ಇಡ್ಲಿಗೆ ಸಾಂಬಾರ್ ರೆಡಿ !

ಇಡ್ಲಿಗೆ ಸಾಂಬಾರ್ ಮಾಡುವುದು ಹೇಗೆ ಎಂದು ಬರೆಯಲು ತಡವಾಯಿತು. ಬಹುಶಃ ಇಡ್ಲಿ ವಡೆ ಒಣಗಿ ಹೋಗಿರಬೇಕು. ದಯವಿಟ್ಟು ಕ್ಷಮಿಸಿ.
ಅಂದ ಹಾಗೆ ಸಾಂಬಾರ್ ಮಾಡುವುದು ಬಹಳ ಸುಲಭ. ಸಾಮಾನ್ಯವಾಗಿ ಇಡ್ಲಿ ಸಾಂಬಾರ್ ಹಾಗೂ ಊಟದ ಸಾಂಬಾರ್ ಎನ್ನೋ ಪ್ರತ್ಯೇಕತೆ ಹೋಟೆಲ್‌ಗಳಲ್ಲಿದೆ. ನೀವು ಹೋಟೆಲ್‌ಗಳಿಗೆ ಮಧ್ಯಾಹ್ನ ಹೋದರೆ ಹಾಗೇ ಕೇಳಿ. ಕೆಲವೊಮ್ಮೆ ಊಟದ ಸಾಂಬಾರ್ ಅನ್ನೇ ಕೊಟ್ಟು ಬಿಡ್ತಾರೆ. ಅದು ಇಡ್ಲಿಗೆ ರುಚಿಸದು.
ಸರಳವಾದ ಕಾರಣವೆಂದರೆ ಇಡ್ಲಿ ಸಾಂಬಾರ್ ಸ್ವಲ್ಪ ನೀರಾಗಿರುತ್ತೆ ; ಊಟದ ಸಾಂಬಾರ್ ಸ್ವಲ್ಪ ಗಟ್ಟಿ. ಮತ್ತೊಂದು ಕಾರಣವೆಂದರೆ ಊಟದ ಸಾಂಬಾರ್‌ಗೆ ತರಕಾರಿ ಹೆಚ್ಚು ಹಾಕ್ತಾರೆ. ಆದರೆ ಇಡ್ಲಿ ಸಾಂಬಾರ್‌ಗೆ ಎಲ್ಲ ತರಕಾರಿ ಆಗೋದಿಲ್ಲ.
ಹಾಗಾದ್ರೆ ವಿಶೇಷವೇನು ?
ಒಂದೂವರೆ ಮುಷ್ಟಿ ತೊಗರಿಬೇಳೆಯನ್ನು ಹಾಕಿ ಬೇಯಿಸಿಡಿ(ನಾಲ್ಕು ಜನಕ್ಕೆ ಸಾಕು). ಸಣ್ಣ ನೀರುಳ್ಳಿ (ಮದ್ರಾಸ್ ಆನಿಯನ್) ಸಿಕ್ಕರೆ ಅದನ್ನೇ ಕೊಂಡುಕೊಳ್ಳಿ. ಅದನ್ನು ಸಿಪ್ಪೆ ಬಿಡಿಸಿಟ್ಟುಕೊಳ್ಳಿ. ಟೊಮೆಟೊ ಹಣ್ಣನ್ನು ಚಿಕ್ಕದಾಗಿ ಹೋಳು ಮಾಡಿಟ್ಟುಕೊಂಡು, ಬೆಳ್ಳುಳ್ಳಿ (ಹಾಕಲೇ ಬೇಕೆಂದಿಲ್ಲ)ಯನ್ನು ಗುದ್ದಿಟ್ಟುಕೊಳ್ಳಿ. ಇದರೊಂದಿಗೆ ಸಿಹಿ ಕುಂಬಳಕಾಯಿಯನ್ನೂ ಹಾಕಿದರೆ ರುಚಿಯಾಗಿರುತ್ತೆ. ಸಿಹಿ ಕುಂಬಳಕಾಯಿ ಹಾಕುವುದಾದರೆ ಸಿಪ್ಪೆ ತೆಗೆದು ಸ್ವಲ್ಪ ತೆಳ್ಳಗೆ ಕತ್ತರಿಸಿಟ್ಟುಕೊಳ್ಳಬೇಕು. ನಂತರ ಒಗ್ಗರಣೆಗೆ ಪಾತ್ರೆಯನ್ನಿಟ್ಟು, ಒಲೆ ಹಚ್ಚಿ.
ಒಗ್ಗರಣೆ ಸಾಮಾನು ಹಾಕಿದ ಮೇಲೆ ಸಾಸಿವೆ ಚಟಪಟ ಎನ್ನುವವರೆಗೆ ಕಾಯಿರಿ. ಸ್ವಲ್ಪ ಎಣ್ಣೆ ಹೆಚ್ಚಿದ್ದರೆ ರುಚಿ ಚೆನ್ನ (ಹಾಗೆಂದು ಹೆಚ್ಚು ಹಾಕಬೇಡಿ, ಎಣ್ಣೆ ಎಣ್ಣೆಯೇ ಬಾಯಿಗೆ ಸಿಕ್ಕಂತೆ ಎನಿಸಿ ರೇಜಿಗೆ ಹುಟ್ಟಿಸುತ್ತದೆ) ನಂತರ ಕರಿಬೇವು ಸೊಪ್ಪು ಹಾಕಿ, ಪುಡಿ ಮಾಡಿದ ಬೆಳ್ಳುಳ್ಳಿ ಹಾಕಿ, ಕೆಂಪಗೆ ಹುರಿಯಿರಿ. ನಂತರ ನೀರುಳ್ಳಿ ಹಾಕಿ. ಹಾಗೆಯೇ ಸಿಹಿ ಕುಂಬಳಕಾಯಿಯನ್ನೂ ಹಾಕಿ, ಟೊಮೆಟೋ ಹೋಳುಗಳನ್ನೂ ಸುರಿದು ಸೌಟಿನಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾಗುತ್ತಿದ್ದಂತೆಯೇ ಸ್ವಲ್ಪ ನೀರು ಹಾಕಿ ಕುದಿಯಲು ಬಿಡಿ.
ಮತ್ತೊಂದು ಒಲೆಯಲ್ಲಿ ಮಸಾಲೆ ಹುರಿದುಕೊಳ್ಳಿ. ಹತ್ತು ಕಾಳು ಮೆಂತ್ಯೆ ಹಾಕಿ, ಕೆಂಪಗಾಗುತ್ತಿದ್ದಂತೆ ಇಪ್ಪತ್ತು ಕಾಳು ಜೀರಿಗೆ, ಇಪ್ಪತ್ತೈದು ಕಾಳು ಧನಿಯಾ ಹಾಕಿ ಹುರಿಯಿರಿ. ನಾಲ್ಕೈದು ಬ್ಯಾಡಗಿ ಮೆಣಸಿನಕಾಯಿಯನ್ನೂ ಹಾಕಿ. ಹುರಿದ ಪರಿಮಳ ಬಂದಕೂಡಲೇ ಇಳಿಸಿ ಸ್ವಲ್ಪ ಕಾಯಿ ಹಾಕಿ ರುಬ್ಬಿ.
ಒಲೆಯ ಮೇಲಿದ್ದ ತರಕಾರಿ ಕುದಿದು ಬೆಂದ ಕೂಡಲೇ ರುಬ್ಬಿದ ಮಸಾಲೆ ಹಾಕಿ. ಬೇಯಿಸಿದ ಬೇಳೆಯನ್ನೂ ಹಾಕಿ. ಚೆನ್ನಾಗಿ ಕುದಿ ಬರಲಿ. ಸಣ್ಣಗೆ ಕತ್ತರಿಸಿದ ಕೊತ್ತಂಬರಿ ಸೊಪ್ಪನ್ನು ಹಾಕಿ ಮತ್ತೆರಡು ಕುದಿಗೆ ಬಿಡಿ. ನಂತರ ಮುಚ್ಚಳ ಮುಚ್ಚಿ. ಆ ಬಿಸಿಯಲ್ಲಿ ಕೊತ್ತಂಬರಿ ಸೊಪ್ಪು ಬಾಡಿ ತನ್ನ ಕಂಪನ್ನು ಬಿಟ್ಟುಕೊಳ್ಳುತ್ತದೆ. ಅನಂತರ ಇಡ್ಲಿ ವಡೆ ಜತೆಗೆ ಬಳಸಿ. ಇದು ಸಾಮಾನ್ಯವಾಗಿ ಹೋಟೆಲ್‌ನಲ್ಲಿ ಮಾಡುವ ಸಾಂಬಾರ್‌ನ ರೀತಿ.
ಸಿಹಿ ಕುಂಬಳಕಾಯಿ ಚೆನ್ನಾಗಿ ಬೇಯದಿದ್ದರೆ ಸಾಂಬಾರ್‌ನ ಜತೆಗೆ ಹೊಂದಿಕೊಳ್ಳುವುದಿಲ್ಲ. ಹೊಂದದಿದ್ದರೆ ಸಾಂಬಾರ್‌ನಲ್ಲಿ ನೀರೇ ಬೇರೆ, ಮಸಾಲೆಯೇ ಬೇರೆ ಎನಿಸುತ್ತದೆ. ಬೆಳ್ಳುಳ್ಳಿ ಬಳಸದಿದ್ದವರು ಒಲೆ ಆರಿಸಿದ ನಂತರ ಸ್ವಲ್ಪ ಇಂಗಿನ ನೀರನ್ನು ಹಾಕಬಹುದು. ಇಂಗು ಹಾಕಿದ ಮೇಲೆ ಯಾವುದೇ ಪದಾರ್ಥವನ್ನು ಕುದಿಸಬಾರದು, ಅದು ಕಹಿಯಾಗುತ್ತೆ ಹಾಗೂ ಒಳ್ಳೆಯದಲ್ಲ.
ಉಳಿದಂತೆ ಈ ಸಂಬಂಧ ನಿಮಗೆ ಏನೇ ಅನುಮಾನವಿದ್ದರೂ ಕೇಳಬಹುದು. ಅದಕ್ಕೆ ಉತ್ತರಿಸುತ್ತೇನೆ.

Advertisements

6 thoughts on “ಇಡ್ಲಿಗೆ ಸಾಂಬಾರ್ ರೆಡಿ !

  1. ಬಾಣಸಿಗರೆ,
    ಹತ್ತು ಕಾಳು ಮೆಂತ್ಯೆ ಹಾಕಿ, ಓಕೆ. ಕೆಂಪಗಾಗುತ್ತಿದ್ದಂತೆ ಇಪ್ಪತ್ತು ಕಾಳು ಜೀರಿಗೆ???? ಇಪ್ಪತ್ತೈದು ಕಾಳು ಧನಿಯಾ ಹಾಕಿ ಹುರಿಯಿರಿ???? ಕರೆಕ್ಟಾಗಿ ಎಣಸ್ಲೇಬೇಕಾ? ಇಲ್ಲದಿದ್ರೆ ನೀವು ಹೇಳಿದ ರುಚಿ ಬರಲ್ವಾ?

    ಮತ್ತೆ. ವಗ್ಗರಣೆಯಲ್ಲಿ ಇಂಗು ಹಾಕಿದ್ರೆ ಏನಾಗತ್ತೆ? ನಾನು ಹಾಗೇ ಮಾಡೋದು?

  2. ಹೌದು. ಬೇಕಾದ ಪದಾರ್ಥ, ಬಳಸುವ ವಿಧಾನ ಹೀಗೆ ಸಪರೇಟ್ ಆಗಿ ಬರಿರಿ. ಬೇಗ ಓದಿ ಅರ್ಥ ಮಾಡಿಕೊಳ್ಳಬಹುದು. ಸ್ಟೆಪ್ ಬೈ ಸ್ಟೆಪ್ ಇದ್ರೆ ಈಝಿ ಅದಕ್ಕೆ ಹೇಳಿದೆ… ಇಲ್ಲಾಂದ್ರೆ ಪರ್‍ವಾಗಿಲ್ಲ ಬಿಡಿ 😦

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s