ಹೆಸರು ಕಾಳಿನ ಪೊಂಗಲ್

ಹೆಸರುಕಾಳು ಪೊಂಗಲ್ (ನಾಲ್ಕು ಜನಕ್ಕೆ)
ಬೇಕಾಗುವ ಪದಾರ್ಥಗಳು
ಕಾಫಿ ಲೋಟದ ಲೆಕ್ಕದಲ್ಲಿ ಎರಡು ಲೋಟ ಹೆಸರುಕಾಳು, ಒಂದು ಅಕ್ಕಿ, 4 ಅಚ್ಚು ಬೆಲ್ಲ, ಲವಂಗ, ಗೋಡಂಬಿ, ದ್ರಾಕ್ಷಿ.
ಹೆಸರುಕಾಳನ್ನು ಒಂದು ಗಂಟೆ ನೆನೆಹಾಕಬೇಕು. ನಂತರ ಕುಕ್ಕರಿನಲ್ಲಿ ಒಂದು ವಿಷಲ್ ಬೇಯಿಸಬೇಕು. ಒಂದು ವೇಳೆ ನೇರವಾಗಿ ಒಲೆಯ ಮೇಲೆ ಬೇಯಿಸುವುದಾದರೆ ಸುಮಾರು 20 ನಿಮಿಷ ಸಣ್ಣ ಕುದಿಯಲ್ಲಿ ಬೇಯಿಸಬೇಕು. ನಂತರ ತೊಳೆದ ಅಕ್ಕಿಯನ್ನು ಹಾಕುವುದು. ಮುಕ್ಕಾಲು ಭಾಗ ಅಕ್ಕಿ ಬೆಂದ ಮೇಲೆ ಬೆಲ್ಲವನ್ನು ಹುಡಿ ಮಾಡಿಹಾಕುವುದು. ಅದಕ್ಕೆ ಲವಂಗ, ಗೋಡಂಬಿ, ದ್ರಾಕ್ಷಿಯನ್ನು ತುಪ್ಪದಲ್ಲಿ ಹುರಿದು ಹಾಕಿ ಕಲಸುವುದು. ಮತ್ತೆ 5 ನಿಮಿಷ ಕಾಯಿಸಿದ ಮೇಲೆ ಕೆಳಗಿಳಿಸುವುದು.

ಟಿಪ್ಸ್
*ಹೆಸರುಕಾಳನ್ನು ನೆನಸದಿದ್ದರೆ ಎರಡು ವಿಷಲ್ ಕೂಗಿಸಬೇಕಾಗುತ್ತದೆ. ಅದಕ್ಕಿಂತಲೂ ಹೆಚ್ಚಾಗಿ ಅಕ್ಕಿಯ ಜತೆಗೆ ಬೇಗ ಕರಗುವುದಿಲ್ಲ.
* ಒಂದು ವೇಳೆ ಹೆಸರುಕಾಳು ಕುಕ್ಕರಿನಲ್ಲಿ ಹೆಚ್ಚು ಬೆಂದಿದ್ದರೆ (ಅದರ ಸಿಪ್ಪೆ ಬಿಟ್ಟು ಕರಗುವಂತಿದ್ದರೆ) ಅಕ್ಕಿ ಬೆಂದ ಮೇಲೆ ಅದರೊಂದಿಗೆ ಬೆರಸಬೇಕು. ಕಾಳಿನಂತೆಯೇ ಇದ್ದರೆ ಅಕ್ಕಿಯೊಂದಿಗೆ ಬೇಯಿಸಬಹುದು.
* ಅಕ್ಕಿಯೊಂದಿಗೆ ಅರೆ ಬೆಂದ ಹೆಸರುಕಾಳನ್ನೂ ಬೇಯಿಸಿದರೆ ಎರಡು ಧಾನ್ಯಗಳ ನಡುವೆ ಹೊಂದಿಕೆ ಉಂಟಾಗಿ ರುಚಿ ಹೆಚ್ಚುತ್ತದೆ.
* ಬೆಲ್ಲವನ್ನು ಸೇರಿಸಿದ ಮೇಲೆ ಆಗಾಗ್ಗೆ ಸೌಟಿನಿಂದ ತಿರುವುತ್ತಿರಬೇಕು.
* ಬೆಲ್ಲ ಕರಗಿ ಪಾಕ ಉಂಟಾಗುವುದರಿಂದ ತಿರುವದಿದ್ದರೆ ತಳ ಹಿಡಿಯುವುದು ಬೇಗ.

ಹೆಸರುಬೇಳೆ ಸಿಹಿ ಬೋಂಡಾ
ನೂರೈವತ್ತು ಗ್ರಾಂ ಹೆಸರುಬೇಳೆಯನ್ನು ಮೊದಲು ಬೇಯಿಸಿಕೊಳ್ಳಬೇಕು. ನಂತರ ಒಂದು ತೆಂಗಿನಕಾಯಿಯನ್ನು ತುರಿದಿಟ್ಟುಕೊಳ್ಳಬೇಕು. ಅದಕ್ಕೆ ಸ್ವಲ್ಪ ಏಲಕ್ಕಿ ಬೆರಸಿ ತರಿತರಿಯಾಗಿ ರುಬ್ಬಿಕೊಳ್ಳಬೇಕು. 5 ಅಚ್ಚು ಬೆಲ್ಲವನ್ನು ಒಲೆಯ ಮೇಲೆ ಪಾಕವನ್ನಾಗಿ ಮಾಡಿಕೊಳ್ಳಬೇಕು. ನಂತರ ಬೇಯಿಸಿದ ಹೆಸರುಬೇಳೆ ಮತ್ತು ತೆಂಗಿನಕಾಯಿಯನ್ನು ಹಾಕಿ ಸ್ವಲ್ಪ ಬಾಡಿಸಬೇಕು. ಕಂಪು ಬರುವವರೆಗೆ ಅದನ್ನು ಬಾಡಿಸಿ ಒಂದು ಬಟ್ಟಲಿಗೆ ಹಾಕಿ ಆರಲು ಬಿಡಬೇಕು. ಸ್ವಲ್ಪ ಹೊತ್ತಿನ ಬಳಿಕ ಸಣ್ಣ ಸಣ್ಣ ಉಂಡೆಗಳನ್ನಾಗಿ ಮಾಡಬೇಕು. ಅದಕ್ಕಿಂತ ಒಂದು ಗಂಟೆ ಮೊದಲು ಎರಡು ಮುಷ್ಟಿ ಅಕ್ಕಿಯನ್ನು ನೆನೆಸಿ ದೋಸೆ ಹಿಟ್ಟಿನ ಮಾದರಿಯಲ್ಲಿ ಅರೆದಿಟ್ಟುಕೊಳ್ಳಬೇಕು.
ಆ ಉಂಡೆಯನ್ನು ಕರಿಯಲು ಬೇಕಾಗುವಷ್ಟು ಎಣ್ಣೆಯನ್ನು ಕಾಯಲಿಡಬೇಕು. ಹದ ಕಾವು ಬಂದ ಮೇಲೆ ಅರೆದಿಟ್ಟ ಅಕ್ಕಿ ಹಿಟ್ಟಿನಲ್ಲಿ ಉಂಡೆಗಳನ್ನು ಹಾಕಿ ಬೋಂಡಾ ಬಿಡುವಂತೆ ಎಣ್ಣೆಯಲ್ಲಿ ಕರಿಯಬೇಕು.
ಕೆಂಪಾದ ಮೇಲೆ ತೆಗೆದರೆ ಹೆಸರು ಬೇಳೆ ಸಿಹಿ ಬೋಂಡಾ ರೆಡಿ.

ಟಿಪ್ಸ್
* ಉಂಡೆಯನ್ನು ಕರೆಯಲು ಅರೆದ ಅಕ್ಕಿ ಹಿಟ್ಟಿನ ಬದಲು ಹಸಿ ಹಿಟ್ಟು (ಅಂಗಡಿಯಲ್ಲಿ ದೊರೆಯುವ ಅಕ್ಕಿ ಹಿಟ್ಟು)ನ್ನೂ ಬಳಸಬಹುದು. ಆದರೆ ಅದು ಅಷ್ಟು ಚನ್ನಾಗಿ ಕೂಡಿಕೊಳ್ಳುವುದಿಲ್ಲ.
* ಬೆಲ್ಲದೊಂದಿಗೆ ಹೆಸರುಬೇಳೆ ಮತ್ತು ತೆಂಗಿನಕಾಯಿ ಬಾಡಿಸುವಾಗ ಎಚ್ಚರ ಅವಶ್ಯ. ಇಲ್ಲದಿದ್ದರೆ ಬಲುಬೇಗ ತಳ ಹಿಡಿಯುತ್ತದೆ.
* ಬೆಲ್ಲ ಹಾಕಿದಷ್ಟು ರುಚಿ ಹೆಚ್ಚು. ಹಾಗೆಂದು ಸಿಕ್ಕಾಪಟ್ಟೆ ಹಾಕಿದರೆ ಹೆಚ್ಚು ತಿನ್ನಲು ಆಗದು, ಬಾಯಿ ಕಟ್ಟಿಕೊಳ್ಳುತ್ತದೆ.
* ಇದನ್ನು ಒಂದು ವಾರದವರೆಗೆ ಇಟ್ಟು ತಿನ್ನಬಹುದು.

ಹೆಸರುಕಾಳಿನ ಪಾನಕ
ಹೆಸರುಕಾಳನ್ನು ರಾತ್ರಿಯೇ ನೆನಸಿಡಬೇಕು. ಬೆಳಗ್ಗೆ ಅದನ್ನು ನುಣ್ಣಗೆ ರುಬ್ಬಿ ನಂತರ ತೆಳುವಾದ ಬಟ್ಟೆಯನ್ನು ತೆಗೆದುಕೊಂಡು ಸೋಸಿ ಅದರ ಹಾಲನ್ನು ತೆಗೆಯಬೇಕು. ಅದಕ್ಕೆ ಬೆಲ್ಲ ಬೆರಸಿ ಅಥವಾ ಸಕ್ಕರೆಯನ್ನಾದರೂ ಬೆರಸಬಹುದು. ಏಲಕ್ಕಿಯನ್ನು ಬೆರಸಿಕೊಂಡರೆ ಸುವಾಸನೆಯುಕ್ತ ಪಾನಕ ರೆಡಿ. ಸ್ವಲ್ಪ ಭಿನ್ನವಾದ ರುಚಿಗೆ ನಿಂಬೆಹಣ್ಣನ್ನು ಹಿಂಡಿಕೊಂಡರೆ ರುಚಿ ಮತ್ತಷ್ಟು ಹೆಚ್ಚುತ್ತದೆ.

Advertisements