ಹೀರೇಕಾಯಿ ಸಿಪ್ಪೆ ಚಟ್ನಿ

ಗೊಜ್ಜು ೧-

ಹೀರೇಕಾಯಿ ಒಳ್ಳೆ ತರಕಾರಿ. ಅದರಲ್ಲಿ ದೋಸೆ, ಹುಳಿ ಹಾಗೂ ಸಿಹಿ ಮಾಡ್ತಾರೆ. ಆದರೆ ಅದರ ಸಿಪ್ಪೆಯ ಗೊಜ್ಜು ಬಹಳ ಚೆನ್ನಾಗಿರುತ್ತೆ. ಅದರಲ್ಲೂ ಬರೀ ಅನ್ನ ಕಲಸಿ ತಿನ್ನಲು ಸೂಪರ್. ಹಾಗೆಯೇ ಇಡ್ಲಿ, ದೋಸೆಗೂ ಓಕೆ. ಕೆಲಸ ಕಡಿಮೆ ಹಾಗೂ ಎಕಾನಮಿ !
ಹೇಗಿದ್ರೂ ಸಾಂಬಾರ್‌ಗೆ ಎಂದು ಹೀರೇಕಾಯಿ ತಂದಿರ್‍ತೀರಿ. ಅದರ ಮುಳ್ಳಿನಂತಿರುವ ಭಾಗವನ್ನು ಎರೆದು ಸಮತಟ್ಟಾಗಿಸಿ. ನಂತರ ಅದರ ಸಿಪ್ಪೆಯನ್ನು ತೆಗೆಯಿರಿ. ಇದನ್ನು ಕವರ್‌ನಲ್ಲಿಟ್ಟು ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೂ ಚೆನ್ನಾಗಿರುತ್ತೆ.
ಮನೆಯಲ್ಲಿ ಮೂರು ಮಂದಿಯಿದ್ದರೆ, ಒಂದು ಹತ್ತು ಸಿಪ್ಪೆ ಸಾಕು. ಅದನ್ನು ಚಿಕ್ಕ ಬಾಣಲಿಯಲ್ಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು. ಹತ್ತು ನಿಮಿಷ ಹುರಿದ ಮೇಲೆ ಪಚ್ಚೆ ಹಸಿರಿನ ಬಣ್ಣ ನೀರಿನಲ್ಲಿ ಅದ್ದಿ ತೆಗೆದಂತಾಗುತ್ತದೆ. ನಂತರ ಅದನ್ನು ತಟ್ಟೆಗೆ ತೆಗೆದಿಟ್ಟು, ಅದೇ ಬಾಣಲಿಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸ್ವಲ್ಪ ಉದ್ದಿನಬೇಳೆ ಹಾಕಿ. ನಾಲ್ಕೈದು ಒಣಮೆಣಸು ಹಾಕಿ. ಹುರಿದು ಆ ಸಿಪ್ಪೆಯೊಂದಿಗೆ ಸೇರಿಸಿ ಮಿಕ್ಸಿಗೆ ಹಾಕಿ. ಜತೆಗೆ ಸ್ವಲ್ಪ ನೆನೆಸಿಟ್ಟ ಹುಣಸೆಹಣ್ಣು, ತೆಂಗಿನಕಾಯಿ (ಇಬ್ಬರಿಗೆ ತೆಂಗಿನಕಾಯಿಯ ಕಾಲು ಭಾಗದಷ್ಟು) ಹಾಗೂ ಉಪ್ಪು ಹಾಕಿ ರುಬ್ಬಿ. ಗೊಜ್ಜು ಸಿದ್ಧ.
ನಂತರ ಕರಿಬೇವಿನಸೊಪ್ಪಿನೊಂದಿಗೆ ಇಂಗಿನ ಒಗ್ಗರಣೆ ಹಾಕಿ.
ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೀರೇಕಾಯಿ ಸಿಪ್ಪೆ ಕಹಿ ಇದೆಯಾ ಎಂದು ಮೊದಲು ಚೂರು ತಿಂದು ನೋಡಿಕೊಳ್ಳಿ. ಇಲ್ಲವಾದರೆ ಕಾರ್ಕೋಟಕ ವಿಷ ಸೇವಿಸಿದ ಅನುಭವವಾದೀತು.
ಉದ್ದಿನಬೇಳೆ ಸರಿಯಾಗಿ ಹುರಿಯದಿದ್ದರೆ, ಸ್ವಲ್ಪ ಹಸಿ ವಾಸನೆ ಬರುತ್ತದೆ. ಹೀರೇಕಾಯಿಯನ್ನೂ ಸರಿಯಾಗಿ ಹುರಿಯದಿದ್ದರೆ ಹಸಿ ವಾಸನೆ ಸಾಮಾನ್ಯ. ರುಚಿಸದು.

Advertisements