ಗಡಿಬಿಡಿಯ ಬಾಂಬೆ ಸಾಗು

ಗೆಳೆಯರೇ, ಬಾಂಬೆ ಸಾಗು ಮಾಡೋದು ಗೊತ್ತೇ?

ಇದೂ ಸಹಿತ ಗಡಿಬಿಡಿಯಲ್ಲಿ ಮಾಡೋ ಸೈಡ್ಸ್. ಅದರಲ್ಲೂ ಬ್ಯಾಚುಲರ್‌ಗಳು ಇದ್ದಕ್ಕಿದ್ದಂತೆ ಒಂದು ದಿನ ಗೆಳೆಯರನ್ನೆಲ್ಲಾ ಕೂಡಿಕೊಂಡು ಚಪಾತಿನೋ, ಪೂರಿನೋ ಮಾಡಲಿಕ್ಕೆ ಹೋಗ್ತಾರೆ. ಅದರಲ್ಲೂ ಸಂಸಾರಸ್ಥರ ಮನೆಯಲ್ಲೂ ಈ ಗಡಿಬಿಡಿ ಇದ್ದದ್ದೇ. 

ಯಾರೋ ನೆಂಟರು ಬರ್‍ತಾರೆ, ಪೂರಿನೋ, ದೋಸೆನೋ, ಚಪಾತಿನೋ ಮಾಡಿದಾಗ ಅದಕ್ಕೆ ಏನಾದರೂ ಪಲ್ಲೆ ತರಹ ಮಾಡ್ಬೇಕು. ಸಾಮಾನ್ಯವಾಗಿ ತರಕಾರಿ ಸಾಗುವನ್ನೋ ಬೇರೆ ಏನಾದರೂ ಮಾಡೋಕೆ ಸ್ವಲ್ಪ ಸಮಯ ಬೇಕು, ಕೆಲಸ ಜಾಸ್ತಿ. ಆ ಸಂದರ್ಭದಲ್ಲಿ ಏನ್ ಮಾಡ್ಬಹುದು ಎಂದ್ರೆ ಬಾಂಬೆ ಸಾಗು ಮಾಡ್ಬಹುದು. 

ಮಾಡೋದಂತೂ ಬಹಳ ಸರಳ ಹಾಗೂ ವೆಚ್ಚವೂ ಹೆಚ್ಚಿನದಲ್ಲ. ಅದಕ್ಕೆ ಬೇಕಾಗೋ ಸಾಮಾನುಗಳು ಇಷ್ಟೇ.

 

ಒಂದೆರಡು ಈರುಳ್ಳಿ

ಮೂರು ಆಲೂಗೆಡ್ಡೆ

ಒಂದೆರಡು ಟೊಮೆಟೊ

ಚಿಕ್ಕ ಬೆಳ್ಳುಳ್ಳಿ ಗೆಡ್ಡೆ

ಎರಡು ಟೀ ಸ್ಪೂನ್ ಕಡ್ಲೆಹಿಟ್ಟು

ಅರ್ಧ ಟೀ ಸ್ಪೂನ್ ಅರಿಶಿನ ಪುಡಿ

ಒಗ್ಗರಣೆಗೆ ಸಾಸಿವೆ, ಉದ್ದಿನಬೇಳೆ, ಕರಿಬೇವಿನ ಸೊಪ್ಪು

ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪು

ಚೂರು ಇಂಗು

ಮೂರು ಹಸಿಮೆಣಸು

ಉಪ್ಪು

 

ಇಷ್ಟು ಇದ್ದರೆ ಬಾಂಬೆ ಸಾಗು ರೆಡಿ ಆದಂತೆಯೇ. ಸಾಮಾನ್ಯವಾಗಿ ಹೋಟೆಲ್‌ಗಳಲ್ಲಿ ಸಂಜೆ ಹೊತ್ತು ತಿಂಡಿಗೆ ಹೋದರೆ ಕೊಡುವುದು ಇದೇ ಸಾಗು. ರುಚಿಯಾಗಿರುತ್ತೆ. 

ಈರುಳ್ಳಿಯನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು. ಅದಕ್ಕಿಂತ ಮುನ್ನ ಆಲೂಗೆಡ್ಡೆಯನ್ನು ಬೇಯಲಿಕ್ಕೆ ಇಡಿ. ಐದು ವಿಷಲ್ ಕೂಗಲಿ, ಬಿಡಿ. ಬೆಳ್ಳುಳ್ಳಿ ಬೀಜಗಳನ್ನು ಸುಲಿದು, ಚಿಕ್ಕ ಚಿಕ್ಕ ಚೂರುಗಳನ್ನಾಗಿ ಮಾಡಿಕೊಳ್ಳಿ. ಟೊಮೆಟೋವನ್ನು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು. ಹಸಿಮೆಣಸನ್ನು ಸೀಳಿಟ್ಟುಕೊಳ್ಳಿ.

ಒಲೆ ಹಚ್ಚಿ, ಅದರ ಮೇಲೆ ಬಾಣಲಿಯಿಟ್ಟು, ಒಗ್ಗರಣೆಗೆ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸಾಸಿವೆ ಹಾಕಿ. ಸಾಸಿವೆ ಪಟ ಪಟ ಎಂದು ಹೊಟ್ಟುವವರೆಗೂ ತಾಳ್ಮೆಯಿಂದ ಕಾಯಿರಿ. ಒಂದೆರಡು ಹೊಟ್ಟುತ್ತಿದ್ದಂತೆ ಹತ್ತು ಕಾಳು ಉದ್ದಿನಬೇಳೆ ಹಾಕಿ ಕೆಂಪಗಾಗಲು ಬಿಡಿ. ನಂತರ ಬೆಳ್ಳುಳ್ಳಿ ಚೂರುಗಳನ್ನು ಹಾಕಿ, ಕೆಂಪಗಾಗಲಿ.

ಬಳಿಕ ಸೀಳಿದ ಹಸಿಮೆಣಸು ಹಾಕಿ, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಹಸಿಮೆಣಸಿನ ಬೆನ್ನ ಮೇಲೆ ಗುಳ್ಳೆ ಗುಳ್ಳೆ ತರಹ ಆಗುತ್ತಿದ್ದಂತೆ (ಚೆನ್ನಾಗಿ ಫ್ರೈ ಆಗಿರುವುದರ ಲಕ್ಷಣ)ಈರುಳ್ಳಿಯನ್ನು ಹಾಕಿ ಹುರಿಯಿರಿ. ಆರಿಶಿನ ಪುಡಿ ಹಾಕಿ. ಕೆಲ ಕ್ಷಣಗಳ ನಂತರ ಟೊಮೆಟೊ ಹೋಳುಗಳನ್ನು ಹಾಕಿ ಚೆನ್ನಾಗಿ ಫ್ರೈ ಮಾಡಿ. ಸ್ವಲ್ಪ ನೀರನ್ನು ಹಾಕಿ ಕೆಲ ಕ್ಷಣ ಬೇಯಲು ಬಿಡಿ. 

ಬೆಂದ ಆಲೂಗೆಡ್ಡೆ ಸಿಪ್ಪೆ ತೆಗೆದು ಪುಡಿ ಮಾಡಿಟ್ಟುಕೊಳ್ಳಿ. ಈರುಳ್ಳಿ, ಟೊಮೆಟೋ ಬೆಂದಿದೆ ಎಂದೆನಿಸಿದಕೂಡಲೇ ಈ ಪುಡಿ ಮಾಡಿಟ್ಟ ಆಲೂಗೆಡ್ಡೆ ಹಾಕಿ ಕಲಕಿ. ಎರಡು ಚಮಚ (ಟೀ) ದಷ್ಟು ಉಪ್ಪು ಹಾಕಿ ಬೆರೆಸಿ. ಆಗ ಸಣ್ಣ ಕಪ್ ನಲ್ಲಿ ಎರಡು ಟೀ ಚಮಚ ಕಡ್ಲೆಹಿಟ್ಟನ್ನು ನೀರಿನಲ್ಲಿ ಕಲೆಸಿ ಬಾಣಲಿಗೆ ಹಾಕಿ ಕುದಿಯಲು ಬಿಡಿ. ಕೆಲ ಕ್ಷಣಗಳಲ್ಲೇ ಕುದ್ದ ನಂತರ ಅದು ಗಟ್ಟಿಯಾಗುತ್ತದೆ. ಆಮೇಲೆ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ. ಬಾಂಬೆ ಸಾಗು ಅಂದ್ರೆ ಇದೇ. ಕೆಲವರು ಬೆಳ್ಳುಳ್ಳಿ ಬಳಸುವುದಿಲ್ಲ. ಅಂಥವರು ಬಾಣಲಿಯನ್ನು ಒಲೆಯಿಂದ ಕೆಳಗಿಳಿಸುವ ಮೊದಲು ಸ್ವಲ್ಪ ಇಂಗು ಬೆರೆಸಬೇಕು. 

ಗಮನಿಸತಕ್ಕ ಅಂಶಗಳು

* ಬೆಳ್ಳುಳ್ಳಿ ಅಥವಾ ಇಂಗು ಹಾಕುವುದು, ಆಲೂಗೆಡ್ಡೆಯಲ್ಲಿನ ವಾಯು ಅಂಶವನ್ನು ಹೊಡೆದೋಡಿಸಲು.
* ಕಡ್ಲೆಹಿಟ್ಟನ್ನು ನೀರಿನಲ್ಲಿ ಕಲೆಸಿ ಹಾಕುವುದು ಒಂದು ಬಂಧ (ಕೂಡುಕೊಳ್ಳುವಿಕೆ) ಬರಲೆಂದು. ಇಲ್ಲದಿದ್ದರೆ ಆಲೂಗೆಡ್ಡೆ, ಈರುಳ್ಳಿ, ಟೊಮೆಟೊ ಮತ್ತು ಬೇಯಲು ಹಾಕಿದ ನೀರೆಲ್ಲವೂ ಪರಸ್ಪರ ಡೈವೋರ್ಸ್ ಕೊಟ್ಟುಕೊಂಡಂತೆ ಇರುತ್ತದೆ.
* ಮಕ್ಕಳಿರುವ ಮನೆಯಲ್ಲಿ ಯಾವಾಗಲೂ ಹಸಿಮೆಣಸನ್ನು ಸೀಳಿಯೇ ಬಳಸಬೇಕು. ಕಾರಣ, ತೆಗೆದಿಡಲು ಸುಲಭ ಹಾಗೂ ಬಹುಬೇಗ ಖಾರವನ್ನು ಬಿಡುವುದಿಲ್ಲ. ಸಣ್ಣ ಸಣ್ಣ ಹೋಳುಗಳಾಗಿ ಮಾಡಿಕೊಂಡರೆ, ನೀರಿನೊಂದಿಗೆ ಖಾರದ ಅಂಶವನ್ನು ಬಹುಬೇಗ ಬಿಡುತ್ತದೆ.
* ಇಂಗು ಮತ್ತು ಬೆಳ್ಳುಳ್ಳಿ ಎರಡನ್ನೂ ಬಳಸಬೇಡಿ, ಚೆನ್ನಾಗಿರುವುದಿಲ್ಲ.
* ಆಲೂಗೆಡ್ಡೆ ಕೊಂಡುಕೊಳ್ಳುವಾಗ ಸರಿಯಾಗಿ ಆರಿಸಿ, ಕೆಲ ಆಲೂಗೆಡ್ಡೆ ಮೇಲೆ ಹಸಿರು ಬಣ್ಣವಿದ್ದರೆ ಸರಿಯಾಗಿ ಬೇಯುವುದಿಲ್ಲ.

Advertisements