ಕೊಟ್ಟೆ ಕಡುಬು ಮಾಡುವುದು ಹೀಗೆ

ಎಷ್ಟು ದಿನವಾಯ್ತು ರೆಸಿಪಿ ಬರೆಯದೇ. ಯಾವ್ಯಾವುದೋ ಕಾರ್ಯ ಒತ್ತಡ. ಅದಕ್ಕೇ ಸಾಧ್ಯವಾಗಲಿಲ್ಲ. ಕ್ಷಮಿಸಿ.

ಅಂದಹಾಗೆ ಕೊಟ್ಟೆ ಕಡುಬು ಮಾಡೋದು ಹೆಂಗೆ ಗೊತ್ತೇ ? ಇದು ದಕ್ಷಿಣ ಕನ್ನಡದ ಕಡುಬು. ಅದರಲ್ಲೂ ಕುಂದಾಪುರ ಬದಿಯಲ್ಲಿ ಬಹಳ ಹೆಚ್ಚು ಬಳಕೆ. ಬಹುತೇಕ ಹಬ್ಬಗಳಿಗೆ ಇದು ಇದ್ದೇ ಇರುತ್ತೆ. ನನಗಂತೂ ಬಹಳ ಪ್ರಿಯ. ಚೌತಿ ಬಂದರೆ ಇದೇ ನನ್ನ ಪ್ರಿಯವಾದ ಆಹಾರ.

ಬಹಳ ಸುಲಭವಾದ ರೆಸಿಪಿ. ಉದ್ದಿನ ಬೇಳೆ ನೆನೆಸಿ ಅರೆದು, ಅದಕ್ಕೆ ರವೆ ಮಿಶ್ರಣ ಮಾಡಿ ಕಡುಬು ಮಾಡೋದಷ್ಟೇ. ನಿಮ್ಮ ಮನೆಯಲ್ಲಿ ನಾಲ್ಕು ಮಂದಿ ಇದ್ದರೆ ಒಂದು ಪಾವು ಉದ್ದನ್ನು ನೀರಿನಲ್ಲಿ ನೆನೆಸಿ. ಸುಮಾರು ಒಂದು ಗಂಟೆ ನಂತರ ಅದನ್ನು ಅರೆಯಬೇಕು. ಚೆನ್ನಾಗಿ ನೀರು ಚಿಮುಕಿಸುತ್ತಾ ಆಗಾಗ್ಗೆ ಹಿಟ್ಟಿಗೆ ಕೈ ಕೊಡುತ್ತಾ ಅರೆದರೆ ಬಹಳ ಚೆನ್ನಾಗಿ ಒದಗುತ್ತದೆ.

ಅನಂತರ ರಾತ್ರಿ ಇದಕ್ಕೆ ಉಪ್ಪು ಮತ್ತು ಮೂರರಷ್ಟು (ಮೂರು ಪಾವು) ಇಡ್ಲಿ ರವೆಯನ್ನು ಚೆನ್ನಾಗಿ ತೊಳೆದು ಮಿಶ್ರಣ ಮಾಡಿಡಬೇಕು. ಬೆಳಗ್ಗೆ ಹುಳಿ ಬಂದಿರುತ್ತದೆ. ಆಗ ಕೊಟ್ಟೆಗೆ ಹಾಕಿ ಬೇಯಿಸುವುದು (ಇಡ್ಲಿ ಬೇಯಿಸದಂತೆ).

ರವೆ ಹೇಗಿರಬೇಕು ?
ಅಂಗಡಿಯಲ್ಲಿ ಸಿಗೋ ಇಡ್ಲಿ ರವೆ ಬಳಸಿ, ಪರವಾಗಿಲ್ಲ. ಇನ್ನೂ ಚೆನ್ನಾಗಿ ಕಡುಬು ಮೃದುವಾಗಿರಬೇಕಾದರೆ, ಅಕ್ಕಿಯನ್ನು ಚೆನ್ನಾಗಿ ತೊಳೆದು, ಬಿಸಿಲಿನಲ್ಲಿ ಒಣಗಿಸಬೇಕು. ನಂತರ ಅದನ್ನು ರವೆಯಾಗಿ ಪುಡಿ ಮಾಡಿ ಬಳಸಿದರೆ ಹೆಚ್ಚು ಸೂಕ್ತ.

ಕೊಟ್ಟೆ ಅಂದ್ರೆ ಏನು ?
ಸ್ವಲ್ಪ ಎಳೆಯ ಹಲಸಿನ ಎಲೆಗಳನ್ನು ತೆಗೆದುಕೊಳ್ಳಬೇಕು. ಒಂದು ಕೊಟ್ಟೆಗೆ ನಾಲ್ಕು ಎಲೆ ಅವಶ್ಯ. ಒಂದಕ್ಕೊಂದು ಎದುರುಬದುರಾಗಿಟ್ಟು, ತೆಳುವಾದ ಕಡ್ಡಿಯನ್ನು ಬಳಸಿ ಹೆಣೆಯಬೇಕು. ಅದನ್ನು ಸೆಟೆಯುವುದು ಎನ್ನುತ್ತೇವೆ. (ತೆಂಗಿನಕಡ್ಡಿಯನ್ನು ಸೀಳಿಕೊಂಡು ಬಳಸಬಹುದು, ಇಲ್ಲವಾದರೆ ಬಿದಿರನ್ನುತೆಳ್ಳಗೆ ಸೀಳಿಕೊಂಡರೂ ಆದೀತು). ಅದಕ್ಕೆ ಮತ್ತೊಂದು ಎಲೆ ಸೇರಿಸಿ, ಅದರ ಎದುರಿಗೆ ಮತ್ತೊಂದು ಎಲೆ ಇಟ್ಟು ಕಡ್ಡಿ ಚುಚ್ಚಬೇಕು. ಅನಂತರ ಪೊಟ್ಟಣ ಕಟ್ಟುವಂತೆ ಮುರಿದು ಕಡ್ಡಿಯಿಂದ ಹೆಣೆಯುತ್ತಾ ಬಂದರೆ ಹಿಟ್ಟು ಹಿಡಿಯುವಂತೆ ಲೋಟದ ಮಾದರಿ ಏರ್ಪಡುತ್ತದೆ. (ಚಿತ್ರಗಳನ್ನು ಹಾಕಬೇಕಿತ್ತು, ಸಾಧ್ಯವಾಗಲಿಲ್ಲ. ಸದ್ಯವೇ ಅದನ್ನು ಹಾಕುತ್ತೇನೆ)..

ಈ ಕೊಟ್ಟೆಗೆ ಹಿಟ್ಟನ್ನು ಸುರಿದು ಬೇಯಿಸುವುದು. ನಾವು ಕೊಟ್ಟೆಯನ್ನು ಸೆಟೆಯುವಾಗ ಯಾವುದೇ ಕಾರಣಕ್ಕೂತೂತು ಇರಬಾರದು. ತೂತು ಇದ್ದರೆ ಹಿಟ್ಟು ಸೋರಿ ಹೋಗುತ್ತದೆ. ಆ ಎಚ್ಚರಿಕೆ ಅವಶ್ಯ.

ಜತೆಗೆ ವ್ಯಂಜನ
ಈ ಕಡುಬಿಗೆ ನೆಂಚಿಕೊಳ್ಳಲು ಏನು ಎಂದರೆ ಸೌತೆಕಾಯಿ ಹುಳಿ ಮಾಡಬಹುದು, ಕುಂಬಳಕಾಯಿ ಮಜ್ಜಿಗೆಹುಳಿ, ಮಾವಿನಕಾಯಿ ಮುದ್ದೊಳಿ, ಇಲ್ಲವಾದರೆ ಮಜ್ಜಿಗೆ ಮೆಣಸು ಹುರಿದು, ಒಳ್ಳೆ ಕೊಬ್ಬರಿ ಎಣ್ಣೆ ಹಾಕಿಕೊಂಡು ತಿಂದು ಮುಗಿಸಬಹುದು. ಇದಲ್ಲದೇ ಕಾಯಿಹಾಲನ್ನೂ ಬಳಸಬಹುದು.

Advertisements

ಶಾವಿಗೆ ಭಾತ್ ಗೆ ಟಿಪ್ಸ್ ಮತ್ತು ಪಾಕಚಂದ್ರಿಕೆಯ ಬದಲಾದ ವಿಳಾಸ

ಹೌದುರೀ, ಪಾಕಚಂದ್ರಿಕೆಯ ಬಾಗಿಲು ತೆರೆಯದೇ ಹಲವು ಹುಣ್ಣಿಮೆ, ಅಮಾವಾಸ್ಯೆಗಳು ಕಳೆದವು. ಸ್ವಲ್ಪ ಕೆಲಸದ ಒತ್ತಡದಿಂದ ಹೀಗಾಗಿತ್ತು. ಈಗ ಮತ್ತೆ ಬಾಗಿಲು ತೆಗೆದಿದ್ದೇನೆ. ಅಂದ ಹಾಗೆ ನಿಮಗೆ ನೀಡುವ ಮಾಹಿತಿಯೆಂದರೆ ನನ್ನ ಪಾಕಚಂದ್ರಿಕೆಯ ವಿಳಾಸ ಬದಲಾಯಿಸಿದ್ದೇನೆ. ಇನ್ನು ಮುಂದೆ ಬ್ಲಾಗ್ ಸ್ಪಾಟ್ ನಲ್ಲಿ ಕಾರ್ಯ ನಿರ್ವಹಿಸಲಿದೆ. ಒಂದಿಷ್ಟು ವಿನ್ಯಾಸ ಇತ್ಯಾದಿ ಕಾರಣಗಳಿಂದ ಈ ಬದಲಾವಣೆ. ದಯವಿಟ್ಟು ಬನ್ನಿ, ಬರಲು ಮರೆಯಬೇಡಿ. ಸ್ವಲ್ಪ ದಿನ ಇಲ್ಲೂ ಪೋಸ್ಟ್ ಗಳನ್ನು ಹಾಕುತ್ತೇನೆ. ನಂತರ ಅಲ್ಲಿಯೇ…www.pakachandrike.blogspot.com

ಶಾವಿಗೆ ಭಾತ್ ಬಹಳಷ್ಟು ಮಂದಿಗೆ ಗೊತ್ತು. ಬಹಳ ಸುಲಭ ಮತ್ತು ಸರಳ. ಸಾಮಾನ್ಯವಾಗಿ ಎಲ್ಲರೂ ಬಯಸುವುದು ಗೋಧಿ ಶಾವಿಗೆಯನ್ನು ಅಂದರೆ ಬಾಂಬಿನೋ ಇತ್ಯಾದಿ ಬ್ರ್ಯಾಂಡ್ ಗಳು. ಇದನ್ನು ಮಾಡುವಾಗ ಬಹಳಷ್ಟು ಮಂದಿ ಎದುರಿಸುವ ಸಾಮಾನ್ಯ ಸಮಸ್ಯೆಯೆಂದರೆ ಶಾವಿಗೆ ಕುದಿಯುವ ನೀರಿನಲ್ಲಿ ಎಷ್ಟು ಬೇಯಿಸಬೇಕು ? ಏನೇ ಮಾಡಿದರೂ ಮುದ್ದೆಯಾಗುತ್ತದೆ ? ಸರಿಯಾಗಿ ಉಪ್ಪು ಬೆರೆಯುವುದಿಲ್ಲ ?ಇಲ್ಲವೇ ಒಂದು ಬಗೆಯ ವಾಸನೆ ಇರುತ್ತದೆ…ಇತ್ಯಾದಿ

ಶಾವಿಗೆ ಭಾತು ಮಾಡುವ ಸುಲಭ ವಿಧಾನವೆಂದರೆ :
ಬೇಕಾಗುವ ಸಾಮಾನುಗಳು
ಕಾಲು ಕೆ.ಜಿ. ಶಾವಿಗೆ
ಒಂದು ಕ್ಯಾರೆಟ್
ಒಂದು ಆಲೂಗೆಡ್ಡೆ
ಐದು ಬೀನ್ಸ್
ಎರಡು ಕ್ಯಾಪ್ಸಿಕಂ (ಸಾಧಾರಣ ಗಾತ್ರದ್ದು, ದೊಡ್ಡದಾದರೆ ಒಂದೇ)
ಒಂದು ಲಿಂಬೆಹಣ್ಣು
ಒಗ್ಗರಣೆಗೆ ಸಾಮಾನು (ಕರಿಬೇವು, ಸಾಸಿವೆ, ಕಡ್ಲೇಬೇಳೆ, ಕಡ್ಲೆಕಾಯಿ ಬೀಜ, ಉದ್ದಿನಬೇಳೆ ಇತ್ಯಾದಿ)
ಸ್ವಲ್ಪ ತೆಂಗಿನಕಾಯಿ

ನೀರನ್ನು ಕುದಿಯಲು ಒಲೆಯ ಮೇಲಿಡಿ. ನೀರು ಕುದಿಯಲು ಆರಂಭವಾದಾಗ ಪ್ಯಾಕೆಟ್ ಒಡೆದು ಶಾವಿಗೆಯನ್ನು ಹಾಕಿ. ತಕ್ಷಣವೇ ಒಂದು ಟೀ ಸ್ಪೂನ್ ನಷ್ಟು ಉಪ್ಪನ್ನು ಹಾಕಿ, ಕೊಂಚ ಅರಿಶಿನವನ್ನು ಹಾಕಿ. ಮೂರು ತೊಟ್ಟು ಕೊಬ್ಬರಿ ಎಣ್ಣೆ ಅಥವಾ ಇತರೆ ಎಣ್ಣೆ ಹಾಕಿ. ಇಲ್ಲದಿದ್ದರೆ ಐದಾರು ತೊಟ್ಟು ಲಿಂಬೆಹಣ್ಣಿನ ರಸ ಹಾಕಿ. ಐದಾರು ನಿಮಿಷ ಚೆನ್ನಾಗಿ ಕುದಿಯಲಿ (ಜೋರಾದ ಉರಿಯಲ್ಲಿ). ಸೌಟಿನಲ್ಲಿ ಅದನ್ನು ತಿರುಗಿಸಿ. ಶಾವಿಗೆ ಸ್ವಲ್ಪ ದಪ್ಪಗಾಗುತ್ತಿದ್ದಂತೆ ಜರಡಿ (ತೂತ ಇರುವಂಥ ಪಾತ್ರ ಅಥವಾ ಬೋಂಡಾ ಇತ್ಯಾದಿ ಕರಿದ ಎಣ್ಣೆ ಪದಾರ್ಥಗಳನ್ನು ಹಾಕುವ ಪಾತ್ರ)ಗೆ ಸುರಿದು ಬಿಡಿ.

ಕ್ಯಾರೆಟ್, ಬೀನ್ಸ್, ಆಲೂಗೆಡ್ಡೆಯನ್ನು ಸ್ವಲ್ಪ ತೆಳ್ಳಗೆ ಉದ್ದುದ್ದ (ನಿಮ್ಮ ಬೆರಳಿನ ಮೊದಲನೇ ಭಾಗದಷ್ಟು ಉದ್ದ) ಕತ್ತರಿಸಿಕೊಳ್ಳಿ. ಕ್ಯಾಪ್ಸಿಕಂನ್ನೂ ಹಾಗೆಯೇ ಮಾಡಿಕೊಳ್ಳಿ. ತರಕಾರಿಗಳನ್ನು ಚೈನೀ ರೀತಿಯಲ್ಲೂ ಕತ್ತರಿಸಿಕೊಳ್ಳಬಹುದು. ಅಂದರೆ ಕ್ರಾಸ್ ಕ್ರಾಸ್ ಆಗಿ.

ಉಳಿದಂತೆ ಒಲೆ ಮೇಲೆ ಬಾಣಲಿ ಇಟ್ಟು ಎಣ್ಣೆ ಹಾಕಿ ಒಗ್ಗರಣೆ ಹಾಕಬೇಕು. ಸಾಸಿವೆ ಚಟಪಟ ಸಿಡಿಯುತ್ತಿದ್ದಂತೆ, ಬೇಳೆ, ಕಡ್ಲೇಬೀಜ ಕೆಂಪಗಾಗಿಸಿ. ನಂತರ ಕರಿಬೇವು ಹಾಕಿ ತರಕಾರಿಗಳನ್ನು ಹಾಕಿ ಸ್ವಲ್ಪ ರೋಸ್ಟ್ ಮಾಡಿ. ಆಮೇಲೆ ಒಂದಿಷ್ಟು ಉಪ್ಪು, ಸ್ವಲ್ಪ ಸಕ್ಕರೆ ಹಾಕಿ. ಬಳಿಕ ತೆಂಗಿನಕಾಯಿ ತುರಿ ಹಾಕಿ ತಿರುವಿ. ಕೆಲ ಕ್ಷಣಗಳ ನಂತರ ಶಾವಿಗೆಯನ್ನು ಹಾಕಿ ತಿರುವಿದರೆ ಮುಗಿಯಿತು.

ಒಗ್ಗರಣೆ ಸಂದರ್ಭದಲ್ಲಿ ಗೋಡಂಬಿಯನ್ನೂ ಹಾಕಬಹುದು, ಚೆನ್ನಾಗಿರುತ್ತದೆ. ಅಲಂಕಾರಕ್ಕೆ ಕೊತ್ತಂಬರಿ ಸೊಪ್ಪನ್ನು ಸಣ್ಣಗೆ ಕತ್ತರಿಸಿ ಸುತ್ತಲೂ ಹಾಕಬಹುದು. ಅಲಂಕಾರಕ್ಕೆ ಗುಲಾಬಿ ಇಡುವವರೂ ಇದ್ದಾರೆ.

ನಿಮಗೆ ತಿಳಿಸಲೇಬೇಕಾದ ಅಂಶಗಳೆಂದರೆ :
1. ಎಣ್ಣೆಯ ಹನಿಗಳು ಕುದಿಯುವ ನೀರಿಗೆ ಹಾಕಿದರೆ ಶಾವಿಗೆ ಉದುರುಉದುರಾಗುತ್ತದೆ.
2. ಲಿಂಬೆಹಣ್ಣಿನ ಹನಿಗಳನ್ನೂ ಹಾಕುವುದೂ ಅದೇ ಕಾರಣಕ್ಕೆ, ಆದರೆ ಜಾಸ್ತಿ ಹಾಕಿದರೆ ಕಹಿ ಬರುವ ಅಪಾಯವಿದೆ.
3. ಉಪ್ಪು, ಅರಿಶಿನ ಹಾಕುವುದರಿಂದ ಶಾವಿಗೆಯೂ ಉಪ್ಪನ್ನು ಬಣ್ಣವನ್ನು ಹೀರಿಕೊಳ್ಳುತ್ತದೆ. ಆಗ ಚಪ್ಪೆ ಚಪ್ಪೆ ಎನಿಸದು.
4. ಕಡ್ಲೇಬೀಜ ಕೆಂಪಗಾದ ಮೇಲೆ ತರಕಾರಿ ಹಾಕುವುದರಿಂದ ಕಡ್ಲೇಬೀಜ ಗರಂ ಗರಂ ಆಗಿ ಇರದು. ಹಾಗೇ ಇರಬೇಕೆಂದು ಬಯಸುವವರು ಕಡ್ಲೇಬೀಜವನ್ನು ಪ್ರತ್ಯೇಕವಾಗಿ ಹುರಿದು (ಎಣ್ಣೆಯಲ್ಲಿ ಕರಿದು) ಕೊನೆಯಲ್ಲಿ ಶಾವಿಗೆ ಭಾತಿಗೆ ಸೇರಿಸಿಕೊಳ್ಳಬಹುದು.

ಅಕ್ಕಿ ಶಾವಿಗೆಯನ್ನು ಬಳಸಿ. ಅದು ಹೆಚ್ಚು ರುಚಿ. ಡ್ರ್ಯಾಗನ್ ಎಂಬ ಬ್ರ್ಯಾಂಡ್ ನ ಅಕ್ಕಿ ಶಾವಿಗೆ ತಿನ್ನಲು ಬಹಳ ರುಚಿ. ಇಲ್ಲದಿದ್ದರೆ ರವೆಯ ಶಾವಿಗೆ ಬಳಸಿ. ಅದೂ ಸಹ ಬಹಳ ಮುದ್ದೆಯಾಗದು.

ನಾನು ಮಾಡೋ ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ
ಬಹಳಷ್ಟು ಮಂದಿಗೆ ಅಕ್ಕಿ ರೊಟ್ಟಿ ಮಾಡುವುದೆಂದರೆ ಬಹಳ ರಿಸ್ಕ್. ಅದರರ್ಥ ಬಹಳ ಸಮಯ ಹಿಡಿಯುವ ಕೆಲಸ. ಜತೆಗೆ ರೊಟ್ಟಿ ತೆಳ್ಳಗೆ ನ್ಯೂಸ್ ಪೇಪರ್‌ನಂತೆ ಬಂದರೆ ತಿನ್ನಲಿಕ್ಕೆ ಚೆಂದ. ದಪ್ಪ ಆಗಿಬಿಟ್ಟರೆ ತಿನ್ನಲಿಕ್ಕೆ ಕಷ್ಟ. ಹೀಗೇ ನಾನಾ ಸಮಸ್ಯೆಗಳು.
ಇದರ ಮಧ್ಯೆ ಮತ್ತಷ್ಟು ಕಾಡುವ ಸಮಸ್ಯೆಯೆಂದರೆ ರೊಟ್ಟಿ ತಟ್ಟೋದು ಹೇಗೆ ? ಬಾಳೆ ಎಲೆ ಮೇಲೆ ತಟ್ಟಿದ್ರೆ ಹೇಗೆ ? ನಂದಿನ ಹಾಲಿನ ಕವರ್ ಒಡೆದು ಅಗಲಮಾಡಿ ಅದರ ಮೇಲೆ ತಟ್ಟಿದ್ರೆ, ಹಾಗೆಯೇ ಕಾವಲಿ ತಣ್ಣಗೆ ಆಗುವವರೆಗೆ ಕಾದ ಮೇಲೆ ಅದರಲ್ಲೇ ತಟ್ಟಿದರೆ ಹೇಗೆ…ಇಂಥ ಹಲವು ಪ್ರಶ್ನೆಗಳಿವೆ.
ನಾವೇ ಕಂಡುಕೊಂಡ ಸುಲಭ ವಿಧಾನ ಈಗ ಹೇಳುತ್ತಿದ್ದೇನೆ. ನೋಡಿ, ಪ್ರಯತ್ನ ಪಡಿ. ನಿಜವಾಗಲೂ ಬಹಳ ಸುಲಭವಾದದ್ದು ಹಾಗೂ ಬೇಗ ಆಗುವಂಥದ್ದು.
ಸಾಮಾನು ವಿವರ (ಮೂರ್ನಾಲ್ಕು ಮಂದಿಗೆ ಪ್ರಮಾಣ)
ಮುಕ್ಕಾಲು ಕೆ. ಜಿ. ಅಕ್ಕಿಹಿಟ್ಟು, ಒಂದು ಹಿಡಿ ಚಿರೋಟಿ ರವೆ, ನಾಲ್ಕು ಈರುಳ್ಳಿ, ನಾಲ್ಕು ಹಸಿಮೆಣಸು, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸಣ್ಣ ತುಂಡು ಶುಂಠಿ, ಕೊಂಚ ಬಿಳಿ ಎಳ್ಳು, ತೆಂಗಿನತುರಿ, ಸ್ವಲ್ಪ ಮಜ್ಜಿಗೆ ಅಥವಾ ಮೊಸರು, . ಇದು ಮೂಲ ವಸ್ತುಗಳು.
ಇದಲ್ಲದೇ, ಇದಕ್ಕೆ ಕ್ಯಾರೆಟ್, ಸ್ವಲ್ಪ ಕೋಸು, ಬೀನ್ಸ್ ಹೀಗೆ ಹಲವು ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಅಥವಾ ತುರಿದು ಹಾಕಲೂಬಹುದು.

ಅರ್ಚನಾ ಕಳುಹಿಸಿದ ಚಿತ್ರ
ಅರ್ಚನಾ ಕಳುಹಿಸಿದ ಚಿತ್ರ

ಈರುಳ್ಳಿಯನ್ನು ಸಣ್ಣಗೆ ತುಂಡು ಮಾಡಿಕೊಳ್ಳಿ. ಶುಂಠಿಯೂ ಸಣ್ಣಗಾಗಬೇಕು. ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನಸೊಪ್ಪು, ಹಸಿಮೆಣಸಿನ ತುಂಡುಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅರ್ಧ ತೆಂಗಿನಕಾಯಿಯನ್ನು ತುರಿದು ಹಾಕಿಕೊಳ್ಳಿ. ಬೇಕಾದಷ್ಟು ಉಪ್ಪು ಹಾಕಿ. ಮೂರು ಚಮದಷ್ಟು ಬಿಳಿ ಎಳ್ಳನ್ನೂ ಹಾಕಿ ಕಲಸಿಕೊಳ್ಳಿ. ಸ್ವಲ್ಪ ನಾದುವಂತೆ ತಿಕ್ಕಿಕೊಳ್ಳಿ. ನಂತರ ಅದಕ್ಕೆ ಮುಕ್ಕಾಲುಕೆಜಿ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಒಂದು ಮುಷ್ಟಿಯಷ್ಟು ಚಿರೋಟಿ ರವೆ (ಕೇಸರಿಬಾತು ರವೆ) ಹಾಕಿಕೊಳ್ಳಿ. ಒಂದು ಚಿಕ್ಕ ಲೋಟದಷ್ಟು ಮಜ್ಜಿಗೆ ಅಥವಾ ಮೊಸರನ್ನು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಅಲ್ಲಿಗೆ ಹಿಟ್ಟು ಸಿದ್ಧ. ಐದು ನಿಮಿಷ ಹಾಗೆಯೇ ಮುಚ್ಚಿಡಿ.
ತಟ್ಟುವ ವಿಧಾನ
ರೊಟ್ಟಿ ತಟ್ಟೆಗೆ ಎಣ್ಣೆ ಹಚ್ಚಿಕೊಳ್ಳಿ. ಅದಕ್ಕೆ ಒಂದು ಉಂಡೆ ಹಿಟ್ಟನ್ನು ಹಿಟ್ಟು ಕೈಯಲ್ಲೇ ತಟ್ಟುತ್ತಾ ಹೋಗಿ. ಬೇಕಾದರೆ ಕೈ ಬೆರಳಿಗೆ ಸ್ವಲ್ಪ ಎಣ್ಣೆ ಮುಟ್ಟಿಕೊಂಡರೆ ಚೆನ್ನಾಗಿ ತಟ್ಟಬಹುದು. ಅದನ್ನು ಒಲೆಯ ಮೇಲಿಟ್ಟು, ಎರಡು ಚಮಚ ಎಣ್ಣೆ ಹಾಕಿ ಕಾಯಿಸಿ. ಸಣ್ಣಗಿನ ಕಾವಿನಲ್ಲೇ ಬೆಂದರೆ, ಒಳ್ಳೆ ಕೆಂಪಗಾಗುತ್ತದೆ. ಅಲ್ಲಿಗೆ ರೊಟ್ಟಿ ತಿನ್ನಲು ಸಿದ್ಧ
ಸುಲಭ ವಿಧಾನ
ಬಾಳೆ ಎಲೆಯಲ್ಲಿ ತಟ್ಟಿ ಕಾವಲಿಗೆ ಹಾಕಿ, ಸ್ವಲ್ಪ ಬಿಸಿಯಾಗುತ್ತಿದ್ದಂತೆ ಆ ಎಲೆಯನ್ನು ಮೆಲ್ಲಗೆ ತೆಗೆದು ಮತ್ತೆ ಹೊಸ ರೊಟಿಯನ್ನು ತಟ್ಟಬಹುದು. ಆದರೆ ಮೂರ‍್ನಾಲ್ಕು ರೊಟ್ಟಿ ತಟ್ಟಿದ ನಂತರ ಆ ಎಲೆ ಬಿಸಿ ತಾಗಿ, ತಾಗಿ ಮುದುಡುತ್ತದೆ. ಆಗ ರೊಟ್ಟಿ ಆಕಾರ ಸಣ್ಣದಾಗುತ್ತಾ ಹೋಗುತ್ತದೆ.
ಇನ್ನು ಸ್ವಲ್ಪ ದಪ್ಪಗಿನ ಪ್ಲಾಸ್ಟಿಕ್ ಹಾಳೆಯಲ್ಲಿ ರೊಟ್ಟಿ ತಟ್ಟಿದರೂ, ಅದು ಬಿಸಿಯ ಶಾಖಕ್ಕೆ ಸುತ್ತಲೆಲ್ಲಾ ಕರಗುತ್ತಾ ಹೋಗುತ್ತದೆ. ಕೆಟ್ಟ ವಾಸನೆ, ಅದು ರೊಟ್ಟಿಯ ಹಿಟ್ಟಿನ ಜತೆಗೆ ಸೇರಲೂ ಬಹುದು. ಅದೂ ಬೇಡ.
ಕಾವಲಿಯನ್ನೇ ತಣ್ಣಗೆ ಮಾಡಿ ರೊಟ್ಟಿ ತಟ್ಟುವುದಾದರೆ, ಸಮಯವೂ ಪೋಲು, ಜತೆಗೆ ಗ್ಯಾಸ್ ಪೋಲು. ಯಾಕೆಂದರೆ, ಪ್ರತಿ ಬಾರಿಯೂ ಕಾವಲಿ ತಣ್ಣಗಾಗಲು ಐದು ನಿಮಿಷ ಬೇಕು. ನಂತರ ರೊಟ್ಟಿ ತಟ್ಟಿ ಒಲೆಗೆ ಇಟ್ಟರೆ, ಆ ಕಾವಲಿ ಕಾಯಲಿಕ್ಕೆ ಮತ್ತೆ ಹತ್ತು ನಿಮಿಷ ಬೇಕು. ಇದು ನ್ಯಾಷನಲ್ ವೇಸ್ಟ್
ಹಾಗಾದರೆ ಮಾಡೋದು ಹೇಗೆ
ಮಾರುಕಟ್ಟೆಯಲ್ಲಿ ಅಲ್ಯುಮಿನಿಯಂ, ಇಂಡಾಂಲಿಯಂ ತಟ್ಟೆ ಸಿಗುತ್ತದೆ. ದುಂಡಗಿರುವಂಥ ತಟ್ಟೆ. ಇವು ಜೈಲು ತಟ್ಟೆ ಎಂದೇ ಪ್ರಸಿದ್ಧ. ೨೦ ರಿಂದ ೩೦ ರೂ. ನ ತಟ್ಟೆ. ಸಿನಿಮಾಗಳಲ್ಲಿ ಕೈದಿಗಳು ಹಿಡಿದಿರುವ ತಟ್ಟೆಗಳನ್ನು ನೋಡಿರಬಹುದು. ಅಂಥ ಎರಡು ತಟ್ಟೆಯನ್ನು ತಂದಿಟ್ಟುಕೊಳ್ಳಿ. ಇವು ಮುಚ್ಚಳದ ಮಾದರಿಯಲ್ಲಿರುವುದಿಲ್ಲ, ಗಮನಿಸಿ. ನಾನು ಹೇಳುತ್ತಿರುವ ತಟ್ಟೆ, ಸ್ವಲ್ಪ ಗುಂಡಿಯಂತಿರುತ್ತದೆ. ಬೆಂಗಳೂರಿನಲ್ಲಾದ್ರೆ, ಕೆ. ಆರ್. ಮಾರುಕಟ್ಟೆಯಲ್ಲಿ ಲಭ್ಯ.
ತಟ್ಟೆಯ ಮಾದರಿ ಚಿತ್ರ, ಇನ್ಣೂ ಸ್ವಲ್ಪ ಗುಂಡಿಯಂತಿರುತ್ತದೆ.
ತಟ್ಟೆಯ ಮಾದರಿ ಚಿತ್ರ, ಇನ್ಣೂ ಸ್ವಲ್ಪ ಗುಂಡಿಯಂತಿರುತ್ತದೆ.

ಹೊಸ ತಟ್ಟೆಗೆ ಹಿಂದಿನ ದಿನವೇ ಕೊಂಚ ಎಣ್ಣೆ ಸವರಿಡಿ. ಬೆಳಗ್ಗೆ ಹಿಟ್ಟು ಕಲಸಿದ ಮೇಲೆ ಒಂದು ತಟ್ಟೆಗೆ ಹಿಟ್ಟು ಹಾಕಿ ತೆಳ್ಳಗೆ (ಎಷ್ಟು ಸಾಧ್ಯವೋ ಅಷ್ಟು) ತಟ್ಟಿ, ಬೇಯಿಸಿ. ಪಕ್ಕದಲ್ಲೇ ಒಂದು ದೊಡ್ಟ ಊಟದ ತಟ್ಟೆಯಲ್ಲಿ ಮುಕ್ಕಾಲು ಎನಿಸುವಷ್ಟು ನೀರು ತುಂಬಿಸಿಡಿ. ನಮ್ಮ ರೊಟ್ಟಿ ತಟ್ಟೆಗಿಂತ ಊಟದ ತಟ್ಟೆ ದೊಡ್ಡದಿರಬೇಕು.
ಒಲೆ ಮೇಲಿಟ್ಟ ಹಿಟ್ಟು ಬೆಂದು ಅದನ್ನು ತೆಗೆದ ಕೂಡಲೇ ಆ ತಟ್ಟೆಯನ್ನು ಈ ಊಟದ ತಟ್ಟೆಯ ನೀರಿನ ಮೇಲೆ ತೇಲಲು ಬಿಡಿ. ಹತ್ತು ಸೆಕೆಂಡುಗಳಲ್ಲಿ ಅದು ತಣ್ಣಗಾಗುತ್ತದೆ. ತಕ್ಷಣವೇ ರೊಟ್ಟಿ ಹಿಟ್ಟು ಹಚ್ಚಿ ಮತ್ತೆ ಬೇಯಿಸಿ. ಹೀಗೇ, ಕಾದ ರೊಟ್ಟಿ ತಟ್ಟೆಯನ್ನು ತಣ್ಣಗೆ ಮಾಡಿಕೊಂಡು ಸುಲಭ ಮತ್ತು ಬೇಗ ರೊಟ್ಟಿ ಮಾಡಬಹುದು. ಇದರಿಂದ ಗ್ಯಾಸೂ ವೇಸ್ಟಾಗುವುದಿಲ್ಲ, ನೀರೂ ವೇಸ್ಟಾಗುವುದಿಲ್ಲ, ಸಮಯವೂ ಪೋಲಾಗುವುದಿಲ್ಲ.
ಅಂದಹಾಗೆ, ನನಗೆ ಚಿತ್ರ ಕಳುಹಿಸಿಕೊಟ್ಟಿದ್ದು ಅರ್ಚನಾ. ಅವರೂ ರೆಸಿಪಿ ಲೋಕದವರೇ. ಅವರಿಗೆ ಥ್ಯಾಂಕ್ಸ್.
ಗಮನಿಸಬೇಕಾದ ಅಂಶ
* ಬಹಳ ನುಣ್ಣಗಿರುವ ಅಕ್ಕಿ ಹಿಟ್ಟು ಕೊಳ್ಳಬೇಡಿ, ಸ್ವಲ್ಪ ರಫ್ (ರವೆಯಷ್ಟು ಅಲ್ಲ) ಆಗಿರಬೇಕು. ರೊಟ್ಟಿ ಚೆನ್ನಾಗಿ ಬರುತ್ತೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಸ್ವಲ್ಪ ತರಿ-ತರಿ ಇದ್ದರೆ ಚೆನ್ನ
* ಮಜ್ಜಿಗೆ ಹಾಕಿದರೆ ರೊಟ್ಟಿ ಮೃದು ಹಾಗೂ ಪರಿಮಳ ಚೆನ್ನಾಗಿರುತ್ತೆ.
* ಒಲೆಯ ಕಾವು ಹದವಾಗಿರಲಿ, ತಟ್ಟೆ ಸುಡುವಷ್ಟು ಬೇಡ.
* ರೊಟ್ಟಿ ಹಿಟ್ಟು ಗಟ್ಟಿಯಾಗಿರುವಾಗ ತಟ್ಟಲು ಸ್ವಲ್ಪ ಕಷ್ಟವೆನಿಸಬಹುದು. ಆದರೆ ರೊಟ್ಟಿ ರೋಸ್ಟ್ ಆಗಿರುತ್ತೆ. ಅದೇ ಸ್ವಲ್ಪ ನೀರಾಗಿ ಹಿಟ್ಟು ಕಲೆಸಿಕೊಂಡರೆ, ನಾರಿನಂತೆ ರೋಸ್ಟಾಗದು.
* ಈ ರೊಟ್ಟಿಗೆ ಕಾಯಿ ಚಟ್ನಿ ಇದ್ದರೆ ಚೆನ್ನ.

ಸೆಟ್ ದೋಸೆ ಹೀಗೆ ಮಾಡಿದರೆ ಸುಲಭ…!

ಸೆಟ್ ದೋಸೆ ಮಾಡಲು ಒಂದು ಸುಲಭ ಉಪಾಯವಿದೆ. ಅದೇ ನನ್ನ ಹೊಸರುಚಿ

ಸೆಟ್ ದೋಸೆ ಮಾಡೋದು ಹೇಗೆ ಎಂದು ಮೊನ್ನೆ ಒಬ್ಬರು ಕೇಳಿದರು. ಅವರ ಪ್ರಶ್ನೆಗೂ ಒಂದು ಕಾರಣವಿತ್ತು. ಸಾಮಾನ್ಯವಾಗಿ ಮನೆಯಲ್ಲಿ ಮಾಡುವ ದೋಸೆ ಹಿಟ್ಟಿನಲ್ಲಿ ಸೆಟ್ ದೋಸೆ ಮಾಡೋದು ಕಷ್ಟ. ಕಾರಣ, ನಾವು ಅರೆಯುವ ಹಿಟ್ಟು ಇಲ್ಲವೇ ಉದ್ದಿನ ದೋಸೆಗೆ ಅಥವಾ ಮಸಾಲೆ ದೋಸೆಗೆ ಸೂಕ್ತವಾಗಿರುತ್ತೆ. ಸೆಟ್ ದೋಸೆ ಅವೆರಡೂ ಅಲ್ಲ. ಅದಕ್ಕೆ ಬೇರೆ ಹದವಾದ ಹಿಟ್ಟು ಬೇಕು. 

set

ಬೆಂಗಳೂರಿನಲ್ಲಿ ರಾಮಕೃಷ್ಣ ಆಶ್ರಮದ ಬಳಿ ದ್ವಾರಕಾ ಎನ್ನೋ ಹೋಟೆಲ್ಲಿತ್ತು. ಅದು ಅತ್ಯಂತ ಹಳೆಯ ಹೋಟೆಲ್. ಈಗ ಅಲ್ಲಿಲ್ಲ. ಬಹುಶಃ ನರಸಿಂಹರಾಜ ಕಾಲೋನಿ ಬಳಿ ಹೊಸ ರೂಪ ಪಡೆದಿದೆ. ರುಚಿಯೂ ಕಳೆದುಕೊಂಡಿದೆ. ಅಲ್ಲಿ ಖಾಲಿ ದೋಸೆ ಸಿಗುತ್ತಿತ್ತು. ಎಷ್ಟು ಚೆನ್ನಾಗಿತ್ತೆಂದರೆ ಮಲ್ಲಿಗೆ ಹೂವಿನ ಹಾಗೆಯೇ. 

ಅಲ್ಲಿ ಖಾಲಿ ದೋಸೆಗೆ ಚಟ್ನಿ ಬಿಟ್ಟರೆ ಬೇರೇನೋ ಕೊಡುತ್ತಿರಲಿಲ್ಲ. ಅದೂ ಬರೀ ಕಾಯಿ ಚಟ್ನಿ. ಗಟ್ಟಿ ಚಟ್ನಿ ಕೇಳುವಂತೆಯೇ ಇರಲಿಲ್ಲ. ನೀರಾಗಿರುತ್ತಿದ್ದ ಚಟ್ನಿಯನ್ನೂ ಮೂರನೇ ಬಾರಿಗಿಂತ ಹೆಚ್ಚು ಕೇಳುವಂತಿರಲಿಲ್ಲ. ಆ ಹೋಟೆಲ್ ಬಗ್ಗೆಯೇ ದಂತಕಥೆ ಇದೆ. ಇನ್ನೊಮ್ಮೆ ಹೇಳುತ್ತೇನೆ. ಆ ನಮೂನೆಯ ಅಷ್ಟೊಂದು ಮೃದುವಾದ ಖಾಲಿದೋಸೆ ಮಾಡೋದು ಹೇಗೆ ಎನ್ನುವುದು ಆಗಿನ ಕುತೂಹಲವಾಗಿತ್ತು. 

ಈಗ ಸಾಮಾನ್ಯವಾಗಿ ಎಲ್ಲ ಊರುಗಳಲ್ಲಿ ಸಿಗೋ ದೋಸೆಯೆಂದರೆ ಸೆಟ್ ದೋಸೆ. ಬಹುತೇಕ ನಗರಗಳಲ್ಲಿ ಖಾಲಿ ದೋಸೆಯ ಸ್ಥಾನವನ್ನು ಕೊಂಚ ದುಬಾರಿ ದರದಲ್ಲಿ ಸೆಟ್ ದೋಸೆ ಆವರಿಸಿಕೊಂಡಿದೆ. ಇಂಥ ಸೆಟ್ ದೋಸೆ ಕೆಲವೊಂದು ಕಡೆ ಮೃದುವಾಗಿರುವುದಿಲ್ಲ, ಕೆಲವೊಂದು ಕಡೆ ಸೊರಗಿದಂತಿರುತ್ತಿದೆ. 

ಸೆಟ್ ದೋಸೆ ಹೇಗೆ ?

ಆದರೆ ಬಹಳ ಸುಲಭವಾಗಿ ಸೆಟ್ ದೋಸೆ ಮಾಡುವುದು ಹೀಗೆ. 

ಈ ದೋಸೆಗೆ ಉದ್ದಿನ ಬೇಳೆಯ ಅಗತ್ಯವಿಲ್ಲ. ಸಾಮಾನ್ಯವಾಗಿ ದೋಸೆ ಎಂದರೆ ಉದ್ದು ಇಲ್ಲದೇ ಆಗುವುದಿಲ್ಲ. ನಾಲ್ಕು ಮಂದಿಯ ಲೆಕ್ಕದಲ್ಲಿ ವಿವರಿಸುತ್ತೇನೆ. 

ಎರಡು ಲೋಟ ಅಕ್ಕಿಯನ್ನು ನೆನೆಸಿ. ಮುಕ್ಕಾಲುಗಂಟೆ ನೆನೆದರೆ ಸಾಕು. ಅಕ್ಕಿಯನ್ನು ನೆನೆಸಿದ ಹದಿನೈದು ನಿಮಿಷದ ನಂತರ ಮುಕ್ಕಾಲು ಲೋಟಕ್ಕಿಂತ ಕೊಂಚ ಕಡಿಮೆ ದಪ್ಪ ಅವಲಕ್ಕಿಯನ್ನು ನೆನೆಸಿಡಿ. ತೊಳೆದ ಅಕ್ಕಿಯನ್ನು ಅರೆಯುವಾಗ ಈ ನೆನೆದ ದಪ್ಪ ಅವಲಕ್ಕಿಯನ್ನೂ ಹಾಕಿ ನುಣ್ಣಗೆ ರುಬ್ಬಿ. ಮಿಕ್ಸಿಯಲ್ಲಿ ಅರೆದರೂ ಸಾಕು. 

ಅರೆದು ತೆಗೆಯುವ ಮೊದಲು ಒಂದು ಕಪ್ ಮೊಸರನ್ನು ಹಾಕಿ ಮತ್ತೊಂದು ಸುತ್ತು ರುಬ್ಬಿರಿ. ನಂತರ ಪಾತ್ರೆಗೆ ತೆಗೆದು ಉಪ್ಪನ್ನು ಹಾಕಿಡಿ. ಬೆಳಗ್ಗೆ ಆ ಹಿಟ್ಟು ಹುಳಿ ಬಂದಿರುತ್ತದೆ. ಒಂದಕ್ಕಿಂತ ಹೆಚ್ಚು ಕಪ್ ಮೊಸರು ಹಾಕಿದರೆ ಹುಳಿ ಜಾಸ್ತಿಯಾಗಿ ಹುಳಿ ವಾಸನೆ ಬರಬಹುದು. 

ಬೆಳಗ್ಗೆ ಆ ಹಿಟ್ಟಿಗೆ ಒಂದು ಚಮಚ ಸಕ್ಕರೆ ಹಾಕಿ ಕಲಸಿ. ಹಿಟ್ಟು ಸ್ವಲ್ಪ ನೀರಾಗಿರಬೇಕು. ಗಟ್ಟಿಯಾಗಿದ್ದರೆ ಸ್ವಲ್ಪ ನೀರು ಹಾಕಿ ದೋಸೆ ಹೆಂಚಿಗೆ ಸುರಿಯಿರಿ. ಒಂದು ಸೌಟ್ಟು ಹಿಟ್ಟು ಹಾಕಿದರೆ ಅದೇ ಹರಡಿಕೊಳ್ಳುತ್ತದೆ. ನೀವು ಮತ್ತೆ ರೌಂಡಾಗಿ ಸೌಟಿನಲ್ಲಿ ಸುತ್ತುವುದು ಬೇಡ. ಈ ಸೆಟ್ ದೋಸೆಗೆ ಕಾಯಿ ಚಟ್ನಿ ಅಥವಾ ಸಾಗು, ಬಾಂಬೆ ಸಾಗುವಿದ್ದರೆ ಹೆಚ್ಚು ರುಚಿ. 

ಗಮನಿಸಬೇಕಾದ ಅಂಶಗಳು

* ಅವಲಕ್ಕಿ ಹೆಚ್ಚಾಗಿ ಹಾಕಿದರೆ ಬಹಳ ಮೃದುವಾಗುತ್ತದೆ. ಹೆಂಚಿನಿಂದ ತೆಗೆಯಲು ಕಷ್ಟವಾಗುತ್ತದೆ.

* ಸಕ್ಕರೆ ಹಾಕಿದರೆ ದೋಸೆಯ ಬುಡ ಕೆಂಪಾಗುತ್ತದೆ.

*  ಸೆಟ್ ದೋಸೆಯ ಜತೆಗೆ ಬೆಣ್ಣೆ ಇದ್ದರೆ ಮತ್ತೂ ರುಚಿ.

ಬರಿಯಕ್ಕಿ ದೋಸೆ

ನನಗೆ ಬಹಳ ಇಷ್ಟವಾದ ತಿಂಡಿಯದು. ಇಷ್ಟವಾದದ್ದು ಎರಡು ಕಾರಣಕ್ಕೆ. ಕೆಲಸ ಕಡಿಮೆ ಮತ್ತು ರುಚಿ ಜಾಸ್ತಿ. ಉಳಿದ ದೋಸೆಗಳಂತೆ ಗಂಟೆಗಟ್ಟಲೆ ಕೆಲಸ ಮಾಡಬೇಕಿಲ್ಲ. ಹೆಚ್ಚೆಂದರೆ ಅರ್ಧ ಗಂಟೆ ಸಾಕು. ಇದು ಕರಾವಳಿ ಭಾಗದ್ದು. ಬಹುತೇಕ ಕಡೆಗಳಲ್ಲಿ ಇದನ್ನು “ಬರಿಯಕ್ಕಿ ದೋಸೆ’ ಎನ್ನುತ್ತಾರೆ.
ಕಾರಣ, ಇದಕ್ಕೆ ಉದ್ದಾಗಲೀ, ಮೆಂತ್ಯೆಯಾಗಲೀ ಏನನ್ನೂ ಬಳಸುವುದಿಲ್ಲ. ಕೇವಲ ಅಕ್ಕಿ ಮಾತ್ರ. ಹಾಗಾಗಿ ಬರಿಯಕ್ಕಿ-ಓನ್ಲಿ ರೈಸ್- ದೋಸೆ ಎಂದು ಕರೆಯುತ್ತಾರೆ. ಆದರೆ ಕರಾವಳಿ ಘಟ್ಟ ದಾಟಿ ಈಚೆಗೆ ಬಂದ ಮೇಲೆ ಜನಪ್ರಿಯವಾದದ್ದು “ನೀರು ದೋಸೆ’ ಎಂದೇ.

ಇದಕ್ಕೂ ಕಾರಣವಿದೆ. ಮಾಮೂಲಿ ದೋಸೆ ಹಿಟ್ಟು ಸ್ವಲ್ಪ ದಪ್ಪವಾಗಿರುತ್ತೆ. ಅದಕ್ಕಿಂತ ನೀರಾಗಿರುವಂಥದ್ದು ಈ ದೋಸೆಯ ಹಿಟ್ಟು. ಜತೆಗೆ ದೋಸೆ ಹಿಟ್ಟನ್ನು ಕಾವಲಿಗೆ ಹಾಕಿ ಸುತ್ತುವಂಥ (ಬೇರೆ ದೋಸೆ ಸುತ್ತುವಂತೆ)ದ್ದೇನೂ ಇಲ್ಲ. ಸುಮ್ಮನೆ ಸುರಿದು ಬಿಡುವುದಷ್ಟೇ. ಹಾಗಾಗಿ ಜನ ಸುಲಭವಾಗಿ “ನೀರು ದೋಸೆ’ಎಂದು ಕರೆಯತೊಡಗಿದರು.

ಮಾಡುವ ಬಗೆ
ಹಿಂದಿನ ದಿನ ರಾತ್ರಿ ಸುಮಾರು ಒಂದೂವರೆ ಪಾವು (ಸುಮಾರು ಇಪ್ಪತ್ತೈದು ದೋಸೆಯಾಗಬಲ್ಲದು)ಅಕ್ಕಿ (ದಪ್ಪಕ್ಕಿ)ಯನ್ನು ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಎದ್ದು ಎರಡು ಬಾರಿ ಚೆನ್ನಾಗಿ ತೊಳೆದು, ಅದಕ್ಕೆ ಸ್ವಲ್ಪ ತೆಂಗಿನಕಾಯಿ ಹಾಕಿ ಅರೆಯಬೇಕು. ನುಣ್ಣಗಾದ ಮೇಲೆ ತೆಗೆದು ಒಂದಿಷ್ಟು ನೀರು ಮತ್ತು ಉಪ್ಪು ಬೆರೆಸಿ ಹತ್ತು ನಿಮಿಷ ಸುಮ್ಮನೆ ಇಡಿ.

ನಂತರ ದೋಸೆ ಕಾವಲಿಯಿಟ್ಟು, ಸ್ವಲ್ಪ ಎಣ್ಣೆ ಹಚ್ಚಿ ಒಂದು ಸೌಟು ದೋಸೆ ಹಿಟ್ಟನ್ನು ಹುಯ್ಯಿರಿ. ಎರಡು ನಿಮಿಷದಲ್ಲಿ ದೋಸೆ ಸಿದ್ಧ. ತೆಳ್ಳಗೆ – ಬೆಳ್ಳಗೆ ದೋಸೆ ಚೆನ್ನಾಗಿರುತ್ತದೆ. ಅದಕ್ಕೆ ಚಟ್ನಿಪುಡಿ ಅಥವಾ ಮಾವಿನಕಾಯಿ ಚಟ್ನಿ ಬೆರೆಸಿಕೊಂಡು ತಿಂದರೆ ಚೆನ್ನ.

ಒಂದೆರಡು ಟಿಪ್ಸ್
* ಅಕ್ಕಿ ಹಿಟ್ಟು ಅರೆದು ತೆಗೆದ ಮೇಲೆ ಅದಕ್ಕೆ ತಣ್ಣೀರು ಹಾಕುವ ಬದಲು ಬಿಸಿನೀರು ಹಾಕಿ. ದೋಸೆ ಮೆದುವಾಗಿರುತ್ತದೆ.
* ಹಿಟ್ಟು ಅರೆಯುವಾಗ ನೀರಿನ ಬದಲು ತೆಂಗಿನಕಾಯಿಯ ನೀರನ್ನು ಹಾಕಿದರೆ ದೋಸೆ ಮೃದುವಾಗುತ್ತದೆ.
* ಹಾಗೆಯೇ ಹಿಟ್ಟಿಗೆ ನೀರಿನ ಬದಲು ಬೆಲ್ಲದ ನೀರು ಅಥವಾ ಕಬ್ಬಿನ ಹಾಲು ಬೆರೆಸಿದರೆ ಸಿಹಿ ನೀರು ದೋಸೆಯಾಗುತ್ತದೆ. ಈ ಸಂದರ್ಭದಲ್ಲಿ ಬಿಸಿ ನೀರು ಬಳಸಬೇಡಿ. ಆದರೆ ಒಲೆಯ ಕಾವು ಜಾಸ್ತಿ ಇಟ್ಟುಕೊಂಡರೆ ದೋಸೆ ಎದ್ದೇಳುವುದು ಕಷ್ಟ. ಬಹಳ ಮೃದುವಾಗುವುದರಿಂದ ಒಂದೇ ಹದದಲ್ಲಿ ಕಾವಿರಲಿ.
ಏನೇ ಅನುಮಾನಗಳಿದ್ದರೂ ಕೇಳಬಹುದು.

ಅವಲಕ್ಕಿ ವೆಜಿಟೆಬಲ್ ಪಲಾವ್

ಈ ಹಿಂದೆ ಅವಲಕ್ಕಿ ಬಿಸಿಬೇಳೆಬಾತ್ ಬರೆದಿದ್ದೆ. ಈ ಬಾರಿ ಅವಲಕ್ಕಿ ವೆಜಿಟೆಬಲ್ ಪಲಾವ್ ಬರೆಯುತ್ತಿದ್ದೇನೆ. ಈ ಪಲಾವ್‌ನಿಂದ ಇರುವ ಮೂರು ಅನುಕೂಲ, ಒಂದು ಅನಾನುಕೂಲ ಎಲ್ಲವನ್ನೂ ಪಟ್ಟಿ ಮಾಡುತ್ತೇನೆ.
ಅನುಕೂಲ
1. ಅನ್ನದ ಪಲಾವ್‌ಗಿಂತ ಇದನ್ನು ಮಾಡಲು ತಗಲುವ ಸಮಯ ಬಹಳ ಕಡಿಮೆ
2. ಅನ್ನದ ಪಲಾವ್ ತಿಂದೂ ತಿಂದೂ ಬೇಸರವಾದವರಿಗೆ ವರದಾನ
3. ಬೆಳಗ್ಗೆಯ ತಿಂಡಿಗೆ ಅನ್ನ ಮಾಡೋದೇ ಎಂದು ಮೂಗು ಮುರಿಯುವವರಿಗೂ ಹೊಸ ರುಚಿ
ಅನಾನುಕೂಲ
1. ಅನ್ನದ ಪಲಾವ್ ಒದಗಿದಂತೆ (ಹೆಚ್ಚಾದಂತೆ) ಇದು ಒದಗದು. ಅದೊಂದೇ ದುಃಖ.
ಹಿಂದಿನ ತಿಂಡಿ ಬಗ್ಗೆ ಬರೆದಾಗ ಬಹಳಷ್ಟು ಮಂದಿ ಬಳಸುವ ಸಾಮಾನುಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಕೊಡಿ ಎಂದು ಸಲಹೆ ನೀಡಿದ್ದರು. ಅದು ಮಾಮೂಲಿ ಪದ್ಧತಿ. ಅದಕ್ಕೇ ಅದನ್ನು ಮಾಡೋದಿಕ್ಕೆ ಇಷ್ಟವಿರಲಿಲ್ಲ. ಈ ಪಲಾವ್‌ಗೆ ಅನ್ನದ ಪಲಾವ್‌ಗೆ ಬೇಕಾದದ್ದೆಲ್ಲಾ ಬೇಕು.
ಬೇಕಾದ ತರಕಾರಿ : ಮೂರು ಕ್ಯಾರೆಟ್, ಹತ್ತು ಬೀನ್ಸ್, ಒಂದು ನವಿಲು ಕೋಸು, ಒಂದು ಆಲೂಗೆಡ್ಡೆ, ಮೂರು ಟೊಮೆಟೊ.
ಸೊಪ್ಪು : ಸ್ವಲ್ಪ ಕೊತ್ತಂಬರಿ ಸೊಪ್ಪು ಅಥವಾ ಪುದಿನ ಇದ್ದರೆ ಚೆನ್ನ
ಮಸಾಲೆ : ನಾಲ್ಕೈದು ಚೆಕ್ಕೆ ತುಂಡು, ಐದು ಲವಂಗ, ಹತ್ತು ಬೆಳ್ಳುಳ್ಳಿ ಎಸಳುಗಳು ಇದ್ದರೆ ಸಾಕು. ಇವನ್ನು ಸ್ವಲ್ಪ ಕಾಯಿ ತುರಿಯೊಂದಿಗೆ ಅರೆಯಬೇಕು. ಒಂದೆರಡು ಈರುಳ್ಳಿ ತುಂಡನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು.
ಮೂಲ ಸಾಮಾನು : ಮೂರು ಪಾವು ಅವಲಕ್ಕಿ (ಐದು ಮಂದಿಗೆ)
ಮಾಡುವ ಬಗೆ
ಪಾತ್ರೆ ಅಥವಾ ಕುಕ್ಕರ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ್ದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕತ್ತರಿಸಿದ ತರಕಾರಿ ಹೋಳು ಹಾಕಿ ಕಲಕಿ. ನಂತರ ಟೊಮೆಟೋ ಹೋಳು ಹಾಕಿ ಹುರಿಯಿರಿ. ಸ್ವಲ್ಪ ನೀರು (ಹೋಳು ಮುಳುಗುವಷ್ಟು) ಹಾಕಿ. ಹತ್ತು ನಿಮಿಷದೊಳಗೆ ತರಕಾರಿ ಅರ್ಧ ಬೆಂದಿರುತ್ತದೆ. ಆಗ ಉಪ್ಪು ಮತ್ತು ಮಸಾಲೆ ಹಾಕಿ. ಒಂದು ಪಾವು ಅವಲಕ್ಕಿಗೆ ಒಂದೂಕಾಲು ಲೋಟದಂತೆ ನೀರು ಹಾಕಿ. ಅದು ಕುದಿ ಬರುವುದರೊಳಗೆ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಇಡಿ. ಅದು ಮೆಲ್ಲಗೆ ಅರಳತೊಡಗುತ್ತದೆ. ಅಂದರೆ ನೀರಿನಲ್ಲಿ ನೆನೆ ಹಾಕಬಾರದು. ಮಸಾಲೆ ಕುದಿ ಬಂದ ಕೂಡಲೇ ತೊಳೆದಿಟ್ಟ ಅವಲಕ್ಕಿ ಹಾಕಿ ಸೌಟಿನಲ್ಲಿ ತಿರುಗಿಸಿ. ಒಲೆ ಉರಿ ಸಣ್ಣಗೆ ಮಾಡಿ ಐದು ನಿಮಿಷ ಬಿಡಿ. ನಂತರ ಒಲೆ ಆರಿಸಿ.

10 ನಿಮಿಷ ಬಿಟ್ಟು ಪಲಾವ್ ತಿನ್ನಲು ಸಿದ್ಧ.  ಅನ್ನದ ಪಲಾವ್‌ಗೆ ಕನಿಷ್ಠ 50 ನಿಮಿಷ ಬೇಕು. ಇದಕ್ಕೆ 20 ರಿಂದ 25 ನಿಮಿಷ ಸಾಕು.