ಬರಿಯಕ್ಕಿ ದೋಸೆ

ನನಗೆ ಬಹಳ ಇಷ್ಟವಾದ ತಿಂಡಿಯದು. ಇಷ್ಟವಾದದ್ದು ಎರಡು ಕಾರಣಕ್ಕೆ. ಕೆಲಸ ಕಡಿಮೆ ಮತ್ತು ರುಚಿ ಜಾಸ್ತಿ. ಉಳಿದ ದೋಸೆಗಳಂತೆ ಗಂಟೆಗಟ್ಟಲೆ ಕೆಲಸ ಮಾಡಬೇಕಿಲ್ಲ. ಹೆಚ್ಚೆಂದರೆ ಅರ್ಧ ಗಂಟೆ ಸಾಕು. ಇದು ಕರಾವಳಿ ಭಾಗದ್ದು. ಬಹುತೇಕ ಕಡೆಗಳಲ್ಲಿ ಇದನ್ನು “ಬರಿಯಕ್ಕಿ ದೋಸೆ’ ಎನ್ನುತ್ತಾರೆ.
ಕಾರಣ, ಇದಕ್ಕೆ ಉದ್ದಾಗಲೀ, ಮೆಂತ್ಯೆಯಾಗಲೀ ಏನನ್ನೂ ಬಳಸುವುದಿಲ್ಲ. ಕೇವಲ ಅಕ್ಕಿ ಮಾತ್ರ. ಹಾಗಾಗಿ ಬರಿಯಕ್ಕಿ-ಓನ್ಲಿ ರೈಸ್- ದೋಸೆ ಎಂದು ಕರೆಯುತ್ತಾರೆ. ಆದರೆ ಕರಾವಳಿ ಘಟ್ಟ ದಾಟಿ ಈಚೆಗೆ ಬಂದ ಮೇಲೆ ಜನಪ್ರಿಯವಾದದ್ದು “ನೀರು ದೋಸೆ’ ಎಂದೇ.

ಇದಕ್ಕೂ ಕಾರಣವಿದೆ. ಮಾಮೂಲಿ ದೋಸೆ ಹಿಟ್ಟು ಸ್ವಲ್ಪ ದಪ್ಪವಾಗಿರುತ್ತೆ. ಅದಕ್ಕಿಂತ ನೀರಾಗಿರುವಂಥದ್ದು ಈ ದೋಸೆಯ ಹಿಟ್ಟು. ಜತೆಗೆ ದೋಸೆ ಹಿಟ್ಟನ್ನು ಕಾವಲಿಗೆ ಹಾಕಿ ಸುತ್ತುವಂಥ (ಬೇರೆ ದೋಸೆ ಸುತ್ತುವಂತೆ)ದ್ದೇನೂ ಇಲ್ಲ. ಸುಮ್ಮನೆ ಸುರಿದು ಬಿಡುವುದಷ್ಟೇ. ಹಾಗಾಗಿ ಜನ ಸುಲಭವಾಗಿ “ನೀರು ದೋಸೆ’ಎಂದು ಕರೆಯತೊಡಗಿದರು.

ಮಾಡುವ ಬಗೆ
ಹಿಂದಿನ ದಿನ ರಾತ್ರಿ ಸುಮಾರು ಒಂದೂವರೆ ಪಾವು (ಸುಮಾರು ಇಪ್ಪತ್ತೈದು ದೋಸೆಯಾಗಬಲ್ಲದು)ಅಕ್ಕಿ (ದಪ್ಪಕ್ಕಿ)ಯನ್ನು ನೀರಿನಲ್ಲಿ ನೆನೆಸಿಡಬೇಕು. ಬೆಳಗ್ಗೆ ಎದ್ದು ಎರಡು ಬಾರಿ ಚೆನ್ನಾಗಿ ತೊಳೆದು, ಅದಕ್ಕೆ ಸ್ವಲ್ಪ ತೆಂಗಿನಕಾಯಿ ಹಾಕಿ ಅರೆಯಬೇಕು. ನುಣ್ಣಗಾದ ಮೇಲೆ ತೆಗೆದು ಒಂದಿಷ್ಟು ನೀರು ಮತ್ತು ಉಪ್ಪು ಬೆರೆಸಿ ಹತ್ತು ನಿಮಿಷ ಸುಮ್ಮನೆ ಇಡಿ.

ನಂತರ ದೋಸೆ ಕಾವಲಿಯಿಟ್ಟು, ಸ್ವಲ್ಪ ಎಣ್ಣೆ ಹಚ್ಚಿ ಒಂದು ಸೌಟು ದೋಸೆ ಹಿಟ್ಟನ್ನು ಹುಯ್ಯಿರಿ. ಎರಡು ನಿಮಿಷದಲ್ಲಿ ದೋಸೆ ಸಿದ್ಧ. ತೆಳ್ಳಗೆ – ಬೆಳ್ಳಗೆ ದೋಸೆ ಚೆನ್ನಾಗಿರುತ್ತದೆ. ಅದಕ್ಕೆ ಚಟ್ನಿಪುಡಿ ಅಥವಾ ಮಾವಿನಕಾಯಿ ಚಟ್ನಿ ಬೆರೆಸಿಕೊಂಡು ತಿಂದರೆ ಚೆನ್ನ.

ಒಂದೆರಡು ಟಿಪ್ಸ್
* ಅಕ್ಕಿ ಹಿಟ್ಟು ಅರೆದು ತೆಗೆದ ಮೇಲೆ ಅದಕ್ಕೆ ತಣ್ಣೀರು ಹಾಕುವ ಬದಲು ಬಿಸಿನೀರು ಹಾಕಿ. ದೋಸೆ ಮೆದುವಾಗಿರುತ್ತದೆ.
* ಹಿಟ್ಟು ಅರೆಯುವಾಗ ನೀರಿನ ಬದಲು ತೆಂಗಿನಕಾಯಿಯ ನೀರನ್ನು ಹಾಕಿದರೆ ದೋಸೆ ಮೃದುವಾಗುತ್ತದೆ.
* ಹಾಗೆಯೇ ಹಿಟ್ಟಿಗೆ ನೀರಿನ ಬದಲು ಬೆಲ್ಲದ ನೀರು ಅಥವಾ ಕಬ್ಬಿನ ಹಾಲು ಬೆರೆಸಿದರೆ ಸಿಹಿ ನೀರು ದೋಸೆಯಾಗುತ್ತದೆ. ಈ ಸಂದರ್ಭದಲ್ಲಿ ಬಿಸಿ ನೀರು ಬಳಸಬೇಡಿ. ಆದರೆ ಒಲೆಯ ಕಾವು ಜಾಸ್ತಿ ಇಟ್ಟುಕೊಂಡರೆ ದೋಸೆ ಎದ್ದೇಳುವುದು ಕಷ್ಟ. ಬಹಳ ಮೃದುವಾಗುವುದರಿಂದ ಒಂದೇ ಹದದಲ್ಲಿ ಕಾವಿರಲಿ.
ಏನೇ ಅನುಮಾನಗಳಿದ್ದರೂ ಕೇಳಬಹುದು.

Advertisements

ಅವಲಕ್ಕಿ ವೆಜಿಟೆಬಲ್ ಪಲಾವ್

ಈ ಹಿಂದೆ ಅವಲಕ್ಕಿ ಬಿಸಿಬೇಳೆಬಾತ್ ಬರೆದಿದ್ದೆ. ಈ ಬಾರಿ ಅವಲಕ್ಕಿ ವೆಜಿಟೆಬಲ್ ಪಲಾವ್ ಬರೆಯುತ್ತಿದ್ದೇನೆ. ಈ ಪಲಾವ್‌ನಿಂದ ಇರುವ ಮೂರು ಅನುಕೂಲ, ಒಂದು ಅನಾನುಕೂಲ ಎಲ್ಲವನ್ನೂ ಪಟ್ಟಿ ಮಾಡುತ್ತೇನೆ.
ಅನುಕೂಲ
1. ಅನ್ನದ ಪಲಾವ್‌ಗಿಂತ ಇದನ್ನು ಮಾಡಲು ತಗಲುವ ಸಮಯ ಬಹಳ ಕಡಿಮೆ
2. ಅನ್ನದ ಪಲಾವ್ ತಿಂದೂ ತಿಂದೂ ಬೇಸರವಾದವರಿಗೆ ವರದಾನ
3. ಬೆಳಗ್ಗೆಯ ತಿಂಡಿಗೆ ಅನ್ನ ಮಾಡೋದೇ ಎಂದು ಮೂಗು ಮುರಿಯುವವರಿಗೂ ಹೊಸ ರುಚಿ
ಅನಾನುಕೂಲ
1. ಅನ್ನದ ಪಲಾವ್ ಒದಗಿದಂತೆ (ಹೆಚ್ಚಾದಂತೆ) ಇದು ಒದಗದು. ಅದೊಂದೇ ದುಃಖ.
ಹಿಂದಿನ ತಿಂಡಿ ಬಗ್ಗೆ ಬರೆದಾಗ ಬಹಳಷ್ಟು ಮಂದಿ ಬಳಸುವ ಸಾಮಾನುಗಳ ಪಟ್ಟಿಯನ್ನು ಪ್ರತ್ಯೇಕವಾಗಿ ಕೊಡಿ ಎಂದು ಸಲಹೆ ನೀಡಿದ್ದರು. ಅದು ಮಾಮೂಲಿ ಪದ್ಧತಿ. ಅದಕ್ಕೇ ಅದನ್ನು ಮಾಡೋದಿಕ್ಕೆ ಇಷ್ಟವಿರಲಿಲ್ಲ. ಈ ಪಲಾವ್‌ಗೆ ಅನ್ನದ ಪಲಾವ್‌ಗೆ ಬೇಕಾದದ್ದೆಲ್ಲಾ ಬೇಕು.
ಬೇಕಾದ ತರಕಾರಿ : ಮೂರು ಕ್ಯಾರೆಟ್, ಹತ್ತು ಬೀನ್ಸ್, ಒಂದು ನವಿಲು ಕೋಸು, ಒಂದು ಆಲೂಗೆಡ್ಡೆ, ಮೂರು ಟೊಮೆಟೊ.
ಸೊಪ್ಪು : ಸ್ವಲ್ಪ ಕೊತ್ತಂಬರಿ ಸೊಪ್ಪು ಅಥವಾ ಪುದಿನ ಇದ್ದರೆ ಚೆನ್ನ
ಮಸಾಲೆ : ನಾಲ್ಕೈದು ಚೆಕ್ಕೆ ತುಂಡು, ಐದು ಲವಂಗ, ಹತ್ತು ಬೆಳ್ಳುಳ್ಳಿ ಎಸಳುಗಳು ಇದ್ದರೆ ಸಾಕು. ಇವನ್ನು ಸ್ವಲ್ಪ ಕಾಯಿ ತುರಿಯೊಂದಿಗೆ ಅರೆಯಬೇಕು. ಒಂದೆರಡು ಈರುಳ್ಳಿ ತುಂಡನ್ನು ಸಣ್ಣದಾಗಿ ಕತ್ತರಿಸಿಟ್ಟುಕೊಳ್ಳಬೇಕು.
ಮೂಲ ಸಾಮಾನು : ಮೂರು ಪಾವು ಅವಲಕ್ಕಿ (ಐದು ಮಂದಿಗೆ)
ಮಾಡುವ ಬಗೆ
ಪಾತ್ರೆ ಅಥವಾ ಕುಕ್ಕರ್ ಇಟ್ಟು ಸ್ವಲ್ಪ ಎಣ್ಣೆ ಹಾಕಿ ಕತ್ತರಿಸಿದ್ದ ಈರುಳ್ಳಿ ಹಾಕಿ ಹುರಿಯಿರಿ. ನಂತರ ಕತ್ತರಿಸಿದ ತರಕಾರಿ ಹೋಳು ಹಾಕಿ ಕಲಕಿ. ನಂತರ ಟೊಮೆಟೋ ಹೋಳು ಹಾಕಿ ಹುರಿಯಿರಿ. ಸ್ವಲ್ಪ ನೀರು (ಹೋಳು ಮುಳುಗುವಷ್ಟು) ಹಾಕಿ. ಹತ್ತು ನಿಮಿಷದೊಳಗೆ ತರಕಾರಿ ಅರ್ಧ ಬೆಂದಿರುತ್ತದೆ. ಆಗ ಉಪ್ಪು ಮತ್ತು ಮಸಾಲೆ ಹಾಕಿ. ಒಂದು ಪಾವು ಅವಲಕ್ಕಿಗೆ ಒಂದೂಕಾಲು ಲೋಟದಂತೆ ನೀರು ಹಾಕಿ. ಅದು ಕುದಿ ಬರುವುದರೊಳಗೆ ಅವಲಕ್ಕಿಯನ್ನು ನೀರಿನಲ್ಲಿ ತೊಳೆದು ಇಡಿ. ಅದು ಮೆಲ್ಲಗೆ ಅರಳತೊಡಗುತ್ತದೆ. ಅಂದರೆ ನೀರಿನಲ್ಲಿ ನೆನೆ ಹಾಕಬಾರದು. ಮಸಾಲೆ ಕುದಿ ಬಂದ ಕೂಡಲೇ ತೊಳೆದಿಟ್ಟ ಅವಲಕ್ಕಿ ಹಾಕಿ ಸೌಟಿನಲ್ಲಿ ತಿರುಗಿಸಿ. ಒಲೆ ಉರಿ ಸಣ್ಣಗೆ ಮಾಡಿ ಐದು ನಿಮಿಷ ಬಿಡಿ. ನಂತರ ಒಲೆ ಆರಿಸಿ.

10 ನಿಮಿಷ ಬಿಟ್ಟು ಪಲಾವ್ ತಿನ್ನಲು ಸಿದ್ಧ.  ಅನ್ನದ ಪಲಾವ್‌ಗೆ ಕನಿಷ್ಠ 50 ನಿಮಿಷ ಬೇಕು. ಇದಕ್ಕೆ 20 ರಿಂದ 25 ನಿಮಿಷ ಸಾಕು.