ಬ್ಯಾಚುಲರ್ ಕಿಚನ್ ನಲ್ಲಿ “ಬೆಳ್ಳುಳ್ಳಿ ಅನ್ನ”

ಇದು ಬ್ಯಾಚುಲರ್ ಕಿಚನ್ ನ ರೆಸಿಪಿ. ಬ್ರಹ್ಮಚಾರಿ-ಣಿಗಳಿಗಾಗಿಯೇ ಇರುವಂಥದ್ದು. ಮಾಡುವುದು ಸುಲಭವೂ ಮತ್ತು ಅಗ್ಗವೂ…

ಬೆಳ್ಳುಳ್ಳಿ ಎಂದ ಕೂಡಲೇ ಮೂಗು ಮುರಿಯಬೇಡಿ. ಅದರ ವಾಸನೆ ಅಥವಾ ಪರಿಮಳ ಸ್ವಲ್ಪ ಘಾಟಿರಬಹುದು. ಆದರೆ ಅದು ಬ್ರಹ್ಮಚಾರಿಗಳ ಗಡಿಬಿಡಿಗೆ ಅನುಕೂಲವಾದಷ್ಟು ಇನ್ಯಾವುದಕ್ಕೂ ಪ್ರಯೋಜನಕ್ಕೆ ಬಾರದು.
ಸಾಮಾನ್ಯವಾಗಿ, ಬ್ರಹ್ಮಚಾರಿಗಳ ರೂಮುಗಳಲ್ಲಿ ಏನೆಂದರೆ…ಅನ್ನ ಮಾಡೋದೇ ಹೆಚ್ಚು. ಇನ್ನು ಅದಕ್ಕೆ ಸಾರು, ಹುಳಿ, ಪಲ್ಯ ಅಂತ ಎಲ್ಲಿ ಮಾಡ್ತಾರೆ. ಹಾಗಂತ ದಿನವೂ ಚಿತ್ರಾನ್ನ ಮಾಡಿ ಮಾಡಿಯೂ ಬೇಜಾರು.
ಆಗ ಬೆಳ್ಳುಳ್ಳಿ ಅನ್ನ ಮಾಡಿ.
ಹತ್ತು ನಿಮಿಷದ ಕೆಲಸವಷ್ಟೇ. ಹಾಗೆ ಹೋಗಿ, ಹೀಗೆ ಬರೋದ್ರೊಳಗೆ ಮಾಡಿಬಿಡಬಹುದು. ಇದಕ್ಕೆ ಹೆಚ್ಚು ಸಾಮಾನುಗಳೂ ಬೇಕಿಲ್ಲ.

ಎರಡು ಗೆಡ್ಡೆ ಬೆಳ್ಳುಳ್ಳಿ
ಸ್ವಲ್ಪ ಕರಿಬೇವಿನ ಎಲೆ
ಸಾಸಿವೆ
ಉದ್ದಿನಬೇಳೆ
ಕಡ್ಲೆಬೇಳೆ
ಹಸಿಮೆಣಸು
ಒಣಮೆಣಸು
ಉಪ್ಪು

ಮೊದಲು ಮಾಡಿದ ಅನ್ನವನ್ನು ಬಟ್ಟಲಿಗೆ ಹಾಕಿ ತಣ್ಣಗಾಗಲು ಬಿಡಿ. ಬೆಳ್ಳುಳ್ಳಿಯ ಸಿಪ್ಪೆ ತೆಗೆದು ಸಿದ್ಧಪಡಿಸಿಟ್ಟುಕೊಳ್ಳಿ. ನಾಲ್ಕು ಹಸಿ ಮೆಣಸು ಸೀಳಿಕೊಳ್ಳಿ.

ಒಗ್ಗರಣೆಗೆ ಎರಡು ಒಣಮೆಣಸು ತುಂಡು ಮಾಡಿಕೊಂಡು, ಒಲೆ ಹಚ್ಚಿ ಬಾಣಲಿ ಇಡಿ (ಪಾತ್ರೆಯೂ ಆದೀತು). ಕಾವು ಸಣ್ಣಗಿರಲಿ. ಸ್ವಲ್ಪ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಅರ್ಧ ಟೀ ಸ್ಪೂನ್ ಸಾಸಿವೆ ಹಾಕಿ, ಪಟ್ ಪಟ್ ಎಂಬ ಸದ್ದು ಕೇಳುತ್ತಿದ್ದಂತೆ ಬೆಳ್ಳುಳ್ಳಿ ಹಾಕಿ. ಬಂಗಾರದ ಬಣ್ಣಕ್ಕೆ ಬರುತ್ತಿದ್ದಂತೆ ಸ್ವಲ್ಪ ಉದ್ದಿನಬೇಳೆ, ಕಡ್ಲೆಬೇಳೆ, ಒಣಮೆಣಸು ಹಾಕಿ. ಕೆಂಪಗಾಗುವಷ್ಟು ಹುರಿಯಿರಿ. ಕೆಂಪಗಾಗುತ್ತಿದ್ದಂತೆ ಹಸಿಮೆಣಸು, ಕರಿಬೇವಿನ ಎಲೆ ಹಾಕಿ ಹುರಿಯಿರಿ. ಆಮೇಲೆ ಉಪ್ಪು ಹಾಕಿ ಅನ್ನವನ್ನು ಹಾಕಿ ಕಲಸಿ. ಅಲ್ಲಿಗೆ ಬೆಳ್ಳುಳ್ಳಿ ಅನ್ನ ಸಿದ್ಧ.

ಇದಕ್ಕೆ ಬೇಕಾದವರು ಲಿಂಬೆಹಣ್ಣಿನ ರಸ ಬೆರೆಸಬಹುದು, ತೆಂಗಿನಕಾಯಿಯ ತುರಿ ಹಾಕಬಹುದು. ಕೊತ್ತಂಬರಿ ಸೊಪ್ಪು ಹಾಕಿ ಅಲಂಕರಿಸಬಹುದು.

ಮತ್ತೊಂದು ಪ್ರಮುಖ ಸಂಗತಿಯೆಂದರೆ, ಬ್ರಹ್ಮಚಾರಿಗಳ ಮನೆಯಲ್ಲಿ ಅನ್ನ ಉಳಿಯುವುದು ಹೆಚ್ಚು. ಇಂದಿನ ಅನ್ನ ನಾಳೆಗೆ ಉಳಿದಾಗ ತಂಗಳನ್ನ ತಿನ್ನಬೇಕು ಎಂದು ಬೇಸರವಿರುತ್ತದೆ. ಆ ದುಃಖವನ್ನು ಇದು ಹೋಗಲಾಡಿಸುತ್ತದೆ. ಅದಕ್ಕೆ ಅನ್ನ ಉಳಿದರೆ, ಅದಕ್ಕೆ ನೀರು ಹಾಕಿಡಿ. ಅದು ಕೆಟ್ಟು ಹೋಗುವುದಿಲ್ಲ. ಅದೇ ಅನ್ನವನ್ನು ಹಿಂಡಿ ಹಿಂಡಿ ನೀರಿನಾಂಶ ತೆಗೆದು ಬೆಳ್ಳುಳ್ಳಿ ಅನ್ನ ಮಾಡಬಹುದು. ಅದೇ ಹೆಚ್ಚು ರುಚಿ.

ಗಮನವಿಡಬೇಕಾದ ಅಂಶ
ಅನ್ನ ಬಟ್ಟಲಿಗೆ ಹಾಕಿ ತಣ್ಣಗೆ ಮಾಡಿದರೆ ಬೆಳ್ಳುಳ್ಳಿ ಅನ್ನ ಮುದ್ದೆಯಾಗುವುದಿಲ್ಲ.
ಇದಕ್ಕೆ ಶುಂಠಿ ಇತ್ಯಾದಿ ಹಾಕಬೇಡಿ. ಬೆಳ್ಳುಳ್ಳಿ ಮತ್ತು ಶುಂಠಿ ಎರಡರ ಘಾಟು ರುಚಿಯನ್ನೇ ಕೆಡಿಸುತ್ತದೆ.
ತಂಗಳನ್ನ ಎಂದು ಹೀಗಳೆಯಬೇಡಿ, ಬೆಳ್ಳುಳ್ಳಿ ಅನ್ನ ಮಾಡಿ.
ಬಹಳ ಸುಲಭ ಮತ್ತು ಕಡಿಮೆ ಸಮಯ ಹಿಡಿಯುವ ತಿಂಡಿ.

Advertisements

3 thoughts on “ಬ್ಯಾಚುಲರ್ ಕಿಚನ್ ನಲ್ಲಿ “ಬೆಳ್ಳುಳ್ಳಿ ಅನ್ನ”

  1. ಯಮ್ಮೀ!! ಇಷ್ಟೊಂದು ಸುಲಭಾನಾ? ನನಗಂತು ಬೆಳ್ಳುಳ್ಳಿ ಅಂದರೆ ಪಂಚಪ್ರಾಣ!! ಬರೆ ಬ್ರಹ್ಮಚಾರಿಗಳಿಗೇನು, ನನ್ನಂಥ ಆಗಾಗಾ ಸುಮ್ಮನೆ ಸೋಮಾರಿತನ ಬಾಧಿಸುವ ಗೃಹಿಣಿಯರಿಗು ನಿಮ್ಮ ಈ ಕಾಲಮ್ಮು ಬಹಳ ಉಪಯೋಗಾ ಆಗುತ್ತೆ.
    ಆಮೇಲೆ ನಾವಡರೆ, ಮಾವಿನಹಣ್ಣಿನ ಸೀಸನ್ನು, ಅದರದು ಯಾವುದಾದರು ವಿಶೇಷ ಅಡುಗೆ ಹೇಳಿಕೊಡಿ ಪ್ಲೀಸ್!!

  2. ಬೆಳ್ಳುಳ್ಳಿಯ ಘಮದ ಸೇರಿಸಿ ನೀವು ಇಷ್ಟು ಚೆನ್ನಾಗಿ ಅಡಿಗೆ ಬಗ್ಗೆ ಬರೀತೀರಿ ಎಂಬ ಹೊಟ್ಟೆ ಕಿಚ್ಚಿನಿಂದ, –
    ಮಿಂಚುಳ್ಳಿ

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s