ಬ್ಯಾಚುಲರ್ ಕಿಚನ್ ನಲ್ಲಿ ಎರಡು ಬಗೆ ಅನ್ನಗಳು !

ಬಹಳ ದಿನಗಳಾಗಿತ್ತು ಹೊಸ ತಿಂಡಿ ಅಥವಾ ಪದಾರ್ಥ ಬರೆಯದೇ. ಯಾವುದ್ಯಾವುದೋ ಕೆಲಸದ ಒತ್ತಡ. ಬಂದವರೆಲ್ಲಾ ಏನಾದ್ರೂ ಹಾಕಿ ಎಂದು ಆಗ್ರಹಿಸುತ್ತಲೇ ಇದ್ದಾರೆ. ಹೇಗಾದರೂ ಮಾಡಿ ಬ್ಲಾಗ್ ಅನ್ನು ಸಕ್ರಿಯಗೊಳಿಸಬೇಕು ಇಲ್ಲವೇ ಮುಚ್ಚಿಬಿಡಬೇಕು ಎಂದು ಆಲೋಚಿಸುತ್ತಿದ್ದೇನೆ. ಎರಡೂ ಆಗುತ್ತಿಲ್ಲ. ಇನ್ನು ಮುಂದಾದರೂ ಬ್ಲಾಗ್ ನ್ನು ಸಕ್ರಿಯಗೊಳಿಸಲು ಮೊದಲಿಗೆ ಪ್ರಯತ್ನಿಸುತ್ತೇನೆ, ಇಲ್ಲವಾದರೆ ಮುಚ್ಚಿ ಬಿಡುತ್ತೇನೆ.

ನಮ್ಮ ಬ್ಯಾಚುಲರ್ ಗಳದ್ದೇ ಕಷ್ಟ. ಅದಕ್ಕಾಗಿ ಬಹಳ ದಿನಗಳಾದ ಮೇಲೆ ಬ್ಯಾಚುಲರ್ ಗಳಿಗೆ ಸುಲಭವಾಗೋ ಐಟಂ ಬರೀತಾ ಇದ್ದೇನೆ. ಸಾಮಾನ್ಯವಾಗಿ ಯಾವಾಗಲೂ ಚಿತ್ತಾನ್ನ ಮಾಡಿಯೋ, ಹೋಟೆಲ್ ನಿಂದ ಸಾಂಬಾರ್ ತಂದೋ ಬಹಳ ಬೇಸರವಾಗಿರುತ್ತೆ. ಅದಕ್ಕಾಗಿ ಮೂರು ತರಹದ ಅನ್ನಗಳನ್ನು ಹೇಳುತ್ತೇನೆ. ಬಹಳ ಕಷ್ಟವಾಗೋಲ್ಲ,ಇರೋ ಸಾಮಾನುಗಳಲ್ಲೇ ಮಾಡಬಹುದು. ಒಂದುವೇಳೆ ಒಂದು ಸಾಮಾನು ಇರದೇ ಇದ್ದರೂ ತಲೆ ಹೋಗುವಂಥ ರುಚಿಯೇನೋ ಕಡಿಮೆ ಆಗೋದಿಲ್ಲ.

ತೆಂಗಿನಕಾಯಿ ಚಿತ್ರಾನ್ನ(Coconut Rice Bath)

ಹೇಗಿದ್ರೂ ಅನ್ನವನ್ನು ಕುಕ್ಕರ್ ನಲ್ಲಿಟ್ಟು ಮಾಡಿಬಿಡ್ತೀರಿ. ಆಮೇಲೆ ಅನ್ನ ತೆಗೆದು ಊಟದ ತಟ್ಟೆಯಲ್ಲಿ ಆರಲು ಬಿಡಿ. ಮೂರು ಹಸಿಮೆಣಸಿನಕಾಯಿಯನ್ನು ಸೀಳಿಟ್ಟುಕೊಳ್ಳಿ, ಕರಿಬೇವಿನ ಸೊಪ್ಪು ಜತೆಗಿರಲಿ. ಮೂರು ಮಂದಿ ಇದ್ದರೆ, ಒಂದು ಅರ್ಧ ತೆಂಗಿನಕಾಯಿ ತುರಿದು ಇಟ್ಟುಕೊಳ್ಳಿ.

ಒಗ್ಗರಣೆಗೆ ಬಾಣಲಿಯನ್ನು ಒಲೆ ಮೇಲಿಟ್ಟು, ಬೆಂಕಿ ಹಚ್ಚಿ ಸ್ವಲ್ಪ ಎಣ್ಣೆ ಹಾಕಿ. ಅದು ಕಾಯುತ್ತಿದ್ದಂತೆ ಸ್ವಲ್ಪ ಸಾಸಿವೆ ಹಾಕಿ, ಪಟ ಪಟ ಎಂದು ಸಿಡಿಯುತ್ತಿದ್ದಂತೆ ಸ್ವಲ್ಪವೇ ಸ್ವಲ್ಪ (ಹತ್ತಿಪ್ಪತ್ತು ಕಾಳು) ಉದ್ದಿನಬೇಳೆ, ಕಡ್ಲೆಬೇಳೆಯನ್ನು ಹಾಕಿ, ಕೆಂಪಗಾಗುವಂತೆ ಹುರಿಯಿರಿ. ನಂತರ ಹದಿನೈದು ಕಾಳು ಜೀರಿಗೆ ಹಾಕಿ. ಹಸಿಮೆಣಸಿನಕಾಯಿ, ಕರಿಬೇವಿನಸೊಪ್ಪು ಹಾಕಿ. ನಂತರ ತುರಿದ ತೆಂಗಿನಕಾಯಿ ಹಾಕಿ, ಉಪ್ಪು ಹಾಕಿ ಸೌಟಿನಿಂದ ತಿರುವಿರಿ. ಇಂಗಿನ ಪುಡಿ ಇದ್ದರೆ ಚೂರು ಹಾಕಿ, ನಂತರ ತಣ್ಣಗಾದ ಅನ್ನ ಹಾಕಿ ಕಲಸಿ. ಕೊನೆಗೆ ಲಿಂಬೆಹಣ್ನಿನ ರಸ ಚಿಮುಕಿಸಿ ಮತ್ತೊಮ್ಮೆ ಕಲಸಿ. ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಮೇಲಕ್ಕೆ ಹಾಕಿ ಅಲಂಕಾರ ಮಾಡಬಹುದು. ಇದು ತಿನ್ನಲಿಕ್ಕೆ ರುಚಿ, ಮಾಡಲಿಕ್ಕೂ ಸುಲಭ. ಬೇಕೆನ್ನುವವರು ಎರಡು ಈರುಳ್ಳಿಯನ್ನೂ ಸಣ್ಣಗೆ ಕತ್ತರಿಸಿ ಹಸಿಮೆಣಸಿನಕಾಯಿ ಹಾಕಿದ ಮೇಲೆ ಹುರಿದು ಬಳಸಬಹುದು.

ಬೇಕಾಗೋ ಸಾಮಾನು
ಒಗ್ಗರಣೆಗೆ ಸಾಸಿವೆ, ಜೀರಿಗೆ, ಉದ್ದಿನಬೇಳೆ, ಕಡ್ಲೇಬೇಳೆ
ಹಸಿಮೆಣಸಿನಕಾಯಿ ಮೂರು
ಕರಿಬೇವಿನಸೊಪ್ಪು ಮೂರು ಎಸಳು
ಸ್ವಲ್ಪ ಕೊತ್ತಂಬರಿ ಸೊಪ್ಪು
ಲಿಂಬೇಹಣ್ಣು 1
ಉಪ್ಪು ಸ್ವಲ್ಪ
ಬೇಕಾದರೆ ಇಂಗು

ದೊಡ್ಡಮೆಣಸು ಚಿತ್ರಾನ್ನ

ಮೂರು ಕ್ಯಾಪ್ಸಿಕಂ (ದೊಡ್ಡ ಮೆಣಸು) ನ್ನು ಉದ್ದವಾಗಿ ಕತ್ತರಿಸಿಟ್ಟುಕೊಳ್ಳಿ. ಉದಾಹರಣೆಗೆ ಚೈನೀ ಡಿಷಸ್ ನಲ್ಲಿ ಕತ್ತರಿಸುವ ಹಾಗೆ. ಸ್ವಲ್ಲ ತೆಳ್ಳಗೆ ಕತ್ತರಿಸಿ, ದಪ್ಪ ಇದ್ದರೆ ಬೇಗೆ ಫ್ರೈ ಆಗೋದಿಲ್ಲ. ಎರಡು ಈರುಳ್ಳಿಯನ್ನು ಅದೇ ತರಹ ಉದ್ದುದ್ದವಾಗಿ ಕತ್ತರಿಸಿಟ್ಟುಕೊಳ್ಳಿ. ಒಂದು ಟೊಮೆಟೋ ಅಥವಾ ಅರ್ಧ ಲಿಂಬೆಹಣ್ಣು ಸಿದ್ಧಪಡಿಸಿಟ್ಟುಕೊಳ್ಲಿ.

ನಿಮಗೆ ಬೇಕಾದಷ್ಟು ಅನ್ನವನ್ನು ಮಾಡಿಟ್ಟುಕೊಂಡು, ಬಟ್ಟಲಲ್ಲಿ ಹಾಕಿ ತಣ್ಣಗೆ ಮಾಡಿಟ್ಟುಕೊಳ್ಳಿ. ನಂತರ ಬಾಣಲೆ ಒಲೆ ಮೇಲಿಟ್ಟು, ಒಗ್ಗ್ರರಣೆಗೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ ಹಾಕಿ ಹುರಿಯಿರಿ. ನಂತರ ಈರುಳ್ಳಿ ಹಾಕಿ, ಸ್ವಲ್ಪ ಕೆಂಪಗಾಗುತ್ತಿದ್ದಂತೆ ಕ್ಯಾಪ್ಸಿಕಂನ್ನು ಹಾಕಿ ಹುರಿಯಿರಿ. ಅರ್ಧ ಚಮಚ ಆರಿಶಿನ ಪುಡಿ ಹಾಕಿ. ತಕ್ಷಣವೇ ಉಪ್ಪು ಹಾಕಿ, ಅರ್ಧ ಚಮಚದಷ್ಟು ಸಕ್ಕರೆ ಹಾಕಿ. ಸ್ವಲ್ಪ ಚೆನ್ನಾಗಿ ಹುರಿಯಿರಿ, ನಂತರ ಸ್ವಲ್ಪ ತೆಂಗಿನಕಾಯಿ ಹಾಕಿ, ಅನ್ನ ಹಾಕಿ ಕಲಸಿ, ಲಿಂಬೆಹಣ್ಣಿನ ರಸ ಹಾಕಿ ಮತ್ತೊಮ್ಮೆ ಕಲಸಿ, ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ ಸಿಂಗರಿಸಿ.

ಲಿಂಬೆಹಣ್ಣಿನ ಬದಲು ಟೊಮೆಟೋ ಹಣ್ಣನ್ನು ಹಾಕುವವರು, ಈರುಳ್ಳಿ, ಕ್ಯಾಪ್ಸಿಕಂ ಹಾಕಿದ ತಕ್ಷಣ ಕತ್ತರಿಸಿಟ್ಟ ಟೊಮೆಟೋ ಹಣ್ಣನ್ನು ಹಾಕಿ ಹುರಿಯಬೇಕು.

ಬೇಕಾಗೋ ಸಾಮಾನು
ಮೂರು ದೊಡ್ಡ ಮೆಣಸು
ಎರಡು ಈರುಳ್ಳಿ
ಒಂದು ಟೊಮೆಟೋ ಅಥವಾ ಅರ್ಧ ಲಿಂಬೆಹಣ್ಣು
ಕಾಲು ತುರಿದ ತೆಂಗಿನಕಾಯಿ
ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಕಡ್ಲೆಬೇಳೆ

* ಇದಕ್ಕೆ ಕಡ್ಲೇಬೀಜ ಹಾಕಬೇಡಿ. ಕಾರಣ, ಈರುಳ್ಳಿ, ಕ್ಯಾಪ್ಸಿಕಂ, ಟೊಮೆಟೋ ಹುರಿಯುವಾಗ ನೀರಿನ ಅಂಶ ಬಿಡುತ್ತದೆ. ಆಗ ಹುರಿದ ಕಡ್ಲೆಬೀಜ ಅದರಲ್ಲಿ ನೆನೆದಂತಾಗಿ ಮೆದು ಆಗುತ್ತದೆ.ತಿನ್ನಲು ರುಚಿ ಇರದು.
* ಟೊಮೆಟೋ, ಲಿಂಬೆಹಣ್ಣು ಎರಡನ್ನೂ ಬಳಸಬೇಡಿ. ಯಾಕೆಂದರೆ ಕ್ಯಾಪ್ಸಿಕಂನದ್ದೇ ಹುಳಿಯ ಗುಣ. ಇದರೊಂದಿಗೆ ಇವೆರಡನ್ನೂ ಹಾಕಿದರೆ, ಜಾಸ್ತಿ ಹುಳಿಯಾದೀತು.
* ಒಗ್ಗರಣೆಗೆ ಜೀರಿಗೆ ಹಾಕಬೇಡಿ. ಜೀರಿಗೆಗೆ ಕಹಿಗುಣವಿದೆ, ಅದು ಕ್ಯಾಪ್ಸಿಕಂನ ಒಗರು ರುಚಿಯೊಂದಿಗೆ ಸೇರಿ ಸ್ವಲ್ಪ ಕಷ್ಟವೆನಿಸಬಹುದು ತಿನ್ನಲು.

Advertisements

ಬ್ಯಾಚುಲರ್ ಕಿಚನ್ ನಲ್ಲಿ “ಬೆಳ್ಳುಳ್ಳಿ ಅನ್ನ”

ಇದು ಬ್ಯಾಚುಲರ್ ಕಿಚನ್ ನ ರೆಸಿಪಿ. ಬ್ರಹ್ಮಚಾರಿ-ಣಿಗಳಿಗಾಗಿಯೇ ಇರುವಂಥದ್ದು. ಮಾಡುವುದು ಸುಲಭವೂ ಮತ್ತು ಅಗ್ಗವೂ…

ಬೆಳ್ಳುಳ್ಳಿ ಎಂದ ಕೂಡಲೇ ಮೂಗು ಮುರಿಯಬೇಡಿ. ಅದರ ವಾಸನೆ ಅಥವಾ ಪರಿಮಳ ಸ್ವಲ್ಪ ಘಾಟಿರಬಹುದು. ಆದರೆ ಅದು ಬ್ರಹ್ಮಚಾರಿಗಳ ಗಡಿಬಿಡಿಗೆ ಅನುಕೂಲವಾದಷ್ಟು ಇನ್ಯಾವುದಕ್ಕೂ ಪ್ರಯೋಜನಕ್ಕೆ ಬಾರದು.
ಸಾಮಾನ್ಯವಾಗಿ, ಬ್ರಹ್ಮಚಾರಿಗಳ ರೂಮುಗಳಲ್ಲಿ ಏನೆಂದರೆ…ಅನ್ನ ಮಾಡೋದೇ ಹೆಚ್ಚು. ಇನ್ನು ಅದಕ್ಕೆ ಸಾರು, ಹುಳಿ, ಪಲ್ಯ ಅಂತ ಎಲ್ಲಿ ಮಾಡ್ತಾರೆ. ಹಾಗಂತ ದಿನವೂ ಚಿತ್ರಾನ್ನ ಮಾಡಿ ಮಾಡಿಯೂ ಬೇಜಾರು.
ಆಗ ಬೆಳ್ಳುಳ್ಳಿ ಅನ್ನ ಮಾಡಿ.
ಹತ್ತು ನಿಮಿಷದ ಕೆಲಸವಷ್ಟೇ. ಹಾಗೆ ಹೋಗಿ, ಹೀಗೆ ಬರೋದ್ರೊಳಗೆ ಮಾಡಿಬಿಡಬಹುದು. ಇದಕ್ಕೆ ಹೆಚ್ಚು ಸಾಮಾನುಗಳೂ ಬೇಕಿಲ್ಲ.

ಎರಡು ಗೆಡ್ಡೆ ಬೆಳ್ಳುಳ್ಳಿ
ಸ್ವಲ್ಪ ಕರಿಬೇವಿನ ಎಲೆ
ಸಾಸಿವೆ
ಉದ್ದಿನಬೇಳೆ
ಕಡ್ಲೆಬೇಳೆ
ಹಸಿಮೆಣಸು
ಒಣಮೆಣಸು
ಉಪ್ಪು

ಮೊದಲು ಮಾಡಿದ ಅನ್ನವನ್ನು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಿದ್ಧಪಡಿಸಿಟ್ಟುಕೊಳ್ಳಿ. ನಾಲ್ಕು ಹಸಿ ಮೆಣಸು ಸೀಳಿಕೊಳ್ಳಿ.

ಒಗ್ಗರಣೆಗೆ ಎರಡು ಒಣಮೆಣಸು ತುಂಡು ಮಾಡಿಕೊಂಡು, ಒಲೆ ಹಚ್ಚಿ ಬಾಣಲಿ ಇಡಿ (ಪಾತ್ರೆಯೂ ಆದೀತು). ಕಾವು ಸಣ್ಣಗಿರಲಿ. ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಅರ್ಧ ಟೀ ಸ್ಪೂನ್ ಸಾಸಿವೆ ಹಾಕಿ, ಪಟ್ ಪಟ್ ಎಂಬ ಸದ್ದು ಕೇಳುತ್ತಿದ್ದಂತೆ ಬೆಳ್ಳುಳ್ಳಿ ಹಾಕಿ. ಬಂಗಾರದ ಬಣ್ಣಕ್ಕೆ ಬರುತ್ತಿದ್ದಂತೆ ಸ್ವಲ್ಪ ಉದ್ದಿನಬೇಳೆ, ಕಡ್ಲೆಬೇಳೆ, ಒಣಮೆಣಸು ಹಾಕಿ. ಕೆಂಪಗಾಗುವಷ್ಟು ಹುರಿಯಿರಿ. ಕೆಂಪಗಾಗುತ್ತಿದ್ದಂತೆ ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಆಮೇಲೆ ಉಪ್ಪು ಹಾಕಿ ಅನ್ನವನ್ನು ಹಾಕಿ ಕಲಸಿ. ಅಲ್ಲಿಗೆ ಬೆಳ್ಳುಳ್ಳಿ ಅನ್ನ ಸಿದ್ಧ.

ಇದಕ್ಕೆ ಬೇಕಾದವರು ಲಿಂಬೆಹಣ್ಣಿನ ರಸ ಬೆರೆಸಬಹುದು, ತೆಂಗಿನಕಾಯಿಯ ತುರಿ ಹಾಕಬಹುದು. ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಬಹುದು.

ಮತ್ತೊಂದು ಪ್ರಮುಖ ಸಂಗತಿಯೆಂದರೆ, ಬ್ರಹ್ಮಚಾರಿಗಳ ಮನೆಯಲ್ಲಿ ಅನ್ನ ಉಳಿಯುವುದು ಹೆಚ್ಚು. ಇಂದಿನ ಅನ್ನ ನಾಳೆಗೆ ಉಳಿದಾಗ ತಂಗಳನ್ನ ತಿನ್ನಬೇಕು ಎಂದು ಬೇಸರವಿರುತ್ತದೆ. ಆ ದುಃಖವನ್ನು ಇದು ಹೋಗಲಾಡಿಸುತ್ತದೆ. ಅದಕ್ಕೆ ಅನ್ನ ಉಳಿದರೆ, ಅದಕ್ಕೆ ನೀರು ಹಾಕಿಡಿ. ಅದು ಕೆಟ್ಟು ಹೋಗುವುದಿಲ್ಲ. ಅದೇ ಅನ್ನವನ್ನು ಹಿಂಡಿ ಹಿಂಡಿ ನೀರಿನಾಂಶ ತೆಗೆದು ಬೆಳ್ಳುಳ್ಳಿ ಅನ್ನ ಮಾಡಬಹುದು. ಅದೇ ಹೆಚ್ಚು ರುಚಿ.

ಗಮನವಿಡಬೇಕಾದ ಅಂಶ
ಅನ್ನ ಬಟ್ಟಲಿಗೆ ಹಾಕಿ ತಣ್ಣಗೆ ಮಾಡಿದರೆ ಬೆಳ್ಳುಳ್ಳಿ ಅನ್ನ ಮುದ್ದೆಯಾಗುವುದಿಲ್ಲ.
ಇದಕ್ಕೆ ಶುಂಠಿ ಇತ್ಯಾದಿ ಹಾಕಬೇಡಿ. ಬೆಳ್ಳುಳ್ಳಿ ಮತ್ತು ಶುಂಠಿ ಎರಡರ ಘಾಟು ರುಚಿಯನ್ನೇ ಕೆಡಿಸುತ್ತದೆ.
ತಂಗಳನ್ನ ಎಂದು ಹೀಗಳೆಯಬೇಡಿ, ಬೆಳ್ಳುಳ್ಳಿ ಅನ್ನ ಮಾಡಿ.
ಬಹಳ ಸುಲಭ ಮತ್ತು ಕಡಿಮೆ ಸಮಯ ಹಿಡಿಯುವ ತಿಂಡಿ.

ರವೆ ದೋಸೆ ಮಾಡಿ ಹೇಳಿ

ಈ ಸಾರಿಯಿಂದ ಬ್ಯಾಚುಲರ್ ಕಿಚನ್ ಅಂಥ ಶುರು ಮಾಡಿದ್ದೀನಿ. ಆದಷ್ಟು ಬ್ರಹ್ಮಚಾರಿ-ಬ್ರಹ್ಮಚಾರಿಣಿಗಳ ಅನುಕೂಲಕ್ಕೆ ಹಾಗೂ ಅವರು ಹೊಂದಿರಬಹುದಾದ ಸೌಲಭ್ಯಗಳನ್ನು ಅರಿತುಕೊಂಡು ಸಾರು, ಸಾಂಬಾರು, ಉಪಾಹಾರಗಳನ್ನು ವಿವರಿಸುತ್ತೇನೆ. ಅದಕ್ಕೆ ಕೊಟ್ಟಿರುವ ಶೀರ್ಷಿಕೆ “ಬ್ಯಾಚುಲರ್ ಕಿಚನ್’ !

ಇದರೊಂದಿಗೆ ನಿಮಗೆ ಬೇಕಾಗುವ ರೆಸಿಪಿಯ ಪಟ್ಟಿಯನ್ನೂ ಸಲ್ಲಿಸಬಹುದು. ಅದಕ್ಕೂ ಪ್ರಯತ್ನಿಸ್ತೇನೆ.

ನನ್ನ ಬ್ಯಾಚುಲರ್ ಕಿಚನ್‌ನ ಮೊದಲ ಐಟಂ ರವೆದೋಸೆ. ರವೆ ದೋಸೆ ಮಾಡೋದು ಸುಲಭ. ಗೊತ್ತಿದೆಯಾ ? 

ನಿಜವಾಗಲೂ ಹೇಳಬೇಕಾದರೆ ರವೆ ಇಡ್ಲಿ ಮಾಡೋದಕ್ಕಿಂತಲೂ ರವೆ ದೋಸೆ ಸುಲಭ. ಹೌದು, ಹೋಟೆಲ್ ಆದಂತೆಯೇ ರೋಸ್ಟಾಗಿ, ರುಚಿ ರುಚಿಯಾಗಿ ದೋಸೆಯಾಗುತ್ತೆ. ಆ ಬಗ್ಗೆ ಅನುಮಾನ ಪಡೋ ಅಗತ್ಯವಿಲ್ಲ. 

ನೋಡಿ, ಸಾಮಾನ್ಯವಾಗಿ ಎರಡು ರೀತಿಯ ರವೆ ದೋಸೆ ಮಾಡ್ತಾರೆ. ಒಂದು ಟ್ರೆಡಿಷನಲ್ ರವೆ ದೋಸೆ. ಮತ್ತೊಂದು ಹೋಟೆಲ್ ರವೆ ದೋಸೆ. 

rava_dosas5

ಟ್ರೆಡಿಷನಲ್ ರವೆ ದೋಸೆ ಎಂದರೆ ಬಹಳ ವಿಶೇಷವೇನೂ ಇಲ್ಲ. ಉದ್ದಿನಹಿಟ್ಟಿಗೆ ನೆನೆಸಿದ ರವೆ ಹಾಕಿ ಕಲೆಸಿ ದೋಸೆ ಹೆಂಚಿಗೆ ಹಾಕೋದು. ಆದರೆ ಮತ್ತೊಂದು ರವೆ ದೋಸೆ ಮಾಡೋದು ಸ್ವಲ್ಪ ಬೇರೆ. ಅದಕ್ಕೆ ಯಾವ ಪೂರ್ವ ತಯಾರಿಯೂ ಬೇಕಿಲ್ಲ. ಅಂದರೆ ಹಿಂದಿನ ದಿನವೇ ಹಿಟ್ಟು ರುಬ್ಬಿಟ್ಟು ಹುಳಿ ಬರೋವರೆಗೆ ಕಾಯಬೇಕಿಲ್ಲ. 

ನಾಲ್ಕು ಮಂದಿಗೆ ಪ್ರಮಾಣ

ಸ್ವಲ್ಪ ಕೊತ್ತಂಬರಿ ಸೊಪ್ಪು, ಕರಿಬೇವು ಸೊಪ್ಪು, ಹಸಿಮೆಣಸಿನಕಾಯಿ ಸಣ್ಣದಾಗಿ ಕತ್ತರಿಸಿಕೊಳ್ಳಿ. ಈರುಳ್ಳಿ ಬೇಕಾದವರು ಸಣ್ಣಗೆ ಕತ್ತರಿಸಿಕೊಂಡು ಇದರೊಂದಿಗೆ ಹಾಕಿಕೊಳ್ಳಬಹುದು. ಆದರೆ ದೋಸೆ ತೆಗೆಯುವಾಗ ಸ್ವಲ್ಪ ಕಷ್ಟವೆನಿಸಲೂಬಹುದು. ಈ ಸಣ್ಣದಾಗಿ ಕತ್ತರಿಸಿದವುಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ.

ಎರಡೂವರೆ ಕಪ್ ರವೆ. ಇದರಲ್ಲಿ ಚಿರೋಟಿ ರವೆ ಇದ್ದರೆ ಒಳ್ಳೆಯದು. ಉಪ್ಪಿಟ್ಟು ರವೆ (ಮೀಡಿಯಂ ಸೋಜಿ) ಇದ್ದರೂ ಪರವಾಗಿಲ್ಲ. ಚಿರೋಟಿ ರವೆ ಎಂದರೆ ಅಂಗಡಿಯವರಿಗೆ ಅರ್ಥವಾಗದಿದ್ದರೆ ಕೇಸರಿಬಾತ್ ರವೆ ಎನ್ನಿ. ಉದಾಹರಣೆಗೆ ಒಂದು ಕಾಳಿನ ಹನ್ನೆರಡನೇ ಭಾಗ ಉಪ್ಪಿಟ್ಟು ರವೆ ಆದರೆ, ಕೇಸರಿಬಾತ್ ರವೆ ಅಥವಾ ಚಿರೋಟಿ ರವೆ ೧೮ ನೇ ಭಾಗ. ಅಂದರೆ ಅಷ್ಟು ಸಣ್ಣಗಿರುತ್ತದೆ. ರವೆ ಜತೆಗೆ ಎರಡು ಮುಷ್ಟಿಯಷ್ಟು ಅಕ್ಕಿ ಹಿಟ್ಟು ಬೆರೆಸಿ. ಸ್ವಲ್ಪ ಎಂದರೆ ಅರ್ಧ ಮುಷ್ಟಿಯಷ್ಟು ಮೈದಾ ಹಿಟ್ಟು ಹಾಕಿ. ಒಂದೂವರೆ ಕಪ್‌ನಷ್ಟು ಮೊಸರು ಹಾಕಿ ಕಲೆಸಿಕೊಳ್ಳಿ. ಹತ್ತು ನಿಮಿಷ ಬಿಡಿ. ಈ ಕಲೆಸಿಕೊಂಡ ಹಿಟ್ಟಿಗೆ ಸ್ವಲ್ಪ ಬಿಳಿ ಎಳ್ಳು ಹಾಗೂ ಹದಿನೈದು ಜೀರಿಗೆಯನ್ನು ಹಾಕಿಕೊಳ್ಳಿ. ಹಿಟ್ಟು ನೀರಾಗಿರಬೇಕು, ಉದಾಹರಣೆಗೆ ನೀರು ದೋಸೆಗೆ ಇರುವಂತೆಯೇ. ಹಿಟ್ಟು ದಪ್ಪ ಇದ್ದಷ್ಟು ದೋಸೆ ದಪ್ಪನಾಗುತ್ತದೆ, ತಿನ್ನಲೂ ಕಷ್ಟ, ಜತೆಗೆ ಗಟ್ಟಿ. 

ದೋಸೆ ಹೆಂಚು ಕಾಯಲು ಇಡಿ. ಸ್ವಲ್ಪ ಎಣ್ಣೆ ಹಚ್ಚಿ. ನೀರಾಗಿರುವ ಹಿಟ್ಟನ್ನು ಒಂದು ಸೌಟು ಸುರಿಯಿರಿ. ಅರ್ಧ ಆಕಾರ ಆಯಿತೆಂದರೆ, ಇನ್ನೂ ಸ್ವಲ್ಪ ಹಿಟ್ಟು ತೆಗೆದುಕೊಂಡು ಆಕಾರ ಪೂರ್ಣಗೊಳಿಸಿ. ಅದರ ಮೇಲೆ ಒಂದೆರಡು ಚಮಚ ಎಣ್ಣೆ ಹಾಕಿ ಬೇಯಲು ಬಿಡಿ, ಕೆಲ ನಿಮಿಷಗಳ ನಂತರ ಕೆಂಪಗಾಗುತ್ತಾ ಬರುತ್ತದೆ. ಆಗ ದೋಸೆ ಚುಂಚಕ (ಸಟಕ)ದಿಂದ ದೋಸೆಯ ಮೇಲ್ಬಾಗವನ್ನು ಮೆಲ್ಲಗೆ ಕೆರೆಸುವಂತೆ ತೆಗೆಯಿರಿ. ಅಂದರೆ ದೋಸೆಯೇ ಎದ್ದು ಬರುವಂತಲ್ಲ, ಮೆಲ್ಲಗೆ. ಹಾಗೆ ಬಂದ ಮೇಲ್ಪದರವನ್ನು ಮಧ್ಯೆ ಮಧ್ಯೆ ಇರುವ ರಂಧ್ರಕ್ಕೆ ಸವರುತ್ತಾ, ತುಂಬುತ್ತಾ ಬನ್ನಿ. ಪೇಂಟಿಂಗ್‌ನಲ್ಲಿ ಚಿತ್ರಕ್ಕೆ ಬಣ್ಣ ತುಂಬಿದ ಹಾಗೆ. ಅದಕ್ಕಿಂತಲೂ ಹೆಚ್ಚಾಗಿ ಮನೆಯ ಅಂಗಳದಲ್ಲಿ ಕೆಳ ಬಿದ್ದ ಬಣ್ಣವನ್ನು ರಂಗೋಲಿಗೆ ತುಂಬುತ್ತೀರಲ್ಲಾ ಹಾಗೆ. 

ಹಾಗೆ ಮಾಡಿದಾಗ ದೋಸೆ ರೋಸ್ಟಾಗುತ್ತಾ ಹಾಗೂ ತೆಗೆಯಲು ಅನುಕೂಲವಾಗುವಂತೆ ಒಂದೇ ಸಮನಾದ ದಪ್ಪ ಹಾಗೂ ಪದರಗೊಂಡಿರುತ್ತದೆ. ಅದನ್ನು ತೆಗೆಯಿರಿ. ಅಷ್ಟೇ, ರವೆ ದೋಸೆ ಮುಗಿಯಿತು. 

ಗಮನವಿಡಬೇಕಾದದ್ದು

  1. ರವೆ ದೋಸೆ ರೋಸ್ಟಾಗಿದ್ದಷ್ಟು ರುಚಿ. ಹಾಗಾಗಿ ಕೆಂಪಗಾಗುವವರೆಗೆ ಕಾಯಬೇಕು. 
  2. ಈರುಳ್ಳಿ ತುಂಡುಗಳನ್ನು ಹಾಕಿದರೆ, ಪದರವನ್ನು ಸವರುವಾಗ ದೋಸೆಯೇ ಎದ್ದು ಬರಬಹುದು. 
  3. ರೋಸ್ಟಾಗಲು ಸ್ವಲ್ಪ ಚೆನ್ನಾಗಿ ಎಣ್ಣೆ ಹಾಕಬೇಕು.
  4. ರವೆ ದೋಸೆ ಒಣಕಲು ಇರುವುದರಿಂದ ಎಣ್ಣೆ ಹಾಕಿದಷ್ಟು ಗರಿಮುರಿ, ತಿನ್ನಲು ರುಚಿ.
  5. ಶುಂಠಿಯನ್ನೂ ಹಾಕಬಹುದು. ಆದರೆ ಅತಿಚಿಕ್ಕಚೂರುಗಳನ್ನಾಗಿ ಮಾಡಿಕೊಳ್ಳಬೇಕು. 
  6. ಎಳ್ಳು ಹಾಕಿಕೊಂಡರೆ ಬರುವ ರುಚಿಯೂ ಬೇರೆ, ಪರಿಮಳವೂ ಬೇರೆ.
  7. ಇದೆಲ್ಲದರ ಮಧ್ಯೆ ಇದು ಬ್ಯಾಚುಲರ್‌ಗಳಿಗೂ ಮಾಡಲು ಅನುಕೂಲ.