ಮಸಾಲೆ ವಡೆ

ಹೊಸ ರುಚಿ ಬರೆಯದೇ ಐದು ತಿಂಗಳಾಯಿತು. ಹೀಗೇ ಏನೋ ಕೆಲಸ, ಅದರ ಮಧ್ಯೆ ಬಿಡುವು ಮಾಡಿಕೊಂಡರೂ ಮತ್ತೇನೋ ಕಿರಿಕಿರಿ. ಒಟ್ಟೂ ಐದು ತಿಂಗಳು ಕಳೆದದ್ದೇ ತಿಳಿಯಲಿಲ್ಲ.

ಮಸಾಲೆ ವಡೆ ಮಾಡೋದು ಹೇಗೆ?

ಎರಡು ಮುಷ್ಟಿಯಷ್ಟು ಕಡ್ಲೆಬೇಳೆ, ಸ್ವಲ್ಪವೇ ಸ್ವಲ್ಪ ಉದ್ದಿನಬೇಳೆ ನೀರಿನಲ್ಲಿ ನೆನಸಿಡಿ. ಸುಮಾರು ಒಂದುಗಂಟೆಯಷ್ಟು ನೆನೆಯಲಿ. ಉದ್ದಿನಬೇಳೆ ಸ್ವಲ್ಪಕ್ಕಿಂತ ಹೆಚ್ಚಾಗಬಾರದು. ಅನಂತರ ಚೆನ್ನಾಗಿ ತೊಳೆದು ಗ್ರೈಂಡರ್ ನಲ್ಲಾದರೆ ಒಂದೆರಡು ಸುತ್ತು ಸುತ್ತಿ. ಮಿಕ್ಸಿಯಲ್ಲಾದರೂ ಹಾಕಿ ತೆಗೆದರೆ ಸಾಕು.

ಅದಕ್ಕೆ ಶುಂಠಿ, ಕರಿಬೇವು, ಬೇಕಿದ್ದರೆ ಕೊಬ್ಬರಿ-ತೆಂಗಿನಕಾಯಿ ತುಂಡು ಹಾಕಿ.ಇವೆಲ್ಲವೂ ಸಣ್ಣಗೆ ಕತ್ತರಿಸಿರಬೇಕು. ಆಮೇಲೆ ಉಪ್ಪು ಹಾಕಿ ಕಲಸಿ. ಒಲೆಯ ಮೇಲೆ ಇಟ್ಟ ಎಣ್ಣೆ ಹದ ಕಾವು ಬಂದ ಕೂಡಲೇ, ಕಲಸಿಟ್ಟ ಹಿಟ್ಟನ್ನು ಸಣ್ಣ ಸಣ್ಣಗೆ ಉಂಡೆ ಮಾಡಿ, ಕೈಯಲ್ಲಿ ತಟ್ಟಿ ಎಣ್ಣೆಗೆ ಬಿಡಿ.  ಕೆಂಪಗಾಗುತ್ತಿದ್ದಂತೆ ತೆಗೆದು ಇಟ್ಟರೆ ಮುಗಿಯಿತು.

ಈರುಳ್ಳಿ ಹಾಕಬೇಕೇ ? ಬೇಡವೇ?

ಈರುಳ್ಳಿ ಸಾಮಾನ್ಯವಾಗಿ ಮಸಾಲೆ ವಡೆಗೆ ಹಾಕುವವರೂ ಇದ್ದಾರೆ, ಹಾಕದೇ ಇದ್ದವರೂ ಇದ್ದಾರೆ. ಹೋಟೆಲ್, ತಿಂಡಿಗಾಡಿಗಳಲ್ಲಿ ಈರುಳ್ಳಿ ಹಾಕುತ್ತಾರೆ. ಆದರೆ, ಈರುಳ್ಳಿ ಹಾಕದಿದ್ದರೆ ಬೇರೆ ರುಚಿ, ಹಾಕಿದರೇ ಬೇರೆ ರುಚಿ.

ಟಿಪ್ಸ್ 

1. ಈರುಳ್ಳಿ ಹಾಕಿದರೆ ಕಡ್ಲೆಬೇಳೆ ವಡೆ ಗರಿಗರಿಯಾಗಿರದು.

2. ಈರುಳ್ಳಿ ಹಾಕಿದರೆ, ಮಾರನೇ ದಿನ ಇಟ್ಟ ವಡೆ ತಿನ್ನಲು ಕಷ್ಟ.

3. ಈರುಳ್ಳಿ ಹಾಕದಿದ್ದರೆ ಮೂರು ದಿನ ವಡೆ ಇಟ್ಟರೂ ಹಾಳಾಗದು.

4. ಈರುಳ್ಳಿ ಹಾಕದಿದ್ದರೆ, ಸ್ವಲ್ಪ ಇಂಗನ್ನು ಹಾಕಬಹುದು. ಆದರೆ, ಅದೇನೋ ರುಚಿಯಲ್ಲಿ ದೊಡ್ಡ ವ್ಯತ್ಯಾಸವೇನನ್ನೂ ಮಾಡದು. ಇಂಗು, ವಾಯುವಿನ ಅಂಶವನ್ನು ಕೊಲ್ಲುತ್ತದೆ.

5. ಎಣ್ಣೆ ಜೋರಾದ ಕಾವಿರುವುದು ಬೇಡ. ಹದ ಕಾವಿನಲ್ಲಿ ವಡೆ ಕರಿದರೆ, ಚೆನ್ನಾಗಿ ಬೇಯುತ್ತದೆ.

6. ಹಾಗೆಂದು ಬಹಳ ಎಳೆ ಕಾವಿನಲ್ಲಿಟ್ಟರೆ, ಎಣ್ಣೆ ಕುಡಿಯುತ್ತದೆ.

7. ಉದ್ದಿನಬೇಳೆ, ಕಡ್ಲೆಬೇಳೆಯಲ್ಲಿರುವ ಸ್ಟಿಫ್ಟೆಸ್ (ಗಡಸುಗುಣ)ವನ್ನು ಕಡಿಮೆಗೊಳಿಸಿ, ಮೃದುವಾಗಿಸುತ್ತದೆ.

8. ಸಾಮಾನ್ಯವಾಗಿ ಶುಂಠಿ ಹಾಕಿದರೆ, ಇಂಗು ಹಾಕುವುದು ಬೇಡ. ಎರಡಕ್ಕೂ ಘಾಟಿನ ಗುಣವಿದ್ದು, ಒಂದನ್ನು ಮತ್ತೊಂದು ಹತ್ತಿಕ್ಕುತ್ತದೆ.

9. ಬೇಳೆ ಕನಿಷ್ಠ ಒಂದು ಗಂಟೆ ನೆನೆಸಿದರೆ ಸಾಕು, ಅದಕ್ಕಿಂತ ಮೊದಲು ತೆಗೆದರೆ ಬೇಳೆ ಸರಿಯಾಗಿ ಮೃದುವಾಗಿರದು. ಆಗ ಅರೆದರೂ ವಡೆಯಲ್ಲಿ ಕಾಂತಿ ಇರದು.

10. ಇದಕ್ಕೆ ಸೊಪ್ಪು (ಕೊತ್ತಂಬರಿ, ಅರವೆ ಸೊಪ್ಪು) ಇತ್ಯಾದಿಯನ್ನು ಹಾಕಿ ಸೊಪ್ಪಿನ ವಡೆಯನ್ನೂ ಮಾಡಬಹುದು.

Advertisements

ಈರುಳ್ಳಿ ಪಕೋಡ

ಹೋಟೆಲ್‌ನಲ್ಲಿ ಇರೋ ಈರುಳ್ಳಿ ಪಕೋಡಕ್ಕೆ ಏಕೆ ಅಷ್ಟೊಂದು ರುಚಿ ? – ಈ ಪ್ರಶ್ನೆಯನ್ನು ಹಲವರಿಂದ ಕೇಳಿದ್ದೇನೆ. ನನ್ನ ಮನೆಗೆ ಬರುವ ಅತಿಥಿಗಳಿಂದಲೂ ಸಹ. ಸುಮ್ಮನೆ ಇದನ್ನು ಯೋಚಿಸ್ತಿದ್ದಾಗ ಗರಂ ಗರಿಮುರಿ ಪಕೋಡ ಮಾಡೋಣ ಅನ್ನಿಸ್ತು. ಅದಕ್ಕೇ ಈ ರೆಸಿಪಿ ಹಾಕ್ತೀದ್ದೀನಿ. ಮಾಡಿದ್ಮೇಲೆ ಪ್ರತಿಕ್ರಿಯಿಸಿ.

ಈರುಳ್ಳಿ ಪಕೋಡಕ್ಕೆ ಬಳಸುವ ಸಾಮಾನು : ಈರುಳ್ಳಿ, ಕರಿಬೇವಿನಸೊಪ್ಪು, ಹಸಿಮೆಣಸು, ಹತ್ತು ಕಾಲು ಕೊತ್ತಂಬರಿ ಬೀಜ, ಕಡಲೆಹಿಟ್ಟು, ಸ್ವಲ್ಪ ಎಣ್ಣೆ, ಕರಿಯಲು ಅಗತ್ಯವಿರುವ ಎಣ್ಣೆ, ಉಪ್ಪು ಹಾಕಬೇಕಾದದ್ದು ಗೊತ್ತೇ ಇದೆಯಲ್ಲ.

ಮನೆಯಲ್ಲಿ ಮೂವರಿದ್ದರೆ ದೊಡ್ಡ ಗಾತ್ರದ ನಾಲ್ಕೈದು ಈರುಳ್ಳಿಗಳು ಸಾಕು. ಅದನ್ನು ಎರಡು ಭಾಗ ಮಾಡಿಕೊಂಡು, ಉದ್ದುದ್ದ ಕತ್ತರಿಸಬೇಕು. ಅದು ತೆಳ್ಳಗಿದ್ದಷ್ಟೂ ಪಕೋಡ ಚೆನ್ನಾಗಿ ಬರುತ್ತದೆ. ಕೂದಲಿನಷ್ಟು ತೆಳ್ಳಗಿದ್ದರೆ ಪಕೋಡದ ನಾಜೂಕುತನ ಅರಿವಾಗಬಹುದು. ಹಸಿಮೆಣಸೂ ಚಿಕ್ಕದ್ದಾಗಿ ಕತ್ತರಿಸಿಕೊಳ್ಳಿ. ಚಿಕ್ಕದಾದಷ್ಟೂ ತಿನ್ನುವಾಗ ಖಾರದ ಕಿರಿಕಿರಿಯಾಗದು. ಹುಷಾರ್, ಕೈ ಕೊಯ್ಯಿಕೊಂಡಿದ್ದೀರಿ !

ಹಾಗೆ ಕತ್ತರಿಸಿದ ಈರುಳ್ಳಿ, ಹಸಿಮೆಣಸನ್ನು ಹಿಟ್ಟು ಕಲೆಸುವ ಪಾತ್ರಕ್ಕೆ ಸುರಿದುಕೊಂಡು, ಕಾಯಲು ಒಲೆಯ ಮೇಲಿಟ್ಟ ಎಣ್ಣೆಯನ್ನು ಸ್ವಲ್ಪ ಎಂದರೆ ಐದಾರು ಚಮಚ ಹಾಕಿಕೊಂಡು ನಾದಬೇಕು. ಬರೀ ಈರುಳ್ಳಿಯನ್ನು ನಾದಿದಾಗ ಅದರೊಳಗಿನ ವಲಯವೆಲ್ಲಾ ಬಿಟ್ಟುಕೊಂಡು ಈರುಳ್ಳಿಯ ಪ್ರತಿ ಬಿಲ್ಲೆಗಳೂ ನೂಲಿನ ಎಳೆಯಂತೆ ಬೇರೆ ಬೇರೆಯಾಗುತ್ತವೆ. ಆಗ ಕೊತ್ತಂಬರಿ ಕಾಳನ್ನು ಕೈಯಲ್ಲೇ ಚೆನ್ನಾಗಿ ತಿಕ್ಕಿ ಹಾಕಿಕೊಳ್ಳಿ. ಉಪ್ಪು ಮಿಶ್ರಣ ಮಾಡಿಕೊಳ್ಳಿ. ನಂತರ ಸಣ್ಣ ಸಣ್ಣ ಗುಂಪನ್ನು ಮಾಡಿಕೊಳ್ಳಿ ಅಥವಾ ಒಂದು ಭಾಗವನ್ನು ಪ್ರತ್ಯೇಕವಾಗಿರಿಸಿಕೊಳ್ಳಿ.

ಎಣ್ಣೆ ಕಾವು ಬಂದಿದೆಯೇ ನೋಡಿಕೊಂಡು (ತೀರಾ ಹೆಚ್ಚಿನ ಕಾವಿದ್ದರೆ ಕಷ್ಟ) ಪ್ರತ್ಯೇಕವಾಗಿರಿಸಿಕೊಂಡ ಭಾಗದ ಮೇಲೆ ಕಡಲೆಹಿಟ್ಟನ್ನು ಸಿಂಪಡಿಸುವಂತೆ ಹಾಕಬೇಕು. ಐದು ಈರುಳ್ಳಿಗಳ ಪಕೋಡಕ್ಕೆ ಸುಮಾರು ೧೫೦ ರಿಂದ ೧೭೫ ಗ್ರಾಂ ಕಡಲೆ ಹಿಟ್ಟು ಸಾಕು. ಒಮ್ಮೆಲೆ ಸುರಿದು ಕಲೆಸಲು ಹೋಗಬಾರದು. ಜತೆಗೆ ಹಿಟ್ಟು ಹಾಕಿದ ಮೇಲೆ ನಾದಲೂ ಹೋಗಬಾರದು. ಹಿಟ್ಟು ಸಿಂಪಡಿಸಿ ಮೆಲ್ಲಗೆ ನಾಜೂಕಿನಿಂದ ಎಣ್ಣೆಗೆ ಬಿಡುತ್ತಾ ಬರಬೇಕು. ಉಳಿದ ಈರುಳ್ಳಿಗೂ ಹಾಗೆಯೇ ಮಾಡಬೇಕು. ಕೆಂಪನೆಯ ಬಣ್ಣಕ್ಕೆ ಬಂದ ಮೇಲೆ ತೆಗೆಯಬಹುದು. ಕೊನೆಗೆ ಬರೀ ಕರಿಬೇವುಗಳನ್ನು ಕರೆದು ಅದರ ಮೇಲೆ ಅಲಂಕರಿಸಿದರೆ ಈರುಳ್ಳಿ ಪಕೋಡ ರೆಡಿ.
ಇದು ಸಲ್ಲದು :
ಸಾಮಾನ್ಯವಾಗಿ ಎಲ್ಲರೂ ಮಾಡುವುದೆಂದರೆ ಈರುಳ್ಳಿಯೊಂದಿಗೆ ಕಡಲೆಹಿಟ್ಟು ಎಲ್ಲದರಂತೆ ಕಲೆಸಿಬಿಡುತ್ತಾರೆ. ಇನ್ನು ಕೆಲವರು ಅದಕ್ಕೆ ನೀರು ಬೆರೆಸಿ ಕಲೆಸುತ್ತಾರೆ. ಅದೂ ಸಲ್ಲದು. ಇದರಿಂದ ಪಕೋಡ ಗಟ್ಟಿಯಾಗುತ್ತದೆ. ಗರಿಮುರಿ ಬರದು.

ಹೋಟೆಲಿನಲ್ಲಿ ಮಾಡೋ ಮಂಗಳೂರು ಬಜ್ಜಿ

ಮಂಗಳೂರು ಬಜ್ಜಿಗೆ ಗೋಳಿ ಬಜೆ ಎಂದೂ ಹೆಸರು. ಬಹಳ ಸುಲಭವಾಗಿ ಮಾಡಬಹುದಾದ ತಿಂಡಿಯೂ ಹೌದು.

ಮಧ್ಯಾಹ್ನ ಊಟ ಮಾಡಿ ಮಲಗಿ ಎದ್ದಾಗ ಏನೋ ತಿನ್ನಬೇಕೆನಿಸುತ್ತದೆ. ಆಗ ತಕ್ಷಣವೇ 20 ನಿಮಿಷದಲ್ಲಿ ಮಾಡಬಹುದಾದ ತಿಂಡಿಯೆಂದರೆ ಗೋಳಿಬಜೆ.

ಬೇಕಾಗುವ ವಸ್ತುಗಳು (ನಾಲ್ಕು ಮಂದಿಯ ಅಳತೆಗೆ)
1/4 ಕೆಜಿ ಮೈದಾ ಹಿಟ್ಟು
ಸ್ವಲ್ಪ ಹುಳಿ ಮೊಸರು ಅಥವಾ ಮಜ್ಜಿಗೆ
ಕರಿಬೇವಿನಸೊಪ್ಪು (5 ಎಸಳು)
ಹಸಿಶುಂಠಿ (ಒಂದು ಸಣ್ಣ ತುಂಡು)
4 ಹಸಿಮೆಣಸು (ಸ್ವಲ್ಪ ಖಾರ ಹೆಚ್ಚು ಬೇಕಾದವರು ಇನ್ನೆರಡು ಮೆಣಸು ಹಾಕಿಕೊಳ್ಳಬಹುದು)
ಚಿಟಿಕೆಯಷ್ಟು ಅಡುಗೆ ಸೋಡಾ
ಕರಿಯಲು ಎಣ್ಣೆ
ಎರಡೂವರೆ ಟೀ ಚಮಚ ಉಪ್ಪು

ಇಷ್ಟಿದ್ದರೆ ಗೋಳಿ ಬಜೆ ಸಿದ್ಧವಾದಂತೆ. ಕರಿಬೇವು, ಹಸಿಮೆಣಸು ಮತ್ತು ಹಸಿಶುಂಠಿಯನ್ನು ಸಣ್ಣಗೆ ಕತ್ತರಿಸಿಕೊಂಡು ಹಿಟ್ಟನ್ನು ಕಲೆಸುವ ಯಾವುದಾದರೂ ಪಾತ್ರಕ್ಕೆ (ಬಾಣಲಿ ರೀತಿಯ ಅಗಲ ಪಾತ್ರವಿದ್ದರೆ ಸೂಕ್ತ) ಹಾಕಿಕೊಳ್ಳಿ. ಅದಕ್ಕೆ ಉಪ್ಪು, ಮೈದಾ ಹಿಟ್ಟು ಮತ್ತು ಸೋಡಾ ಬೆರೆಸಿ. ನಂತರ ಮಜ್ಜಿಗೆ ಹಾಕಿ ಸ್ವಲ್ಪ ಹದವಾಗಿ ಕಲೆಸಿಕೊಳ್ಳಿ. ಕಲೆಸಿದ ಹಿಟ್ಟು ಬಹಳ ನೀರಾಗಿ ಅಥವಾ ಬಹಳ ಗಟ್ಟಿಯಾಗಿರಬಾರದು. ಒಂದು ಮಧ್ಯದ ಹದವಿರಬೇಕು. ನಂತರ ಒಂದೈದು ನಿಮಿಷ ಬಿಡಿ.

ಇಷ್ಟರ ಮಧ್ಯೆ ಹೇಗಿದ್ದರೂ ಒಲೆ ಹೊತ್ತಿಸಿ, ಸಣ್ಣ ಉರಿಯಲ್ಲಿ ಬಾಣಲೆಯಲ್ಲಿ ಎಣ್ಣೆ ಕಾಯಲು ಇಟ್ಟಿರುತ್ತೀರಾ. ಅದು ಕಾಯಿತು ಎನ್ನುವಾಗ, ಈ ಹಿಟ್ಟನ್ನು ಮತ್ತೊಮ್ಮೆ ಕಲೆಸಿಕೊಂಡು ಬಜ್ಜಿ ಬಿಡುವಂತೆ ಬೆರಳಿನಲ್ಲಿ ಹಿಟ್ಟನ್ನು ಎಳೆದುಕೊಂಡು ಉಂಡೆ ಉಂಡೆಯಂತೆ ಎಣ್ಣೆಗೆ ಬಿಡುವುದು. ಕೆಂಪಾದ ಮೇಲೆ ತೆಗೆಯುವುದು. ಇದಕ್ಕೆ ಕಾಯಿ ಚಟ್ನಿ ಇದ್ದರೆ ತಿನ್ನಲು ರುಚಿ.

ಕಾಯಿ ಚಟ್ನಿ
1/4 ತೆಂಗಿನಕಾಯಿಯ ತುರಿಗೆ ಎರಡು ಹಸಿಮೆಣಸು, ಬೇಕಾದರೆ ಹತ್ತು ಕಾಳು ಪುಟಾಣಿ (ಉರುಗಡಲೆ) ಬೆರೆಸಬಹುದು. ಇಲ್ಲವಾದರೆ ಕಾಯಿ, ಹಸಿಮೆಣಸು, ಉಪ್ಪು ಹಾಕಿ ಅರೆದು, ಒಂದು ಒಗ್ಗರಣೆ ಕೊಟ್ಟರೆ ಸಾಕು.

ಒಂದಷ್ಟು ಟಿಪ್ಸ್
1. ಮನೆಯಲ್ಲಿ ಮಾಡುವಾಗ ಸ್ವಲ್ಪ ಕಡಿಮೆಯೇ ಸೋಡಾ ಹಾಕಿ. ಇದರಿಂದ ಏನೂ ಆಗದು. ಬಜ್ಜಿ ಸ್ವಲ್ಪ ಗಟ್ಟಿ ಎನಿಸುವುದು ಹೌದು. ಆದರೆ ಇದರಿಂದ ತಿನ್ನುವಾಗ ಸುಸ್ತು ಎನಿಸಲಾರದು.
2. ಹಿಟ್ಟು ನೀರಾದರೆ ಬಜ್ಜಿ ಎಣ್ಣೆಯನ್ನು ಹೆಚ್ಚು ಕುಡಿಯುತ್ತದೆ.
3. ಸೋಡಾ ಜಾಸ್ತಿ ಹಾಕಿದರೆ ಬಜ್ಜಿ ಬಹಳ ಮೃದುವಾಗಿ ಬರುತ್ತದೆ. ಆದರೆ, ಹೆಚ್ಚು ಎಣ್ಣೆಯನ್ನು ಕುಡಿಯುತ್ತದೆ. ಅಲ್ಲದೇ ಸ್ವಲ್ಪ ತಣ್ಣಗಾದ ಕೂಡಲೇ ರಬ್ಬರ್ ಮಾದರಿ ಬಜ್ಜಿ ಆಗುತ್ತದೆ.
4. ಇದಕ್ಕೆ ಕೆಲವರು ಜೀರಿಗೆ ಹಾಕುವುದುಂಟು. ಆದರೆ ಅದನ್ನು ಹಾಕಿದರೆ ಸ್ವಲ್ಪ ಕಹಿ ಎನಿಸುತ್ತದೆ.
5. ಹಿಟ್ಟು ಕಲೆಸುವಾಗ ಪೂರಿ ಹಿಟ್ಟಿನಂತೆ ನಾದಬೇಡಿ. ಹಾಗೆ ಮಾಡಿದರೆ ನಾರಾಗುವ ಸಂಭವವೇ ಹೆಚ್ಚು.