಳಿಬಜೆ.

ಬೇಕಾಗುವ ವಸ್ತುಗಳು (ನಾಲ್ಕು ಮಂದಿಯ ಅಳತೆಗೆ)
1/4 ಕೆಜಿ ಮೈದಾ ಹಿಟ್ಟು
ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ
ಕರಿಬೇವಿನಸೊಪ್ಪು (5 ಎಸಳು)
ಹಸಿಶುಂಠಿ (ಒಂದು ಸಣ್ಣ ತುಂಡು)
4 ಹಸಿಮೆಣಸು (ಸ್ವಲ್ಪ ಖಾರ ಹೆಚ್ಚು ಬೇಕಾದವರು ಇನ್ನೆರಡು ಮೆಣಸು ಹಾಕಿಕೊಳ್ಳಬಹುದು)
ಚಿಟಿಕೆಯಷ್ಟು ಅಡುಗೆ ಸೋಡಾ
ಕರಿಯಲು ಎಣ್ಣೆ
ಎರಡೂವರೆ ಟೀ ಚಮಚ ಉಪ್ಪು

ಇಷ್ಟಿದ್ದರೆ ಗೋಳಿ ಬಜೆ ಸಿದ್ಧವಾದಂತೆ. ಕರಿಬೇವು, ಹಸಿಮೆಣಸು ಮತ್ತು ಹಸಿಶುಂಠಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟನ್ನು ಕಲೆಸುವ ಯಾವುದಾದರೂ ಪಾತ್ರಕ್ಕೆ (ಬಾಣಲಿ ರೀತಿಯ ಅಗಲ ಪಾತ್ರವಿದ್ದರೆ ಸೂಕ್ತ) ಹಾಕಿಕೊಳ್ಳಿ. ಅದಕ್ಕೆ ಉಪ್ಪು, ಮೈದಾ ಹಿಟ್ಟು ಮತ್ತು ಸೋಡಾ ಬೆರೆಸಿ. ನಂತರ ಮಜ್ಜಿಗೆ ಹಾಕಿ ಸ್ವಲ್ಪ ಹದವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟು ಬಹಳ ನೀರಾಗಿ ಅಥವಾ ಬಹಳ ಗಟ್ಟಿಯಾಗಿರಬಾರದು. ಒಂದು ಮಧ್ಯದ ಹದವಿರಬೇಕು. ನಂತರ ಒಂದೈದು ನಿಮಿಷ ಬಿಡಿ.

ಇಷ್ಟರ ಮಧ್ಯೆ ಹೇಗಿದ್ದರೂ ಒಲೆ ಹೊತ್ತಿಸಿ, ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟಿರುತ್ತೀರಾ. ಅದು ಕಾಯಿತು ಎನ್ನುವಾಗ, ಈ ಹಿಟ್ಟನ್ನು ಮತ್ತೊಮ್ಮೆ ಕಲೆಸಿಕೊಂಡು ಬಜ್ಜಿ ಬಿಡುವಂತೆ ಬೆರಳಿನಲ್ಲಿ ಹಿಟ್ಟನ್ನು ಎಳೆದುಕೊಂಡು ಉಂಡೆ ಉಂಡೆಯಂತೆ ಎಣ್ಣೆಗೆ ಬಿಡುವುದು. ಕೆಂಪಾದ ಮೇಲೆ ತೆಗೆಯುವುದು. ಇದಕ್ಕೆ ಕಾಯಿ ಚಟ್ನಿ ಇದ್ದರೆ ತಿನ್ನಲು ರುಚಿ.

ಕಾಯಿ ಚಟ್ನಿ
1/4 ತೆಂಗಿನಕಾಯಿಯ ತುರಿಗೆ ಎರಡು ಹಸಿಮೆಣಸು, ಬೇಕಾದರೆ ಹತ್ತು ಕಾಳು ಪುಟಾಣಿ (ಉರುಗಡಲೆ) ಬೆರೆಸಬಹುದು. ಇಲ್ಲವಾದರೆ ಕಾಯಿ, ಹಸಿಮೆಣಸು, ಉಪ್ಪು ಹಾಕಿ ಅರೆದು, ಒಂದು ಒಗ್ಗರಣೆ ಕೊಟ್ಟರೆ ಸಾಕು.

ಒಂದಷ್ಟು ಟಿಪ್ಸ್
1. ಮನೆಯಲ್ಲಿ ಮಾಡುವಾಗ ಸ್ವಲ್ಪ ಕಡಿಮೆಯೇ ಸೋಡಾ ಹಾಕಿ. ಇದರಿಂದ ಏನೂ ಆಗದು. ಬಜ್ಜಿ ಸ್ವಲ್ಪ ಗಟ್ಟಿ ಎನಿಸುವುದು ಹೌದು. ಆದರೆ ಇದರಿಂದ ತಿನ್ನುವಾಗ ಸುಸ್ತು ಎನಿಸಲಾರದು.
2. ಹಿಟ್ಟು ನೀರಾದರೆ ಬಜ್ಜಿ ಎಣ್ಣೆಯನ್ನು ಹೆಚ್ಚು ಕುಡಿಯುತ್ತದೆ.
3. ಸೋಡಾ ಜಾಸ್ತಿ ಹಾಕಿದರೆ ಬಜ್ಜಿ ಬಹಳ ಮೃದುವಾಗಿ ಬರುತ್ತದೆ. ಆದರೆ, ಹೆಚ್ಚು ಎಣ್ಣೆಯನ್ನು ಕುಡಿಯುತ್ತದೆ. ಅಲ್ಲದೇ ಸ್ವಲ್ಪ ತಣ್ಣಗಾದ ಕೂಡಲೇ ರಬ್ಬರ್ ಮಾದರಿ ಬಜ್ಜಿ ಆಗುತ್ತದೆ.
4. ಇದಕ್ಕೆ ಕೆಲವರು ಜೀರಿಗೆ ಹಾಕುವುದುಂಟು. ಆದರೆ ಅದನ್ನು ಹಾಕಿದರೆ ಸ್ವಲ್ಪ ಕಹಿ ಎನಿಸುತ್ತದೆ.
5. ಹಿಟ್ಟು ಕಲೆಸುವಾಗ ಪೂರಿ ಹಿಟ್ಟಿನಂತೆ ನಾದಬೇಡಿ. ಹಾಗೆ ಮಾಡಿದರೆ ನಾರಾಗುವ ಸಂಭವವೇ ಹೆಚ್ಚು.

ಕೊಟ್ಟೆ ಕಡುಬು ಮಾಡುವುದು ಹೀಗೆ

ಎಷ್ಟು ದಿನವಾಯ್ತು ರೆಸಿಪಿ ಬರೆಯದೇ. ಯಾವ್ಯಾವುದೋ ಕಾರ್ಯ ಒತ್ತಡ. ಅದಕ್ಕೇ ಸಾಧ್ಯವಾಗಲಿಲ್ಲ. ಕ್ಷಮಿಸಿ.

ಅಂದಹಾಗೆ ಕೊಟ್ಟೆ ಕಡುಬು ಮಾಡೋದು ಹೆಂಗೆ ಗೊತ್ತೇ ? ಇದು ದಕ್ಷಿಣ ಕನ್ನಡದ ಕಡುಬು. ಅದರಲ್ಲೂ ಕುಂದಾಪುರ ಬದಿಯಲ್ಲಿ ಬಹಳ ಹೆಚ್ಚು ಬಳಕೆ. ಬಹುತೇಕ ಹಬ್ಬಗಳಿಗೆ ಇದು ಇದ್ದೇ ಇರುತ್ತೆ. ನನಗಂತೂ ಬಹಳ ಪ್ರಿಯ. ಚೌತಿ ಬಂದರೆ ಇದೇ ನನ್ನ ಪ್ರಿಯವಾದ ಆಹಾರ.

ಬಹಳ ಸುಲಭವಾದ ರೆಸಿಪಿ. ಉದ್ದಿನ ಬೇಳೆ ನೆನೆಸಿ ಅರೆದು, ಅದಕ್ಕೆ ರವೆ ಮಿಶ್ರಣ ಮಾಡಿ ಕಡುಬು ಮಾಡೋದಷ್ಟೇ. ನಿಮ್ಮ ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ಒಂದು ಪಾವು ಉದ್ದನ್ನು ನೀರಿನಲ್ಲಿ ನೆನೆಸಿ. ಸುಮಾರು ಒಂದು ಗಂಟೆ ನಂತರ ಅದನ್ನು ಅರೆಯಬೇಕು. ಚೆನ್ನಾಗಿ ನೀರು ಚಿಮುಕಿಸುತ್ತಾ ಆಗಾಗ್ಗೆ ಹಿಟ್ಟಿಗೆ ಕೈ ಕೊಡುತ್ತಾ ಅರೆದರೆ ಬಹಳ ಚೆನ್ನಾಗಿ ಒದಗುತ್ತದೆ.

ಅನಂತರ ರಾತ್ರಿ ಇದಕ್ಕೆ ಉಪ್ಪು ಮತ್ತು ಮೂರರಷ್ಟು (ಮೂರು ಪಾವು) ಇಡ್ಲಿ ರವೆಯನ್ನು ಚೆನ್ನಾಗಿ ತೊಳೆದು ಮಿಶ್ರಣ ಮಾಡಿಡಬೇಕು. ಬೆಳಗ್ಗೆ ಹುಳಿ ಬಂದಿರುತ್ತದೆ. ಆಗ ಕೊಟ್ಟೆಗೆ ಹಾಕಿ ಬೇಯಿಸುವುದು (ಇಡ್ಲಿ ಬೇಯಿಸದಂತೆ).

ರವೆ ಹೇಗಿರಬೇಕು ?
ಅಂಗಡಿಯಲ್ಲಿ ಸಿಗೋ ಇಡ್ಲಿ ರವೆ ಬಳಸಿ, ಪರವಾಗಿಲ್ಲ. ಇನ್ನೂ ಚೆನ್ನಾಗಿ ಕಡುಬು ಮೃದುವಾಗಿರಬೇಕಾದರೆ, ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ರವೆಯಾಗಿ ಪುಡಿ ಮಾಡಿ ಬಳಸಿದರೆ ಹೆಚ್ಚು ಸೂಕ್ತ.

ಕೊಟ್ಟೆ ಅಂದ್ರೆ ಏನು ?
ಸ್ವಲ್ಪ ಎಳೆಯ ಹಲಸಿನ ಎಲೆಗಳನ್ನು ತೆಗೆದುಕೊಳ್ಳಬೇಕು. ಒಂದು ಕೊಟ್ಟೆಗೆ ನಾಲ್ಕು ಎಲೆ ಅವಶ್ಯ. ಒಂದಕ್ಕೊಂದು ಎದುರುಬದುರಾಗಿಟ್ಟು, ತೆಳುವಾದ ಕಡ್ಡಿಯನ್ನು ಬಳಸಿ ಹೆಣೆಯಬೇಕು. ಅದನ್ನು ಸೆಟೆಯುವುದು ಎನ್ನುತ್ತೇವೆ. (ತೆಂಗಿನಕಡ್ಡಿಯನ್ನು ಸೀಳಿಕೊಂಡು ಬಳಸಬಹುದು, ಇಲ್ಲವಾದರೆ ಬಿದಿರನ್ನುತೆಳ್ಳಗೆ ಸೀಳಿಕೊಂಡರೂ ಆದೀತು). ಅದಕ್ಕೆ ಮತ್ತೊಂದು ಎಲೆ ಸೇರಿಸಿ, ಅದರ ಎದುರಿಗೆ ಮತ್ತೊಂದು ಎಲೆ ಇಟ್ಟು ಕಡ್ಡಿ ಚುಚ್ಚಬೇಕು. ಅನಂತರ ಪೊಟ್ಟಣ ಕಟ್ಟುವಂತೆ ಮುರಿದು ಕಡ್ಡಿಯಿಂದ ಹೆಣೆಯುತ್ತಾ ಬಂದರೆ ಹಿಟ್ಟು ಹಿಡಿಯುವಂತೆ ಲೋಟದ ಮಾದರಿ ಏರ್ಪಡುತ್ತದೆ. (ಚಿತ್ರಗಳನ್ನು ಹಾಕಬೇಕಿತ್ತು, ಸಾಧ್ಯವಾಗಲಿಲ್ಲ. ಸದ್ಯವೇ ಅದನ್ನು ಹಾಕುತ್ತೇನೆ)..

ಈ ಕೊಟ್ಟೆಗೆ ಹಿಟ್ಟನ್ನು ಸುರಿದು ಬೇಯಿಸುವುದು. ನಾವು ಕೊಟ್ಟೆಯನ್ನು ಸೆಟೆಯುವಾಗ ಯಾವುದೇ ಕಾರಣಕ್ಕೂತೂತು ಇರಬಾರದು. ತೂತು ಇದ್ದರೆ ಹಿಟ್ಟು ಸೋರಿ ಹೋಗುತ್ತದೆ. ಆ ಎಚ್ಚರಿಕೆ ಅವಶ್ಯ.

ಜತೆಗೆ ವ್ಯಂಜನ
ಈ ಕಡುಬಿಗೆ ನೆಂಚಿಕೊಳ್ಳಲು ಏನು ಎಂದರೆ ಸೌತೆಕಾಯಿ ಹುಳಿ ಮಾಡಬಹುದು, ಕುಂಬಳಕಾಯಿ ಮಜ್ಜಿಗೆಹುಳಿ, ಮಾವಿನಕಾಯಿ ಮುದ್ದೊಳಿ, ಇಲ್ಲವಾದರೆ ಮಜ್ಜಿಗೆ ಮೆಣಸು ಹುರಿದು, ಒಳ್ಳೆ ಕೊಬ್ಬರಿ ಎಣ್ಣೆ ಹಾಕಿಕೊಂಡು ತಿಂದು ಮುಗಿಸಬಹುದು. ಇದಲ್ಲದೇ ಕಾಯಿಹಾಲನ್ನೂ ಬಳಸಬಹುದು.

ಐದು ಬಗೆಯ ಸೊಪ್ಪಿನ ಹುಳಿ

ಸೊಪ್ಪಿನ ಹುಳಿ ಐದು ಬಗೆಯಲ್ಲಿ ಮಾಡಬಹುದು. ಹರವೆಸೊಪ್ಪು (ಕೀರೆ ಇತ್ಯಾದಿ ಹೆಸರುಗಳಲ್ಲೂ ಕರೆಯುತ್ತಾರೆ) ಬಳಸಿ ಅದ್ಭುತವಾಗಿ ಹುಳಿ ಮಾಡಬಹುದು. ಯಾವಾಗಲೂ ಸೊಪ್ಪಿನ ಹುಳಿ ಮರು ದಿನಕ್ಕೆ ಹೆಚ್ಚು ರುಚಿ ಎನಿಸುತ್ತದೆ.

ನಾಲ್ಕು ಮಂದಿಯ ಕುಟುಂಬಕ್ಕೆ ಎರಡು ಕಟ್ಟು ಸೊಪ್ಪು ಸಾಕು. ಸೊಪ್ಪನ್ನು ಮೊದಲು ಚೆನ್ನಾಗಿ ತೊಳೆದು ಕತ್ತರಿಸಬೇಕು. ನಂತರ ಬೇಯಲು ಒಲೆಯ ಮೇಲೆ ಇಡಿ. ಒಲೆ ಹಚ್ಚುವುದು ಗೊತ್ತೇ ಇದೆ. ಕೂಡಲೇ ಸ್ವಲ್ಪ ಅರಿಶಿನ, ಒಂದು ತುಂಡು ಬೆಲ್ಲ, ಸ್ವಲ್ಪ ಹುಣಸೇಹಣ್ಣು, ಕೊಂಚ ಉಪ್ಪನ್ನು ಹಾಕಿ. ನೀರು ಸ್ವಲ್ಪವಿರಲಿ.

ಬಹಳಷ್ಟು ಬಾರಿ ಉಳಿದ ತರಕಾರಿಗಳಂತೆ ಸೊಪ್ಪಿಗೂ ನೀರು ಜಾಸ್ತಿ ಹಾಕಿಬಿಡಬಾರದು. ಸೊಪ್ಪು ಬೆಂದಂತೆ ಕರಗುವ ಗುಣ ಹೊಂದಿದೆ. ಹಾಗಾಗಿ ಒಮ್ಮೆಲೆ ನೀರು ಜಾಸ್ತಿ ಹಾಕಿದರೆ ಹುಳಿ ಹೋಗಿ ಸಾರು ಮಾದರಿ ಆದೀತು.

ಮೊದಲನೇ ವಿಧಾನ

ಸ್ವಲ್ಪ ಸಾಸಿವೆ (ಎರಡು ಟೀ ಚಮಚ) ಹಾಗೂ ನಾಲ್ಕು ಒಣಮೆಣಸು ಹಾಗೂ ಸ್ವಲ್ಪ ತೆಂಗಿನಕಾಯಿ ಹಾಕಿ ನುಣ್ಣಗೆ ರುಬ್ಬಿ. ನಂತರ ಬೆಂದ ಸೊಪ್ಪಿಗೆ ಬೆರೆಸಿ. ಚೆನ್ನಾಗಿ ಕುದಿ ಬರಲಿ. ಇದು ಒಂದು ರೀತಿಯ ಹುಳಿ. ಸ್ವಲ್ಪ ಸಾಸಿಮೆಯ ಪರಿಮಳ ಬರುತ್ತೆ, ಚೆನ್ನಾಗಿರುತ್ತೆ.

ಎರಡನೇ ವಿಧಾನ

ಮೂರು ಚಮಚ ಕೊತ್ತಂಬರಿಕಾಳು, ಎರಡು ಚಮಚ ಜೀರಿಗೆ ಹಾಗೂ ನಾಲ್ಕು ಒಣಮೆಣಸನ್ನು ಒಟ್ಟಿಗೇ ಸ್ವಲ್ಪ ಹುರಿಯಿರಿ. ಜಾಸ್ತಿ ಉರಿಯಬೇಡಿ. ನಂತರ ಕಾಯಿಯೊಂದಿಗೆ ನುಣ್ಣಗೆ ರುಬ್ಬಿ ಬೆಂದ ಸೊಪ್ಪಿಗೆ ಸೇರಿಸಿ. ಚೆನ್ನಾಗಿ ಕುದಿ ಬರಲಿ. ನಿಮಗೆ ಬೇಕಾದಂತೆ ಅದಕ್ಕೆ ಸ್ವಲ್ಪ ನೀರು, ಉಪ್ಪು ಬೆರೆಸಿ.

ನಂತರ ಒಂದು ಗೆಡ್ಡೆ ಬೆಳ್ಳುಳ್ಳಿಯನ್ನು ಸುಲಿದು, ಅದನ್ನು ಕೆಂಪಗೆ ಕಾಯಿಸಿ ಒಗ್ಗರಣೆ ಕೊಡಿ. ಬಹಳ ಚೆನ್ನಾಗಿರುತ್ತದೆ, ಅದರಲ್ಲೂ ಒಂದು ದಿನದ ನಂತರ ಈ ಹುಳಿ ತಿನ್ನಲೂ ಬಹಳ ರುಚಿ.

ಮೂರನೇ ವಿಧಾನ

ಸೊಪ್ಪು ಬೇಯಿಸುವಾಗ (ಮೇಲಿನ ವಿಧಾನದಂತೆಯೆ ಬೇಯಿಸಬೇಕು) ಅದಕ್ಕೆ ಮೂರು ಹಸಿಮೆಣಸು ಸೀಳಿ ಹಾಕಿ. ಒಂದು ತುಂಡು ಶುಂಠಿಯನ್ನೂ ಸಣ್ಣದಾಗಿ ಕತ್ತರಿಸಿ ಹಾಕಿ. ಅವೆಲ್ಲವೂ ಚೆನ್ನಾಗಿ ಬೆಂದ ಮೇಲೆ ಒಂದು ಸಾಸಿವೆ ಒಗ್ಗರಣೆ ಕೊಟ್ಟು ಬಿಡಿ. ಜಾಸ್ತಿ ನೀರು ಹಾಕದೇ ಸ್ವಲ್ಪ ಗಟ್ಟಿ ಗಟ್ಟಿಯಾಗಿಯೇ ಇರಲಿ. ಇದನ್ನು ಸೊಪ್ಪಿನ ಗಸಿಯಂತಲೂ ಕರೆಯುತ್ತಾರೆ. ಚೆನ್ನಾಗಿರುತ್ತೆ. ಸೊಪ್ಪಿನ ಬೋಳುಹುಳಿ ಎಂತಲೂ ಹೇಳುತ್ತಾರೆ, ಇದಕ್ಕೆ ತೆಂಗಿನಕಾಯಿ ಹಾಕುವುದಿಲ್ಲ.

ನಾಲ್ಕನೇ ವಿಧಾನ

ಕೇವಲ ಮೂರು ಚಮಚ ಕೊತ್ತಂಬರಿ ಕಾಳು ಹಾಗೂ ಹಸಿಮೆಣಸನ್ನು ಹುರಿಯದೇ ಹಸಿಯಾಗಿಯೇ ತೆಂಗಿನಕಾಯಿಯೊಂದಿಗೆ ರುಬ್ಬಿ. ನಂತರ ಬೆಂದ ಸೊಪ್ಪಿನೊಂದಿಗೆ ಸೇರಿಸಿ ಕುದಿಸಿ. ಇದಕ್ಕೆ ಒಣಮೆಣಸನ್ನೂ ಹಾಕಬಹುದು. ಇದೂ ಚೆನ್ನಾಗಿರುತ್ತದೆ.

ಐದನೇ ವಿಧಾನ

ಸೊಪ್ಪನ್ನು ಸ್ವಲ್ಪ ಉಪ್ಪು, ಹುಳಿ, ಬೆಲ್ಲದೊಂದಿಗೆ ಕೊಂಚ ತೊಗರಿಬೇಳೆ ಹಾಕಿ ಬೇಯಿಸಿ. ಚೆನ್ನಾಗಿ ಕರಗುವಂತಾಗಲಿ. ನಂತರ ಕೇವಲ ತೆಂಗಿನಕಾಯಿ ಮತ್ತು ನಾಲ್ಕು ಒಣಮೆಣಸು ಸೇರಿಸಿ ರುಬ್ಬಿ. ಆ ಮಿಶ್ರಣವನ್ನು ಬೆಂದ ಸೊಪ್ಪಿನೊಂದಿಗೆ ಬೆರೆಸಿ ಕುದಿಸಿ. ಇದೂ ಬಹಳ ಚೆನ್ನಾಗಿರುತ್ತೆ. ಮುದ್ದೆ ಇತ್ಯಾದಿಗಳಿಗೆ ರುಚಿ.

ಟಿಪ್ಸ್

* ಸೊಪ್ಪು ಯಾವಾಗಲೂ ಚಪ್ಪೆ ಚಪ್ಪೆ ಇರುತ್ತದೆ. ಹಾಗಾಗಿ ಉಪ್ಪು, ಹುಳಿ, ಬೆಲ್ಲ ಒಟ್ಟಿಗೇ ಹಾಕಿ ಬೇಯಿಸಿದರೆ ಸೊಪ್ಪು ಅವೆಲ್ಲವನ್ನೂ ಹೀರಿಕೊಂಡು ಬೇಯುತ್ತೆ. ತಿನ್ನಲೂ ರುಚಿ

* ತರಕಾರಿಗಳನ್ನು ಬೇಯಿಸುವಾಗ ಉಪ್ಪು, ಹುಳಿ ಹಾಕಿದರೆ ಬೇಗ ಬೇಯೊಲ್ಲ ಎನ್ನುವ ಮಾತಿದೆ. ಅದು ಸೊಪ್ಪಿಗೆ ಅನ್ವಯಿಸದು.

* ಬೆಳ್ಳುಳ್ಳಿ ಒಗ್ಗರಣೆ ಕೊಡುವುದಕ್ಕೆ ಒಂದು ಕಾರಣವಿದೆ. ಸೊಪ್ಪು ಶೀತವಾಯು ಗುಣವುಳ್ಳದ್ದು. ಅದಕ್ಕೆ ಬೆಳ್ಳುಳ್ಳಿಯ ಒಗ್ಗರಣೆ ಕೊಟ್ಟರೆ ಶೀತವಾಯುವಿನಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು. ಹಾಗೆಯೇ ಶುಂಠಿ ಬಳಸುವುದೂ ಅದಕ್ಕೇ.

* ಸದಾ ಸೊಪ್ಪಿನ ಹುಳಿಗೆ ತೊಗರಿ ಬೇಳೆ ಬೇಕೆಂದೇನೂ ಇಲ್ಲ. ಅದಿಲ್ಲದೆಯೂ ಮಾಡಬಹುದು.

* ಇದೇ ರೀತಿ ಹುಳಿದ ಸೊಪ್ಪುಗಳ ಹುಳಿಯನ್ನೂ ಮಾಡಬಹುದು. ಹುಳಿಸೊಪ್ಪು ಎಂದೇ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಬೇಯಿಸುವಾಗ ಮತ್ತೆ ಹುಳಿ ಹಾಕುವ ಅಗತ್ಯವಿಲ್ಲ.

ಕದಿಯೋದು ಅಂದ್ರೆ ಹೀಗೆ ಕದೀಬೇಕು…ನಾಚಿಕೆ ಬಿಟ್ಟು !

ನನ್ನ ಈ ಮಾತು ಹೇಳುತ್ತಿರುವುದು ಸುಮ್ಮನೆ ಅಲ್ಲ. ಹಳೇ ರುಚಿ ಬ್ಲಾಗ್ ಸ್ಪಾಟ್ ನಡೆಸೋವರು “ಗೋಪಿಕಾಳ ಅಡುಗೆ ಮನೆಯಿಂದ” ಎನ್ನೋ ಹೆಸರಿನ ಬ್ಲಾಗಿನಲ್ಲಿ ನನ್ನ ಪಾಕಶಾಲೆಯಿಂದ ಯಥಾವತ್ತಾಗಿ ಕದಿಯಲಾಗಿದೆ.

“ಬ್ಯಾಚುಲರ್ ಕಿಚನ್’ ನಲ್ಲಿ ಬೆಳ್ಳುಳ್ಳಿ ಅನ್ನ ಎನ್ನೋ ಶೀರ್ಷಿಕೆಯಡಿ ನಾನು ಪ್ರಕಟಿಸಿದ್ದು ಏಪ್ರಿಲ್ 23, 2009 ರಂದು. ಗೋಪಿಕಾಳ ಅಡುಗೆ ಮನೆಯಲ್ಲಿ ಪ್ರಕಟವಾಗಿರುವುದು ಜುಲೈ 31 ರಂದು 2009 ರಲ್ಲಿ.

ಇಷ್ಟು ದಿನವಾದರೂ ಈ ಕದ್ದದ್ದು ನನಗೆ ತಿಳಿದೆ ಇರಲಿಲ್ಲ. ಕೆಲವು ನನ್ನ ಬ್ಲಾಗ್ ನ ಕಾಯಂ ಓದುಗರು ಇಮೇಲ್ ಮಾಡಿ ಎಚ್ಚರಿಸಿದಾಗಲೇ ತಿಳಿದದ್ದು.

ನನ್ನ ಲೇಖನದ ಶೀರ್ಷಿಕೆಯಿಂದ ಹಿಡಿದು ಪ್ರತಿ ಪದವನ್ನೂ ಹಾಗೆಯೇ ಕದಿಯಲಾಗಿದೆ. ಅವರು ಮಾಡಿದ ಮಹಾನ್ ಸಾಧನೆಯೆಂದರೆ ಒಂದು ಫೋಟೋ ಹಾಕಿರುವುದು, ಅದು ಎಲ್ಲಿಂದ ಕದ್ದದ್ದೋ ಗೊತ್ತಿಲ್ಲ. ಟಿಪ್ಸ್ ನಿಂದ ಹಿಡಿದು ಎಲ್ಲವನ್ನೂ ಹಾಗೆಯೇ ಯಥಾವತ್ತಾಗಿ ಕದಿಯುವುದೆಂದರೆ ನಿಜಕ್ಕೂ ನಾಚಿಕೆಗೇಡು.

ಒಂದುವೇಳೆ ನನ್ನ ಪೋಸ್ಟ್ ಅನ್ನು ಅವರು ಬಳಸುವಾಗ ಎಲ್ಲಿಯಾದರೂ ಒಂದೆಡೆ ನನ್ನ ಬ್ಲಾಗ್ ನ ಹೆಸರು ಉಲ್ಲೇಖಿಸಬೇಕಿತ್ತು. ಹೀಗೆ ಕದ್ದು ವೀರರಾಗುವವರಿಗೆ ಏನೆಂದು ಕರೆಯಬೇಕೋ ಗೊತ್ತಿಲ್ಲ, ನೀವೇ ಯಾರಾದರೂ ಹೇಳಬೇಕು. ಹೀಗೆ ಮಾಡಿದವರು ತಮ್ಮ ಹೆಸರನ್ನು ರವೀಂದ್ರ ಹೆಗಡಾಲ್ ಎಂದು ಕರೆದುಕೊಂಡಿದ್ದಾರೆ….ಹೀಗೆ ಕದಿಯೋವರಿಗೆ ಜೈ ಹೋ ಎನ್ನಬೇಕು !