ಮಾವಿನಕಾಯಿ ಚಟ್ನಿ ಪುಡಿ

ಚಟ್ನಿ ಪುಡಿ ಮಾಡುವುದೇನೋ ಹೊಸ ಸಂಗತಿಯಲ್ಲ. ಎಲ್ಲರಿಗೂ ಗೊತ್ತಿದದ್ದೇ. ಸದಾ ಮಾಡಿಟ್ಟುಕೊಳ್ಳಬಹುದಾದ ಪುಡಿ. ಚಪಾತಿ, ಇಡ್ನಿ, ದೋಸೆಗೆಲ್ಲಾ ಚೆನ್ನ. ಪೂರಿಗೂ ಚೆನ್ನವೇ.
ಮಾವಿನಕಾಯಿ-ಹಣ್ಣಿನ ಕಾಲವಿದು. ಅದಕ್ಕಾಗಿ ಮಾವಿನಕಾಯಿ ಚಟ್ನಿ ಪುಡಿಯನ್ನು ಮಾಡಬಹುದು. ತಿನ್ನಲೂ ರುಚಿ, ಖುಷಿ.

50 ಗ್ರಾಂ ಕಡ್ಲೇಬೇಳೆ
50 ಗ್ರಾಂ ಉದ್ದಿನಬೇಳೆ
ಹುಣಸೆಹಣ್ಣಿನ ಪುಡಿ
10 ಒಣಮೆಣಸು
ಸ್ವಲ್ಪ ಸಾಸಿವೆ
ಕರಿಬೇವಿನ ಸೊಪ್ಪಿನ ಎಲೆ
ಎರಡು ಹುಳಿ ಮಾವಿನಕಾಯಿ
ಸ್ವಲ್ಪ ಇಂಗು

ಇಷ್ಟಿದ್ದರೆ ಚಟ್ನಿ ಪುಡಿಗೆ ವೇದಿಕೆ ಸಿದ್ಧ. ಮಾವಿನ ಕಾಯಿ ಸಿಪ್ಪೆ ತೆಗೆದು ತುರಿಯಬೇಕು. ನಂತರ ನೀರಿಗೆ ಉಪ್ಪು ಹಾಕಿ ಕರಗಲು ಬಿಡಿ. ಕೆಲ ಕ್ಷಣಗಳ ನಂತರ ತುರಿದ ಮಾವಿನಕಾಯಿಯನ್ನು ಅದಕ್ಕೆ ಹಾಕಿ. ಮಾರನೆ ದಿನ ಆ ತುರಿಯನ್ನು ತೆಗೆದು ಒಣಗಿಸಿ. ಎರಡು ದಿನ ಹೀಗೆ ಒಣಗಿಸಬೇಕು. ಒಂದುವೇಳೆ ಉಪ್ಪು ಜಾಸ್ತಿ ಹಿಡಿದಿರದಿದ್ದರೆ ಮತ್ತೊಮ್ಮೆ ಉಪ್ಪಿನ ನೀರಿಗೆ ಹಾಕಬಹುದು.

ಕಡ್ಲೇಬೇಳೆ ಮತ್ತು ಉದ್ದಿನಬೇಳೆಯನ್ನು ಪ್ರತ್ಯೇಕವಾಗಿ ಹುರಿದುಕೊಳ್ಳಿ. ಬಂಗಾರದ ಬಣ್ಣ ಬರಬೇಕು. ನಂತರ ಒಣಮೆಣಸನ್ನು ಹುರಿದುಕೊಳ್ಳಿ. ಆಮೇಲೆ ಸಾಸಿವೆ ಹಾಕಿ, ಹೊಟ್ಟುತ್ತದೆ. ತಕ್ಷಣವೇ ಕರಿಬೇವಿನಸೊಪ್ಪು ಹಾಕಿ ಪಟ ಪಟ ಎಂದ ಕೂಡಲೇ ತೆಗೆದಿಡಿ. ಬೇಕಾದಷ್ಟು ಉಪ್ಪು, ಸ್ವಲ್ಪ ಇಂಗಿನೊಂದಿಗೆ ಈ ಎಲ್ಲವನ್ನೂ ಮಿಕ್ಸಿಯಲ್ಲಿ ಹಾಕಿ ಪುಡಿ ಮಾಡಿ. ಅದಕ್ಕೆ ಒಣಗಿದ ಮಾವಿನ ತುರಿಯನ್ನು ಬೆರೆಸಿ, ಮತ್ತೊಂದು ಸುತ್ತು ತಿರುಗಿಸಿ. ಸ್ವಲ್ಪ ಸಿಹಿ ಇರಲು, ಬೆಲ್ಲ ಪುಡಿ ಮಾಡಿ ಸೇರಿಸಿ. ಅಲ್ಲಿಗೆ ಮಾವಿನಕಾಯಿ ಚಟ್ನಿಪುಡಿ ಸಿದ್ಧವಾದಂತೆ.

ಗಮನಿಸಬೇಕಾದ ಅಂಶಗಳು
1. ಯಾವುದನ್ನು ಹುರಿಯುವಾಗಲೂ ಎಣ್ಣೆ ಬಳಸಬಾರದು, ಡ್ರೈ ಇರಬೇಕು.
2. ಬೇಳೆಗಳನ್ನು ಬಂಗಾರದಬಣ್ಣ ಬರುವಷ್ಟರಲ್ಲೇ ಕೆಳಗಿಳಿಸಿಕೊಳ್ಳಿ. ಕಾರಣ, ಅದರೊಳಗಿನ ಬಿಸಿ ಕೆಲ ಕ್ಷಣಗಳು ಇರುವುದರಿಂದ ಮೆಲ್ಲಗೆ ಕೆಂಪು ಬಣ್ಣಕ್ಕೆ ತಿರುಗುತ್ತದೆ. ಒಂದುವೇಳೆ ಕೆಂಪು ಬಣ್ಣದವರೆಗೆ ಹುರಿದರೆ, ತಣ್ಣಗಾಗುವಷ್ಟರಲ್ಲಿ ಅದು ಕಂದುಬಣ್ಣಕ್ಕೆ ತಿರುಗುತ್ತದೆ. ಆಗ ಪುಡಿ ಚೆನ್ನಾಗಿರಲಾರದು.
3. ಹೊಟ್ಟಿದ ಸಾಸಿವೆ ಚಟ್ನಿ ಪುಡಿಗೆ ಒಳ್ಳೆಯ ಪರಿಮಳವನ್ನು ತರುತ್ತದೆ.
4. ಮೆಂತ್ಯೆ ಹಾಕುವ ಅಭ್ಯಾಸ ಕೆಲವೆಡೆ ಇದೆ. ಆದರೆ ಮಾವಿನಕಾಯಿ ಹುಳಿಯೊಗರು ಇರುವುದರಿಂದ ಮತ್ತೆ ಮೆಂತ್ಯೆ ಬೇಡ. ಮೆಂತ್ಯೆಯ ಕಹಿ ಮತ್ತು ಒಗರು ಹತ್ತಿರ ಹತ್ತಿರ ಒಂದೇ ಬಗೆಯ ರುಚಿ.

Advertisements