ಕ್ಯಾಪ್ಸಿಕಂ ಮಸಾಲ

ಚಪಾತಿ, ಪುಲ್ಕ, ರೋಟಿಯಲ್ಲದೇ, ಗುಳಿಯಪ್ಪ (ಪಡ್ಡು), ದೋಸೆಗೂ ಇದು ರುಚಿ.

Capsicumಈ ಬಾರಿಯ ರೆಸಿಪಿ ಪಂಜಾಬಿ. ಇದು ಅಸಲಿ ಪಂಜಾಬಿ ಶೈಲಿಯ ಕ್ಯಾಪ್ಸಿಕಂ ಮಸಾಲ. ಹಾಗಾಗಿ, ಹೋಟೆಲಿನ ಮಸಾಲಕ್ಕೂ, ನನ್ನ ಮಸಾಲಕ್ಕೂ ಸ್ವಲ್ಪ ವ್ಯತ್ಯಾಸವಿದೆ.

ಮೂರು ಜನರ ಲೆಕ್ಕದಲ್ಲಿ ತರಕಾರಿ

 • 3 ಮಧ್ಯಮ ಗಾತ್ರದ ಕ್ಯಾಪ್ಸಿಕಂ
 • ಸಣ್ಣ 2 ಟೊಮೆಟೊ
 • 2 ಹಸಿಮೆಣಸು
 • 2 ಸಣ್ಣ ಈರುಳ್ಳಿ
 • 6 ಬೆಳ್ಳುಳ್ಳಿ ಎಸಳು
 • ಹಸಿಶುಂಠಿ ಒಂದು ಸಣ್ಣ ತುಂಡು
 • ಕೊತ್ತಂಬರಿ ಸೊಪ್ಪು

cashew

ಇತರೆ

 • ಹತ್ತರಿಂದ 15 ಶೇಂಗಾ ಬೀಜ
 • ಸ್ವಲ್ಪ ಗೋಡಂಬಿ
 • ಒಂದು ಚಮಚ ಕೊತ್ತಂಬರಿ ಬೀಜ
 • ಸ್ವಲ್ಪ ಜೀರಿಗೆ
 • ಎರಡು ಚಮಚ ಅಚ್ಚ ಮೆಣಸಿನ ಪುಡಿ
 • ಸ್ವಲ್ಪ ಎಣ್ಣೆ
 • ಎರಡು ಚಮಚ ಗರಂ ಮಸಾಲಾ ಪುಡಿ
 • ಉಪ್ಪು

ಶುರು ಮಾಡುವ ಮೊದಲು

 • ಅಡುಗೆ ಶುರು ಮಾಡುವ 10 ನಿಮಿಷ ಮೊದಲು ಎಲ್ಲ ತರಕಾರಿಗಳನ್ನೂ ತೊಳೆದು ಒಂದೆಡೆ ಗಾಳಿಗೆ ಹರಡಿಡಿ.
 • ಗೋಡಂಬಿ ಮತ್ತು ಶೇಂಗಾ ಬೀಜವನ್ನು ಹುರಿದು ತಣ್ಣಗೆ ಮಾಡಿ, ಪುಡಿ ಮಾಡಿಟ್ಟುಕೊಳ್ಳಿ.

ಈಗ ಆರಂಭ

ಕ್ಯಾಪ್ಸಿಕಂ ನ ಬೀಜ ತೆಗೆದು, ಸಣ್ಣ ಹೋಳುಗಳನ್ನಾಗಿ ಕತ್ತರಿಸಿಕೊಳ್ಳಿ. ಸಣ್ಣ ಹೋಳುಗಳೆಂದರೆ, ಬಹಳ ಸಣ್ಣದಲ್ಲ.

ಈರುಳ್ಳಿ, ಟೊಮೆಟೊ, ಹಸಿಮೆಣಸು, ಶುಂಠಿ, ಬೆಳ್ಳುಳ್ಳಿಯನ್ನು ಸಣ್ಣದಾಗಿ ಕತ್ತರಿಸಿ ಪ್ರತ್ಯೇಕವಾಗಿಟ್ಟುಕೊಳ್ಳಿ. ಶುಂಠಿ,ಬೆಳ್ಳುಳ್ಳಿಯನ್ನು ಪೇಸ್ಟ್ ನಂತೆ ಅರೆದಿಟ್ಟೂಕೊಳ್ಳಬಹುದು.

ಎಣ್ಣೆ ಬಾಣಲಿಯಿಟ್ಟು,ಸ್ವಲ್ಪ ಎಣ್ಣೆ ಹಾಕಿ. ಸಣ್ಣ ಕಾವಿರಲಿ. ಎಣ್ಣೆ ಕಾಯುತ್ತಿದ್ದಂತೆ ಕ್ಯಾಪ್ಸಿಕಂ ಹೋಳುಗಳನ್ನು ಹಾಕಿ ಹುರಿದು ಅದನ್ನುತೆಗೆದು ಪ್ರತ್ಯೇಕ ತಟ್ಟೆಯಲ್ಲಿಡಿ. ಇದಕ್ಕೆ 8 ರಿಂದ 10 ನಿಮಿಷ ಸಾಕು.

ನಂತರ ಅದೇ ಬಾಣಲಿಗೆ ಇನ್ನೂ ಸ್ವಲ್ಪ ಎಣ್ಣೆ ಹಾಕಿ, ಬಿಸಿಯಾದ ಕೂಡಲೇ ಕೊತ್ತಂಬರಿ ಬೀಜವನ್ನು ಕೈಯಲ್ಲಿ ಪುಡಿ ಮಾಡಿ ಹಾಕಿ. ಎರಡು ಕ್ಷಣದ ನಂತರ ಈರುಳ್ಳಿಯನ್ನು ಹಾಕಿ. ಕೆಂಪಗಾಗಲಿ. ಅನಂತರ ಟೊಮೆಟೋ ಹಾಕಿ. ಉಪ್ಪು ಹಾಕಿ. ಚೆನ್ನಾಗಿ ಬೇಯಿಸಿದಂತಾಗಲಿ. ಅಂದರೆ, ಟೊಮೆಟೋ ರಸವನ್ನು ಬಿಟ್ಟುಕೊಂಡು ಎಲ್ಲದರೊಂದಿಗೆ ಬೆರೆತಂತಾಗಿ ಗ್ರೇವಿಯಂತಾದಾಗ ಬೇರೆ ಪಾತ್ರೆಗೆ ತೆಗೆದಿಡಿ.

ಬಾಣಲಿಗೆ ಸ್ವಲ್ಪ ಎಣ್ಣೆ ಹಾಕಿ, ಜೀರಿಗೆಯನ್ನು ಹಾಕಿ. ಪರಿಮಳ ಬರುತ್ತಿದ್ದಂತೆ ಕತ್ತರಿಸಿದ ಬೆಳ್ಳುಳ್ಳಿ ಹಾಕಿ, ಸ್ವಲ್ಪ ಕೆಂಪಗಾಗುತ್ತಿದ್ದಂತೆ ಹಸಿಮೆಣಸು, ಶುಂಠಿ ಹಾಕಿ ಹುರಿಯಿರಿ. ಎಲ್ಲವೂ ಘಾಟು ಹೊರಬಿಡುತ್ತಿದ್ದಂತೆ ಪರಿಮಳ ಬರುತ್ತಿದ್ದಂತೆ ಆ ಗ್ರೇವಿಯನ್ನು ಹಾಕಿ ಕಲಸತೊಡಗಿ. ಸ್ವಲ್ಪ ಎಣ್ಣೆ ಮೇಲೆ ತೋರುತ್ತಿದ್ದಂತೆಯೇ ಹುರಿದ ಕ್ಯಾಪ್ಸಿಕಂ ಹೋಳುಗಳನ್ನು ಹಾಕಿ. ಮತ್ತೆ ಕಲಸಿ. ನಿಮಗೆ ಬೇಕಾದಷ್ಟು ನೀರು ಬೆರೆಸಿ. (ಡ್ರೈ ಇರಬೇಕೆನ್ನುವವರು ಹೆಚ್ಚು ನೀರು ಹಾಕುವುದು ಬೇಡ). ಕುದಿಯತೊಡಗಿದಂತೆಯೇ, ಗೋಡಂಬಿ,ಶೇಂಗಾ ಬೀಜದ ಹುಡಿ ಹಾಕಿ ಕಲಸಿ. ಈಗ ಸ್ವಲ್ಪ ಹೊತ್ತು ಹಾಗೇ ಬಿಡಿ. ಗ್ರೇವಿ ಕುದಿದು, ಎಣ್ಣೆ ಬಿಡತೊಡಗುತ್ತದೆ. ಆಗ ಬೇಕಾಗಿದ್ದರೆ ಮೆಣಸಿನ ಹುಡಿ ಮತ್ತು ಗರಂ ಮಸಾಲ ಹಾಕಿ ಕಲಸಿ, ಐದು ನಿಮಿಷ ಬಿಟ್ಟರೆ ಸಾಕು. ಅನಂತರ ಕತ್ತರಿಸಿದ ಕೊತ್ತಂಬರಿ ಸೊಪ್ಪು ಹಾಕಿ.

ಟಿಪ್ಸ್

 • ಕ್ಯಾಪ್ಸಿಕಂ ಹೋಳಿನ ಕಡು ಹಸಿರು ಬಣ್ಣ ನೀರಿನಲ್ಲಿ ಅದ್ದಿದಂತಾಗಿ, ಇನ್ನಷ್ಟು ಕಡು ಹಸಿರು (ಕಪ್ಪು ಮಿಶ್ರಿತ ಹಸಿರಂತೆ)ತೋರುವಾಗ ತೆಗೆಯಿರಿ. ಜಾಸ್ತಿ ಬೆಂದರೆ, ಕರುಮ್ ಕುರುಮ್ ಇರುವುದಿಲ್ಲ.
 • ಗೋಡಂಬಿ, ಶೇಂಗಾ ಬೀಜದ ಹುಡಿ, ಕ್ಯಾಪ್ಸಿಕಂ ಮಸಾಲಕ್ಕೆ ಹೊಸ ರುಚಿಯನ್ನು ನೀಡುತ್ತದೆ. ಜೊತೆಗೆ ಗ್ರೇವಿ ದಪ್ಪಗಾಗುವಂತೆ ಮಾಡುತ್ತದೆ.
 • ಮೆಣಸಿನ ಹುಡಿ ಜಾಸ್ತಿ ಬಳಸಬೇಡಿ. ಯಾಕೆಂದರೆ, ಒಂದುವೇಳೆ ಖಾರ ಹೆಚ್ಚಾದರೆ ಅದರ ಉರಿಯ ತೀಕ್ಷ್ಣತೆಯನ್ನು ಕಡಿಮೆ ಮಾಡಲು ಏನೂ ಮಾಡಲು ಸಾಧ್ಯವಿಲ್ಲ. ಆಗ ಹೆಚ್ಚು ಸವಿಯಲು ಆಗದು.
 • ಕ್ಯಾಪ್ಸಿಕಂ ಹೋಳು ಬಹಳ ಸಣ್ಣದಾದರೆ ಕಾವಿನಲ್ಲಿ ಕರಗಿ ಹೋಗುತ್ತದೆ. ಹಾಗೆಂದು ಬಹಳ ದೊಡ್ಡದಿದ್ದರೆ ಗ್ರೇವಿಯ ಜತೆ ಮಿಕ್ಸ್ ಆಗುವುದಿಲ್ಲ. ಹಾಗೂ ಕ್ಯಾಪ್ಸಿಕಂ ತಕ್ಷಣವೇ ಉಪ್ಪು, ಖಾರ ಎಳೆದುಕೊಳ್ಳುವುದಿಲ್ಲ.
 • ಎಣ್ಣೆ ಜಾಸ್ತಿಯಾದರೂ ಚೆನ್ನಾಗಿ ಎನಿಸದು. ಆದರೆ, ಅತಿ ಕಡಿಮೆಯಾದರೆ, ಡ್ರೈ ಎನಿಸುತ್ತದೆ. ಹಾಗಾಗಿ ಅಗತ್ಯವಿದ್ದಷ್ಟೇ ಬಳಸಿ.
 • ಇದು ರೆಡ್ ಮಸಾಲ. ಗ್ರೀನ್ ಮಸಾಲ ಬೇರೆ.
Advertisements