ಐದು ಬಗೆಯ ಸೊಪ್ಪಿನ ಹುಳಿ

ಸೊಪ್ಪಿನ ಹುಳಿ ಐದು ಬಗೆಯಲ್ಲಿ ಮಾಡಬಹುದು. ಹರವೆಸೊಪ್ಪು (ಕೀರೆ ಇತ್ಯಾದಿ ಹೆಸರುಗಳಲ್ಲೂ ಕರೆಯುತ್ತಾರೆ) ಬಳಸಿ ಅದ್ಭುತವಾಗಿ ಹುಳಿ ಮಾಡಬಹುದು. ಯಾವಾಗಲೂ ಸೊಪ್ಪಿನ ಹುಳಿ ಮರು ದಿನಕ್ಕೆ ಹೆಚ್ಚು ರುಚಿ ಎನಿಸುತ್ತದೆ.

ನಾಲ್ಕು ಮಂದಿಯ ಕುಟುಂಬಕ್ಕೆ ಎರಡು ಕಟ್ಟು ಸೊಪ್ಪು ಸಾಕು. ಸೊಪ್ಪನ್ನು ಮೊದಲು ಚೆನ್ನಾಗಿ ತೊಳೆದು ಕತ್ತರಿಸಬೇಕು. ನಂತರ ಬೇಯಲು ಒಲೆಯ ಮೇಲೆ ಇಡಿ. ಒಲೆ ಹಚ್ಚುವುದು ಗೊತ್ತೇ ಇದೆ. ಕೂಡಲೇ ಸ್ವಲ್ಪ ಅರಿಶಿನ, ಒಂದು ತುಂಡು ಬೆಲ್ಲ, ಸ್ವಲ್ಪ ಹುಣಸೇಹಣ್ಣು, ಕೊಂಚ ಉಪ್ಪನ್ನು ಹಾಕಿ. ನೀರು ಸ್ವಲ್ಪವಿರಲಿ.

ಬಹಳಷ್ಟು ಬಾರಿ ಉಳಿದ ತರಕಾರಿಗಳಂತೆ ಸೊಪ್ಪಿಗೂ ನೀರು ಜಾಸ್ತಿ ಹಾಕಿಬಿಡಬಾರದು. ಸೊಪ್ಪು ಬೆಂದಂತೆ ಕರಗುವ ಗುಣ ಹೊಂದಿದೆ. ಹಾಗಾಗಿ ಒಮ್ಮೆಲೆ ನೀರು ಜಾಸ್ತಿ ಹಾಕಿದರೆ ಹುಳಿ ಹೋಗಿ ಸಾರು ಮಾದರಿ ಆದೀತು.

ಮೊದಲನೇ ವಿಧಾನ

ಸ್ವಲ್ಪ ಸಾಸಿವೆ (ಎರಡು ಟೀ ಚಮಚ) ಹಾಗೂ ನಾಲ್ಕು ಒಣಮೆಣಸು ಹಾಗೂ ಸ್ವಲ್ಪ ತೆಂಗಿನಕಾಯಿ ಹಾಕಿ ನುಣ್ಣಗೆ ರುಬ್ಬಿ. ನಂತರ ಬೆಂದ ಸೊಪ್ಪಿಗೆ ಬೆರೆಸಿ. ಚೆನ್ನಾಗಿ ಕುದಿ ಬರಲಿ. ಇದು ಒಂದು ರೀತಿಯ ಹುಳಿ. ಸ್ವಲ್ಪ ಸಾಸಿಮೆಯ ಪರಿಮಳ ಬರುತ್ತೆ, ಚೆನ್ನಾಗಿರುತ್ತೆ.

ಎರಡನೇ ವಿಧಾನ

ಮೂರು ಚಮಚ ಕೊತ್ತಂಬರಿಕಾಳು, ಎರಡು ಚಮಚ ಜೀರಿಗೆ ಹಾಗೂ ನಾಲ್ಕು ಒಣಮೆಣಸನ್ನು ಒಟ್ಟಿಗೇ ಸ್ವಲ್ಪ ಹುರಿಯಿರಿ. ಜಾಸ್ತಿ ಉರಿಯಬೇಡಿ. ನಂತರ ಕಾಯಿಯೊಂದಿಗೆ ನುಣ್ಣಗೆ ರುಬ್ಬಿ ಬೆಂದ ಸೊಪ್ಪಿಗೆ ಸೇರಿಸಿ. ಚೆನ್ನಾಗಿ ಕುದಿ ಬರಲಿ. ನಿಮಗೆ ಬೇಕಾದಂತೆ ಅದಕ್ಕೆ ಸ್ವಲ್ಪ ನೀರು, ಉಪ್ಪು ಬೆರೆಸಿ.

ನಂತರ ಒಂದು ಗೆಡ್ಡೆ ಬೆಳ್ಳುಳ್ಳಿಯನ್ನು ಸುಲಿದು, ಅದನ್ನು ಕೆಂಪಗೆ ಕಾಯಿಸಿ ಒಗ್ಗರಣೆ ಕೊಡಿ. ಬಹಳ ಚೆನ್ನಾಗಿರುತ್ತದೆ, ಅದರಲ್ಲೂ ಒಂದು ದಿನದ ನಂತರ ಈ ಹುಳಿ ತಿನ್ನಲೂ ಬಹಳ ರುಚಿ.

ಮೂರನೇ ವಿಧಾನ

ಸೊಪ್ಪು ಬೇಯಿಸುವಾಗ (ಮೇಲಿನ ವಿಧಾನದಂತೆಯೆ ಬೇಯಿಸಬೇಕು) ಅದಕ್ಕೆ ಮೂರು ಹಸಿಮೆಣಸು ಸೀಳಿ ಹಾಕಿ. ಒಂದು ತುಂಡು ಶುಂಠಿಯನ್ನೂ ಸಣ್ಣದಾಗಿ ಕತ್ತರಿಸಿ ಹಾಕಿ. ಅವೆಲ್ಲವೂ ಚೆನ್ನಾಗಿ ಬೆಂದ ಮೇಲೆ ಒಂದು ಸಾಸಿವೆ ಒಗ್ಗರಣೆ ಕೊಟ್ಟು ಬಿಡಿ. ಜಾಸ್ತಿ ನೀರು ಹಾಕದೇ ಸ್ವಲ್ಪ ಗಟ್ಟಿ ಗಟ್ಟಿಯಾಗಿಯೇ ಇರಲಿ. ಇದನ್ನು ಸೊಪ್ಪಿನ ಗಸಿಯಂತಲೂ ಕರೆಯುತ್ತಾರೆ. ಚೆನ್ನಾಗಿರುತ್ತೆ. ಸೊಪ್ಪಿನ ಬೋಳುಹುಳಿ ಎಂತಲೂ ಹೇಳುತ್ತಾರೆ, ಇದಕ್ಕೆ ತೆಂಗಿನಕಾಯಿ ಹಾಕುವುದಿಲ್ಲ.

ನಾಲ್ಕನೇ ವಿಧಾನ

ಕೇವಲ ಮೂರು ಚಮಚ ಕೊತ್ತಂಬರಿ ಕಾಳು ಹಾಗೂ ಹಸಿಮೆಣಸನ್ನು ಹುರಿಯದೇ ಹಸಿಯಾಗಿಯೇ ತೆಂಗಿನಕಾಯಿಯೊಂದಿಗೆ ರುಬ್ಬಿ. ನಂತರ ಬೆಂದ ಸೊಪ್ಪಿನೊಂದಿಗೆ ಸೇರಿಸಿ ಕುದಿಸಿ. ಇದಕ್ಕೆ ಒಣಮೆಣಸನ್ನೂ ಹಾಕಬಹುದು. ಇದೂ ಚೆನ್ನಾಗಿರುತ್ತದೆ.

ಐದನೇ ವಿಧಾನ

ಸೊಪ್ಪನ್ನು ಸ್ವಲ್ಪ ಉಪ್ಪು, ಹುಳಿ, ಬೆಲ್ಲದೊಂದಿಗೆ ಕೊಂಚ ತೊಗರಿಬೇಳೆ ಹಾಕಿ ಬೇಯಿಸಿ. ಚೆನ್ನಾಗಿ ಕರಗುವಂತಾಗಲಿ. ನಂತರ ಕೇವಲ ತೆಂಗಿನಕಾಯಿ ಮತ್ತು ನಾಲ್ಕು ಒಣಮೆಣಸು ಸೇರಿಸಿ ರುಬ್ಬಿ. ಆ ಮಿಶ್ರಣವನ್ನು ಬೆಂದ ಸೊಪ್ಪಿನೊಂದಿಗೆ ಬೆರೆಸಿ ಕುದಿಸಿ. ಇದೂ ಬಹಳ ಚೆನ್ನಾಗಿರುತ್ತೆ. ಮುದ್ದೆ ಇತ್ಯಾದಿಗಳಿಗೆ ರುಚಿ.

ಟಿಪ್ಸ್

* ಸೊಪ್ಪು ಯಾವಾಗಲೂ ಚಪ್ಪೆ ಚಪ್ಪೆ ಇರುತ್ತದೆ. ಹಾಗಾಗಿ ಉಪ್ಪು, ಹುಳಿ, ಬೆಲ್ಲ ಒಟ್ಟಿಗೇ ಹಾಕಿ ಬೇಯಿಸಿದರೆ ಸೊಪ್ಪು ಅವೆಲ್ಲವನ್ನೂ ಹೀರಿಕೊಂಡು ಬೇಯುತ್ತೆ. ತಿನ್ನಲೂ ರುಚಿ

* ತರಕಾರಿಗಳನ್ನು ಬೇಯಿಸುವಾಗ ಉಪ್ಪು, ಹುಳಿ ಹಾಕಿದರೆ ಬೇಗ ಬೇಯೊಲ್ಲ ಎನ್ನುವ ಮಾತಿದೆ. ಅದು ಸೊಪ್ಪಿಗೆ ಅನ್ವಯಿಸದು.

* ಬೆಳ್ಳುಳ್ಳಿ ಒಗ್ಗರಣೆ ಕೊಡುವುದಕ್ಕೆ ಒಂದು ಕಾರಣವಿದೆ. ಸೊಪ್ಪು ಶೀತವಾಯು ಗುಣವುಳ್ಳದ್ದು. ಅದಕ್ಕೆ ಬೆಳ್ಳುಳ್ಳಿಯ ಒಗ್ಗರಣೆ ಕೊಟ್ಟರೆ ಶೀತವಾಯುವಿನಿಂದ ಉಂಟಾಗುವ ತೊಂದರೆಯನ್ನು ತಪ್ಪಿಸಿಕೊಳ್ಳಬಹುದು. ಹಾಗೆಯೇ ಶುಂಠಿ ಬಳಸುವುದೂ ಅದಕ್ಕೇ.

* ಸದಾ ಸೊಪ್ಪಿನ ಹುಳಿಗೆ ತೊಗರಿ ಬೇಳೆ ಬೇಕೆಂದೇನೂ ಇಲ್ಲ. ಅದಿಲ್ಲದೆಯೂ ಮಾಡಬಹುದು.

* ಇದೇ ರೀತಿ ಹುಳಿದ ಸೊಪ್ಪುಗಳ ಹುಳಿಯನ್ನೂ ಮಾಡಬಹುದು. ಹುಳಿಸೊಪ್ಪು ಎಂದೇ ಮಾರುಕಟ್ಟೆಯಲ್ಲಿ ಸಿಗುತ್ತದೆ. ಅದನ್ನು ಬೇಯಿಸುವಾಗ ಮತ್ತೆ ಹುಳಿ ಹಾಕುವ ಅಗತ್ಯವಿಲ್ಲ.

Advertisements