ನಾನು ಮಾಡೋ ಅಕ್ಕಿ ರೊಟ್ಟಿ

ಅಕ್ಕಿ ರೊಟ್ಟಿ
ಬಹಳಷ್ಟು ಮಂದಿಗೆ ಅಕ್ಕಿ ರೊಟ್ಟಿ ಮಾಡುವುದೆಂದರೆ ಬಹಳ ರಿಸ್ಕ್. ಅದರರ್ಥ ಬಹಳ ಸಮಯ ಹಿಡಿಯುವ ಕೆಲಸ. ಜತೆಗೆ ರೊಟ್ಟಿ ತೆಳ್ಳಗೆ ನ್ಯೂಸ್ ಪೇಪರ್‌ನಂತೆ ಬಂದರೆ ತಿನ್ನಲಿಕ್ಕೆ ಚೆಂದ. ದಪ್ಪ ಆಗಿಬಿಟ್ಟರೆ ತಿನ್ನಲಿಕ್ಕೆ ಕಷ್ಟ. ಹೀಗೇ ನಾನಾ ಸಮಸ್ಯೆಗಳು.
ಇದರ ಮಧ್ಯೆ ಮತ್ತಷ್ಟು ಕಾಡುವ ಸಮಸ್ಯೆಯೆಂದರೆ ರೊಟ್ಟಿ ತಟ್ಟೋದು ಹೇಗೆ ? ಬಾಳೆ ಎಲೆ ಮೇಲೆ ತಟ್ಟಿದ್ರೆ ಹೇಗೆ ? ನಂದಿನ ಹಾಲಿನ ಕವರ್ ಒಡೆದು ಅಗಲಮಾಡಿ ಅದರ ಮೇಲೆ ತಟ್ಟಿದ್ರೆ, ಹಾಗೆಯೇ ಕಾವಲಿ ತಣ್ಣಗೆ ಆಗುವವರೆಗೆ ಕಾದ ಮೇಲೆ ಅದರಲ್ಲೇ ತಟ್ಟಿದರೆ ಹೇಗೆ…ಇಂಥ ಹಲವು ಪ್ರಶ್ನೆಗಳಿವೆ.
ನಾವೇ ಕಂಡುಕೊಂಡ ಸುಲಭ ವಿಧಾನ ಈಗ ಹೇಳುತ್ತಿದ್ದೇನೆ. ನೋಡಿ, ಪ್ರಯತ್ನ ಪಡಿ. ನಿಜವಾಗಲೂ ಬಹಳ ಸುಲಭವಾದದ್ದು ಹಾಗೂ ಬೇಗ ಆಗುವಂಥದ್ದು.
ಸಾಮಾನು ವಿವರ (ಮೂರ್ನಾಲ್ಕು ಮಂದಿಗೆ ಪ್ರಮಾಣ)
ಮುಕ್ಕಾಲು ಕೆ. ಜಿ. ಅಕ್ಕಿಹಿಟ್ಟು, ಒಂದು ಹಿಡಿ ಚಿರೋಟಿ ರವೆ, ನಾಲ್ಕು ಈರುಳ್ಳಿ, ನಾಲ್ಕು ಹಸಿಮೆಣಸು, ಕರಿಬೇವಿನ ಸೊಪ್ಪು, ಕೊತ್ತಂಬರಿ ಸೊಪ್ಪು, ಸಣ್ಣ ತುಂಡು ಶುಂಠಿ, ಕೊಂಚ ಬಿಳಿ ಎಳ್ಳು, ತೆಂಗಿನತುರಿ, ಸ್ವಲ್ಪ ಮಜ್ಜಿಗೆ ಅಥವಾ ಮೊಸರು, . ಇದು ಮೂಲ ವಸ್ತುಗಳು.
ಇದಲ್ಲದೇ, ಇದಕ್ಕೆ ಕ್ಯಾರೆಟ್, ಸ್ವಲ್ಪ ಕೋಸು, ಬೀನ್ಸ್ ಹೀಗೆ ಹಲವು ತರಕಾರಿಗಳನ್ನು ಸಣ್ಣಗೆ ಹೆಚ್ಚಿ ಅಥವಾ ತುರಿದು ಹಾಕಲೂಬಹುದು.

ಅರ್ಚನಾ ಕಳುಹಿಸಿದ ಚಿತ್ರ
ಅರ್ಚನಾ ಕಳುಹಿಸಿದ ಚಿತ್ರ

ಈರುಳ್ಳಿಯನ್ನು ಸಣ್ಣಗೆ ತುಂಡು ಮಾಡಿಕೊಳ್ಳಿ. ಶುಂಠಿಯೂ ಸಣ್ಣಗಾಗಬೇಕು. ನಂತರ ಕೊತ್ತಂಬರಿ ಸೊಪ್ಪು, ಕರಿಬೇವಿನಸೊಪ್ಪು, ಹಸಿಮೆಣಸಿನ ತುಂಡುಗಳನ್ನು ಒಂದು ಪಾತ್ರೆಗೆ ಹಾಕಿಕೊಳ್ಳಿ. ಅರ್ಧ ತೆಂಗಿನಕಾಯಿಯನ್ನು ತುರಿದು ಹಾಕಿಕೊಳ್ಳಿ. ಬೇಕಾದಷ್ಟು ಉಪ್ಪು ಹಾಕಿ. ಮೂರು ಚಮದಷ್ಟು ಬಿಳಿ ಎಳ್ಳನ್ನೂ ಹಾಕಿ ಕಲಸಿಕೊಳ್ಳಿ. ಸ್ವಲ್ಪ ನಾದುವಂತೆ ತಿಕ್ಕಿಕೊಳ್ಳಿ. ನಂತರ ಅದಕ್ಕೆ ಮುಕ್ಕಾಲುಕೆಜಿ ಅಕ್ಕಿ ಹಿಟ್ಟು ಹಾಕಿಕೊಳ್ಳಿ. ಒಂದು ಮುಷ್ಟಿಯಷ್ಟು ಚಿರೋಟಿ ರವೆ (ಕೇಸರಿಬಾತು ರವೆ) ಹಾಕಿಕೊಳ್ಳಿ. ಒಂದು ಚಿಕ್ಕ ಲೋಟದಷ್ಟು ಮಜ್ಜಿಗೆ ಅಥವಾ ಮೊಸರನ್ನು ಹಾಕಿ ಗಟ್ಟಿಯಾಗಿ ಕಲೆಸಿಕೊಳ್ಳಿ. ಅಲ್ಲಿಗೆ ಹಿಟ್ಟು ಸಿದ್ಧ. ಐದು ನಿಮಿಷ ಹಾಗೆಯೇ ಮುಚ್ಚಿಡಿ.
ತಟ್ಟುವ ವಿಧಾನ
ರೊಟ್ಟಿ ತಟ್ಟೆಗೆ ಎಣ್ಣೆ ಹಚ್ಚಿಕೊಳ್ಳಿ. ಅದಕ್ಕೆ ಒಂದು ಉಂಡೆ ಹಿಟ್ಟನ್ನು ಹಿಟ್ಟು ಕೈಯಲ್ಲೇ ತಟ್ಟುತ್ತಾ ಹೋಗಿ. ಬೇಕಾದರೆ ಕೈ ಬೆರಳಿಗೆ ಸ್ವಲ್ಪ ಎಣ್ಣೆ ಮುಟ್ಟಿಕೊಂಡರೆ ಚೆನ್ನಾಗಿ ತಟ್ಟಬಹುದು. ಅದನ್ನು ಒಲೆಯ ಮೇಲಿಟ್ಟು, ಎರಡು ಚಮಚ ಎಣ್ಣೆ ಹಾಕಿ ಕಾಯಿಸಿ. ಸಣ್ಣಗಿನ ಕಾವಿನಲ್ಲೇ ಬೆಂದರೆ, ಒಳ್ಳೆ ಕೆಂಪಗಾಗುತ್ತದೆ. ಅಲ್ಲಿಗೆ ರೊಟ್ಟಿ ತಿನ್ನಲು ಸಿದ್ಧ
ಸುಲಭ ವಿಧಾನ
ಬಾಳೆ ಎಲೆಯಲ್ಲಿ ತಟ್ಟಿ ಕಾವಲಿಗೆ ಹಾಕಿ, ಸ್ವಲ್ಪ ಬಿಸಿಯಾಗುತ್ತಿದ್ದಂತೆ ಆ ಎಲೆಯನ್ನು ಮೆಲ್ಲಗೆ ತೆಗೆದು ಮತ್ತೆ ಹೊಸ ರೊಟಿಯನ್ನು ತಟ್ಟಬಹುದು. ಆದರೆ ಮೂರ‍್ನಾಲ್ಕು ರೊಟ್ಟಿ ತಟ್ಟಿದ ನಂತರ ಆ ಎಲೆ ಬಿಸಿ ತಾಗಿ, ತಾಗಿ ಮುದುಡುತ್ತದೆ. ಆಗ ರೊಟ್ಟಿ ಆಕಾರ ಸಣ್ಣದಾಗುತ್ತಾ ಹೋಗುತ್ತದೆ.
ಇನ್ನು ಸ್ವಲ್ಪ ದಪ್ಪಗಿನ ಪ್ಲಾಸ್ಟಿಕ್ ಹಾಳೆಯಲ್ಲಿ ರೊಟ್ಟಿ ತಟ್ಟಿದರೂ, ಅದು ಬಿಸಿಯ ಶಾಖಕ್ಕೆ ಸುತ್ತಲೆಲ್ಲಾ ಕರಗುತ್ತಾ ಹೋಗುತ್ತದೆ. ಕೆಟ್ಟ ವಾಸನೆ, ಅದು ರೊಟ್ಟಿಯ ಹಿಟ್ಟಿನ ಜತೆಗೆ ಸೇರಲೂ ಬಹುದು. ಅದೂ ಬೇಡ.
ಕಾವಲಿಯನ್ನೇ ತಣ್ಣಗೆ ಮಾಡಿ ರೊಟ್ಟಿ ತಟ್ಟುವುದಾದರೆ, ಸಮಯವೂ ಪೋಲು, ಜತೆಗೆ ಗ್ಯಾಸ್ ಪೋಲು. ಯಾಕೆಂದರೆ, ಪ್ರತಿ ಬಾರಿಯೂ ಕಾವಲಿ ತಣ್ಣಗಾಗಲು ಐದು ನಿಮಿಷ ಬೇಕು. ನಂತರ ರೊಟ್ಟಿ ತಟ್ಟಿ ಒಲೆಗೆ ಇಟ್ಟರೆ, ಆ ಕಾವಲಿ ಕಾಯಲಿಕ್ಕೆ ಮತ್ತೆ ಹತ್ತು ನಿಮಿಷ ಬೇಕು. ಇದು ನ್ಯಾಷನಲ್ ವೇಸ್ಟ್
ಹಾಗಾದರೆ ಮಾಡೋದು ಹೇಗೆ
ಮಾರುಕಟ್ಟೆಯಲ್ಲಿ ಅಲ್ಯುಮಿನಿಯಂ, ಇಂಡಾಂಲಿಯಂ ತಟ್ಟೆ ಸಿಗುತ್ತದೆ. ದುಂಡಗಿರುವಂಥ ತಟ್ಟೆ. ಇವು ಜೈಲು ತಟ್ಟೆ ಎಂದೇ ಪ್ರಸಿದ್ಧ. ೨೦ ರಿಂದ ೩೦ ರೂ. ನ ತಟ್ಟೆ. ಸಿನಿಮಾಗಳಲ್ಲಿ ಕೈದಿಗಳು ಹಿಡಿದಿರುವ ತಟ್ಟೆಗಳನ್ನು ನೋಡಿರಬಹುದು. ಅಂಥ ಎರಡು ತಟ್ಟೆಯನ್ನು ತಂದಿಟ್ಟುಕೊಳ್ಳಿ. ಇವು ಮುಚ್ಚಳದ ಮಾದರಿಯಲ್ಲಿರುವುದಿಲ್ಲ, ಗಮನಿಸಿ. ನಾನು ಹೇಳುತ್ತಿರುವ ತಟ್ಟೆ, ಸ್ವಲ್ಪ ಗುಂಡಿಯಂತಿರುತ್ತದೆ. ಬೆಂಗಳೂರಿನಲ್ಲಾದ್ರೆ, ಕೆ. ಆರ್. ಮಾರುಕಟ್ಟೆಯಲ್ಲಿ ಲಭ್ಯ.
ತಟ್ಟೆಯ ಮಾದರಿ ಚಿತ್ರ, ಇನ್ಣೂ ಸ್ವಲ್ಪ ಗುಂಡಿಯಂತಿರುತ್ತದೆ.
ತಟ್ಟೆಯ ಮಾದರಿ ಚಿತ್ರ, ಇನ್ಣೂ ಸ್ವಲ್ಪ ಗುಂಡಿಯಂತಿರುತ್ತದೆ.

ಹೊಸ ತಟ್ಟೆಗೆ ಹಿಂದಿನ ದಿನವೇ ಕೊಂಚ ಎಣ್ಣೆ ಸವರಿಡಿ. ಬೆಳಗ್ಗೆ ಹಿಟ್ಟು ಕಲಸಿದ ಮೇಲೆ ಒಂದು ತಟ್ಟೆಗೆ ಹಿಟ್ಟು ಹಾಕಿ ತೆಳ್ಳಗೆ (ಎಷ್ಟು ಸಾಧ್ಯವೋ ಅಷ್ಟು) ತಟ್ಟಿ, ಬೇಯಿಸಿ. ಪಕ್ಕದಲ್ಲೇ ಒಂದು ದೊಡ್ಟ ಊಟದ ತಟ್ಟೆಯಲ್ಲಿ ಮುಕ್ಕಾಲು ಎನಿಸುವಷ್ಟು ನೀರು ತುಂಬಿಸಿಡಿ. ನಮ್ಮ ರೊಟ್ಟಿ ತಟ್ಟೆಗಿಂತ ಊಟದ ತಟ್ಟೆ ದೊಡ್ಡದಿರಬೇಕು.
ಒಲೆ ಮೇಲಿಟ್ಟ ಹಿಟ್ಟು ಬೆಂದು ಅದನ್ನು ತೆಗೆದ ಕೂಡಲೇ ಆ ತಟ್ಟೆಯನ್ನು ಈ ಊಟದ ತಟ್ಟೆಯ ನೀರಿನ ಮೇಲೆ ತೇಲಲು ಬಿಡಿ. ಹತ್ತು ಸೆಕೆಂಡುಗಳಲ್ಲಿ ಅದು ತಣ್ಣಗಾಗುತ್ತದೆ. ತಕ್ಷಣವೇ ರೊಟ್ಟಿ ಹಿಟ್ಟು ಹಚ್ಚಿ ಮತ್ತೆ ಬೇಯಿಸಿ. ಹೀಗೇ, ಕಾದ ರೊಟ್ಟಿ ತಟ್ಟೆಯನ್ನು ತಣ್ಣಗೆ ಮಾಡಿಕೊಂಡು ಸುಲಭ ಮತ್ತು ಬೇಗ ರೊಟ್ಟಿ ಮಾಡಬಹುದು. ಇದರಿಂದ ಗ್ಯಾಸೂ ವೇಸ್ಟಾಗುವುದಿಲ್ಲ, ನೀರೂ ವೇಸ್ಟಾಗುವುದಿಲ್ಲ, ಸಮಯವೂ ಪೋಲಾಗುವುದಿಲ್ಲ.
ಅಂದಹಾಗೆ, ನನಗೆ ಚಿತ್ರ ಕಳುಹಿಸಿಕೊಟ್ಟಿದ್ದು ಅರ್ಚನಾ. ಅವರೂ ರೆಸಿಪಿ ಲೋಕದವರೇ. ಅವರಿಗೆ ಥ್ಯಾಂಕ್ಸ್.
ಗಮನಿಸಬೇಕಾದ ಅಂಶ
* ಬಹಳ ನುಣ್ಣಗಿರುವ ಅಕ್ಕಿ ಹಿಟ್ಟು ಕೊಳ್ಳಬೇಡಿ, ಸ್ವಲ್ಪ ರಫ್ (ರವೆಯಷ್ಟು ಅಲ್ಲ) ಆಗಿರಬೇಕು. ರೊಟ್ಟಿ ಚೆನ್ನಾಗಿ ಬರುತ್ತೆ. ಇನ್ನೊಂದರ್ಥದಲ್ಲಿ ಹೇಳುವುದಾದರೆ ಸ್ವಲ್ಪ ತರಿ-ತರಿ ಇದ್ದರೆ ಚೆನ್ನ
* ಮಜ್ಜಿಗೆ ಹಾಕಿದರೆ ರೊಟ್ಟಿ ಮೃದು ಹಾಗೂ ಪರಿಮಳ ಚೆನ್ನಾಗಿರುತ್ತೆ.
* ಒಲೆಯ ಕಾವು ಹದವಾಗಿರಲಿ, ತಟ್ಟೆ ಸುಡುವಷ್ಟು ಬೇಡ.
* ರೊಟ್ಟಿ ಹಿಟ್ಟು ಗಟ್ಟಿಯಾಗಿರುವಾಗ ತಟ್ಟಲು ಸ್ವಲ್ಪ ಕಷ್ಟವೆನಿಸಬಹುದು. ಆದರೆ ರೊಟ್ಟಿ ರೋಸ್ಟ್ ಆಗಿರುತ್ತೆ. ಅದೇ ಸ್ವಲ್ಪ ನೀರಾಗಿ ಹಿಟ್ಟು ಕಲೆಸಿಕೊಂಡರೆ, ನಾರಿನಂತೆ ರೋಸ್ಟಾಗದು.
* ಈ ರೊಟ್ಟಿಗೆ ಕಾಯಿ ಚಟ್ನಿ ಇದ್ದರೆ ಚೆನ್ನ.

Advertisements

20 thoughts on “ನಾನು ಮಾಡೋ ಅಕ್ಕಿ ರೊಟ್ಟಿ

 1. ಚೆನ್ನಾಗಿದೆ – ಒಂದೆರಡು ಹೆಚ್ಚುವರಿ ಸಲಹೆಗಳು, ಆಸಕಕ್ತರಿಗೆ,

  ಇದರಲ್ಲೇ ವೆರೈಟಿಗೆ, ಸೀಮೆಬದನೆಕಾಯಿ, ಸೌತೇಕಾಯಿ, ಹಾಲುಸೋರೇಕಾಯಿ ಇವುಗಳ ತುರುವಲನ್ನೂ ಹಾಕಿ ರೊಟ್ಟಿ ಮಾಡಬಹುದು (ಸ್ವಲ್ಪ ಸಿಹಿಸಿಹಿಯಾಗಿ ಚೆನ್ನಾಗಿರುತ್ತೆ).

  ಈರುಳ್ಳಿ ಹಾಕಿದರೆ, ಇನ್ಯಾವ ತರಕಾರಿಯೂ ಹಾಕಬೇಡಿ – ಯಾವ ತರಕಾರಿಯ ಘಮವನ್ನೂ, ರುಚಿಯನ್ನೂ ಅದು ಮುಚ್ಚಿ ಹಾಕುತ್ತೆ.

  ಬಾಂಡ್ಲೆಯಲ್ಲಿ ತಟ್ಟಿ ಮಾಡಿದರೆ, ಅಕ್ಕಿ ರೊಟ್ಟಿ ಸಿಕ್ಕಾಪಟ್ಟೆ ಸ್ಪೆಶಲ್ ರುಚಿ 🙂

 2. ನಾನು ಇಲ್ಲಿ ಬಲೆ ಎಲೆ ಸಿಗದೆ ಇದ್ರೆ ಅಕ್ಕಿ ರೊಟ್ಟಿ ಮಾಡೋಕಾಗಲ್ಲ ಅಂತ ಇರ್ತಾ ಇದ್ದೆ. ಇದೊಂದು ಹೊಸ ವಿಧಾನ ತಿಳಿದುಕೊಂಡ ಹಾಗಾಯ್ತು. ಚೆನ್ನಾಗಿದೆ ನಾವುಡರೇ. ನಾನು ಹೀಗೆ ಮೊಸರು ಮತ್ತೆ ನೀರು ಹಾಕಿ ಕಲಸಿ ನು ಮಾಡ್ತೀನಿ ಮತ್ತು ಸೌತೆಕಾಯಿ ತೂರಿದು ಹಾಕಿ ಕಲಸಿಯೂ ಮಾಡ್ತೀನಿ. ಅಕ್ಕೀರೊತ್ಟಿ ಮಜಾನೇ ಬೇರೆ. ನನ್ನ ಮೆಚ್ಚಿನ ತಿಂಡಿಗಳಲ್ಲೊಂದು. ಸಿಹಿ ಇಷ್ಟ ಆಗುವವರು ಇದಕ್ಕೆ ಸ್ವಲ್ಪ ಜೇನುತುಪ್ಪ ಹಚ್ಚಿಕೊಂಡು ತಿಂದರು ರುಚಿಯಾಗಿರುತ್ತೆ.

 3. ಹೌದು ನೀಲಾಂಜನರೇ,
  ಬರಿಯ ಸೌತೆಕಾಯಿ ರೊಟ್ಟಿ ಚೆಂದ, ಸೌತೆಕಾಯಿ ದೋಸೇನೂ ಬಹಳ ಚೆಂದ. ಕೆಲವೊಮ್ಮೆ ವೆಜಿಟಬಲ್ ರೊಟ್ಟಿ ಅಂದ್ರೆ ಈರುಳ್ಳಿಯ ಜತೆಗೆ ತರಕಾರಿ ಹಾಕೋದಿದೆ. ಸಲಹೆ ನೀಡಿದ್ದಕ್ಕೆ ಧನ್ಯವಾದಗಳು.
  ನಾವಡ

 4. ಚೆನ್ನಾಗಿದೆ ಸರ್..
  ಆದ್ರೆ ನಮ್ಮೂರಲ್ಲಿ ಅಮ್ಮ ಕಲ್ಲಿನ ಕಾವಲಿಯಲ್ಲಿ ಪೇಪರ್ ರೊಟ್ಟಿ ಮಾಡ್ತಾ ಇದ್ರು..ಅದಕ್ಕೆ ಸಾರು ಹಾಕೊಂಡು ತಿನ್ನಕ್ಕೆ ಚೆನ್ನಾಗಿರ್ತಾ ಇತ್ತು. ನೀವು ಹೇಳಿದ ವಿಧಾನವನ್ನು ನಾನೂ ಪ್ರಯತ್ನಿಸಬೇಕು. ರೊಟ್ಟಿ ಚೆನ್ನಾಗಾದ್ರೆ ನಿಮಗೆ ಕಳಿಸಿಕೊಡುವೆ ಆಯಿತಾ?
  -ಧರಿತ್ರಿ

 5. ಚೇತ್ ಪ್ರೊಫೆಸರ್, ನಮ್ಮ ಮನೇಲಿ ಜೈಲು ತಟ್ಟೆ ಬೇಕಾದಷ್ಟಿದೆ.. ಆದ್ರೆ ಇಲ್ಲಿಗೆ ಬಂದು ಕಲೆಕ್ಟ್ ಮಾಡೋದಾದ್ರೆ ಮಾತ್ರ ಕೊಡೋದು.. ಕಂಡಿಶನ್ ಓ.ಕೆ. ಆದ್ರೆ ನೋಡಿ..

  ಮೊದಲೇ ಫೋನ್ ಮಾಡಿ ಬಂದ್ರೆ ರೊಟ್ಟಿ ಫ್ರೀ…

  (ನಾವಡರಿಗೆ ಇದ್ಯಾವುದೂ ಹೇಳಬೇಡಿ..)

 6. ದಪ್ಪಮೆಣಸಿನಕಾಯಿ(ಕ್ಯಾಪ್ಸಿಕಂ) ಸ್ಲೈಸ್ ಮಾಡಿ ಹಾಕಿದ್ರೆ ಚೆನ್ನಾಗಿರತ್ತೆ – ಈರುಳ್ಳಿ ಜೊತೆಗೂ ಹಾಕ್ಬಹುದು… ಮತ್ತೆ ಸಬ್ಬಸಿಗೆ ಸೊಪ್ಪು / ಮೆಂತ್ಯ ಸೊಪ್ಪು ಹಾಕಿ ಮಾಡೋದೂ ಸೂಪರಾಗಿರತ್ತೆ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out /  ಬದಲಿಸಿ )

Google photo

You are commenting using your Google account. Log Out /  ಬದಲಿಸಿ )

Twitter picture

You are commenting using your Twitter account. Log Out /  ಬದಲಿಸಿ )

Facebook photo

You are commenting using your Facebook account. Log Out /  ಬದಲಿಸಿ )

Connecting to %s