ಇಡ್ಲಿ ವಡೆ

idlysambarvada1

ಹೋಟೆಲ್‌ನಲ್ಲಿ ಗರಿಗರಿಯಾದ ಉದ್ದಿನವಡೆ ಮತ್ತು ಬಿಸಿ ಬಿಸಿ, ಮೆದುವಾದ ಇಡ್ಲಿ ಕೊಡ್ತಾರೆ (ಕೆಲವು ಹೋಟೆಲ್‌ಗಳಲ್ಲಿ ಎರಡೂ ಕಲ್ಲು ಇದ್ದಂಗೆ ಇರುತ್ತೆ, ಅದು ಬಿಡಿ). ಜತೆಗೆ ಕೊಡೋ ಸಾಂಬಾರ್ ಮಾತ್ರ ನೀರಂಗಿದ್ದರೂ  ರುಚಿ ರುಚಿಯಾಗಿರುತ್ತೆ. ಅದು ಹೇಗೆ ಎನ್ನೋದು ಸಹಜವೇ.
ಒಂದು ಲೋಟ ಉದ್ದಿನ ಬೇಳೆ ನೀರಿನಲ್ಲಿ ನೆನೆ ಹಾಕಿಡಿ. ಅರೆಯುವಾಗ ಒಂದಿಷ್ಟು ಎಚ್ಚರಿಕೆ ವಹಿಸಿದರೆ ಇಡ್ಲಿ ಮೆದುವಾಗುತ್ತೆ. ಸಾಮಾನ್ಯವಾಗಿ ವೆಟ್‌ಗ್ರೈಂಡರ್ ನಲ್ಲಿ ಅರೆಯೋರು ಬೇಳೆ ಹಾಕಿ, ಒಂದಿಷ್ಟು ನೀರು ಹಾಕಿ ಬಿಟ್ಟು ಬಿಡ್ತಾರೆ. ಕಾಲುಗಂಟೆಯಾದ ಮೇಲೆ ಮುಚ್ಚಳ ತೆಗೆದು ಮತ್ತಷ್ಟು ನೀರು ಹಾಕಿ ಸುಮ್ಮನಾಗುತ್ತಾರೆ. ಇದು ಉದ್ದನ್ನು ಅರೆಯುವ ವಿಧಾನವಲ್ಲ.
ದಯವಿಟ್ಟು ಐದು ನಿಮಿಷಕ್ಕೊಮ್ಮೆಯಾದರೂ ಕೈಯಲ್ಲಿ ನೀರು ಅದ್ದಿಕೊಂಡು ಹಿಟ್ಟಿಗೆ ಕೈ ಕೊಟ್ಟರೆ (ಸರಿಯಾಗಿ ಅರೆಯಲು ಅನುಕೂಲವಾಗುವಂತೆ) ಹಿಟ್ಟು ಬೇಗ ನುಣ್ಣಗಾಗುತ್ತದೆ ಮತ್ತು ಒದಗುತ್ತದೆ.
ಮತ್ತೊಂದು ವಿಷಯವೆಂದರೆ ಬೇಳೆಯನ್ನು ಹಾಕಿದ ಕೂಡಲೇ ಹೆಚ್ಚು ನೀರನ್ನಾಗಲೀ, ಕಡಿಮೆ ನೀರನ್ನಾಗಲೀ ಹಾಕಬಾರದು. ಕಡಿಮೆ ನೀರು ಹಾಕಿದರೆ ಹಿಟ್ಟು ಆರಂಭದಲ್ಲೇ ನಾರಿನಂತಾಗುತ್ತದೆ. ಹಾಗೆಯೇ ಜಾಸ್ತಿ ನೀರು ಹಾಕಿದರೆ ಬೇಗ ನುಣ್ಣಗಾಗುವುದಿಲ್ಲ. ಕಲ್ಲಿನಿಂದ ಬೇಳೆ ಜಾರಿ ಹೋಗಿ ಹಿಟ್ಟು ಒದಗುವುದೂ ಇಲ್ಲ. ಹಾಗಾಗಿ ಸ್ವಲ್ಪ ಸ್ವಲ್ಪ ನೀರನ್ನು ಹಾಕಿಯೇ ಹಿಟ್ಟನ್ನು ರುಬ್ಬಬೇಕು, ಹೂವು ಅರಳಿದ ಹಾಗೆಯೇ.
ಹೀಗೆ ರುಬ್ಬಿದ ಹಿಟ್ಟಿಗೆ ನಾಲ್ಕರಷ್ಟು ಇಡ್ಲಿ ರವೆಯನ್ನು ಹಾಕಿದರೂ ಒದಗುತ್ತದೆ. ಬಹಳ ಮೆದು ಬೇಕಾಗುವವರು ಮೂರು ಅಥವಾ ಮೂರುವರೆಯಷ್ಟು ಇಡ್ಲಿರವೆಯನ್ನು ರಾತ್ರಿಯೇ ಹತ್ತು ನಿಮಿಷ ನೆನೆ ಹಾಕಿ ಹಿಂಡಿ ಉದ್ದಿನ ಹಿಟ್ಟಿಗೆ ಹಾಕಿ, ಉಪ್ಪನ್ನು ಹಾಕಿಡಬೇಕು. ಬೆಳಗ್ಗೆ ಇಡ್ಲಿಗೆ ಅದು ಸಿದ್ಧ.
ಉದ್ದಿನವಡೆ
ಇದೂ ಹಾಗೆಯೇ. ಉದ್ದಿನಬೇಳೆ (ಒಂದು ಲೋಟ ಬೇಳೆಗೆ ಸಾಮಾನ್ಯ ಗಾತ್ರದ ಹತ್ತು ವಡೆ ಆಗುತ್ತದೆ)ಯನ್ನು ಕೇವಲ ಇಪ್ಪತ್ತು ನಿಮಿಷ ನೆನೆಸಿದರೆ ಸಾಕು. ಅದನ್ನು ಗಂಟೆಗಟ್ಟಲೆ ನೆನೆಸುವುದು ತಪ್ಪು. ಕಾರಣ, ಸಾಕಷ್ಟು ನೆನೆದ ಬೇಳೆಯನ್ನು ತಿಕ್ಕಿ ತೊಳೆಯುವಾಗ ಅದರ ಸತ್ತ್ವವೆಲ್ಲಾ ಹೋಗುತ್ತದೆ. ಆಗ ವಡೆ ಮೆದುವೂ ಆಗುವುದಿಲ್ಲ, ರುಚಿಯೂ ಆಗುವುದಿಲ್ಲ ಹಾಗೂ ಒದಗುವುದಿಲ್ಲ.  ಇಪ್ಪತ್ತು ನಿಮಿಷ ನೆನೆದ ಬೇಳೆಯನ್ನು ಅರೆಯುವ ಕಲ್ಲಿಗೆ ಹಾಕಿ ಗಟ್ಟಿಯಾಗಿ ರುಬ್ಬಿ. ಇಡ್ಲಿಯ ಹಿಟ್ಟು ರುಬ್ಬುವಂತೆಯೇ ಐದೈದು ನಿಮಿಷಕ್ಕೆ ನೀರು ಚಿಮುಕಿಸುತ್ತಾ (ಸ್ವಲ್ಪ ಹಾಕುತ್ತಾ) ಅರೆಯಿರಿ. ಹಾಗೆಯೇ ಬಿಟ್ಟರೆ ವಡೆ ನಾರಾಗುತ್ತದೆ.
ಹಾಗೆ ಚೆನ್ನಾಗಿ ಅರೆದ ವಡೆ ಹಿಟ್ಟಿಗೆ ಸ್ವಲ್ಪ ಅಕ್ಕಿ ಹಿಟ್ಟು ಹಾಕಿ. ಹಸಿಮೆಣಸು, ಶುಂಠಿಯ ಚೂರು, ತೆಂಗಿನ ಕಾಯಿ ಚೂರುಗಳನ್ನು ಹಾಕಿ. ಸ್ವಲ್ಪ ಇಂಗು ಹಾಕಿ (ಕೆಲವರು ಸಣ್ಣಗೆ ಹೋಳು ಮಾಡಿದ ಈರುಳ್ಳಿಯನ್ನೂ ಹಾಕುತ್ತಾರೆ). ಉಪ್ಪು ಹಾಕಿ ಕಲೆಸಿ. ಉಪ್ಪು ಹಾಕಿದ ತಕ್ಷಣ ಗಟ್ಟಿಯಾದ ಹಿಟ್ಟು ಕೊಂಚ ನೀರಾಗುತ್ತದೆ. ಅಕ್ಕಿ ಹಿಟ್ಟು ಹಾಕಿದರೆ ವಡೆ ಸ್ವಲ್ಪ ಗರಿಮುರಿಯಾಗುತ್ತದೆ.
ಬಿಸಿಯಾದ ಎಣ್ಣೆಗೆ (ಹೆಚ್ಚು ಜೋರು ಅಥವಾ ಎಳೆ ಕಾವು ಬೇಡ) ವಡೆ ಬಿಡುತ್ತಾ ಬನ್ನಿ. ಕೈಗೆ ಸ್ವಲ್ಪ ನೀರು ಮುಟ್ಟಿಸಿಕೊಂಡರೆ ಹಿಟ್ಟು ಅಂಟುವುದಿಲ್ಲ. ಕಾವು ಜೋರಿದ್ದರೆ ವಡೆ ಬೇಗ ಕೆಂಪಗಾಗುತ್ತದೆ, ಆದರೆ ಬೆಂದಿರುವುದಿಲ್ಲ. ಕಡಿಮೆ ಕಾವಿದ್ದರೆ ವಡೆ ಎಣ್ಣೆ ಹೀರಿಕೊಳ್ಳುತ್ತದೆ. ಸ್ವಲ್ಪ ಹಾಕಿ ಅರ್ಧ ಬೇಯಿಸಿ ತೆಗೆದಿಡಿ. ಮತ್ತೊಂದಿಷ್ಟು ವಡೆ ಹಾಕಿ. ಸ್ವಲ್ಪ ಬೆಂದಾಗ ಅರ್ಧ ಬೆಂದಿದ್ದ ವಡೆಗಳನ್ನೂ ಹಾಕಿ. ಆಗಾಗ್ಗೆ ಅದನ್ನು ತಿರುಗಿಸುತ್ತಿರಿ. ಕೆಂಪಗಾದ ಮೇಲೆ ತೆಗೆಯಿರಿ. ಅಲ್ಲಿಗೆ ವಡೆಯೂ ಸಿದ್ಧ.
ಸಾಂಬಾರ್ ಮುಂದಿನ ಸಂಚಿಕೆಯಲ್ಲಿ. ಸದ್ಯಕ್ಕೆ ಇಡ್ಲಿವಡೆಯೊಂದಿಗೆ ಚಟ್ನಿ ಹಚ್ಚಿಕೊಂಡು ತಿನ್ನಿ. ಆಗಬಹುದೇ ?

Advertisements

10 thoughts on “ಇಡ್ಲಿ ವಡೆ

 1. ಹ್ಮ್….

  ನಿಜವಾದ ಮೃದು ಇಡ್ಲಿಗಳಿಗೆ ನೀವು ಇಡ್ಲಿ ರವೆ ಉಪಯೋಗಿಸಬೇಡಿ! ಅಕ್ಕಿಯನ್ನು ತೊಳೆದು ಹರವಿ ಒಣಗಿಸಿ ಕಮ್ಮಗೆ ಹುರಿದಿಡಿ. ಉದ್ದಿನಬೇಳೆಯನ್ನು ನೆನೆಸುವಾಗ ಒಂದಕ್ಕೆ ಮೂರುವರೆ-ನಾಕರಷ್ಟು ಈ ಹುರಿದ ಅಕ್ಕಿಯನ್ನು ಬೇರೆ ಪಾತ್ರೆಯಲ್ಲಿ ನೆನೆಸಿ. ಉದ್ದಿನಬೇಳೆ ಸುಮಾರು ತಿರುವಿದ ನಂತರ (ಅಂದರೆ ಇನ್ನೊಂದು ಹತ್ತು ನಿಮಿಷ ಮಾತ್ರ ಬಾಕಿ ಇದ್ದಾಗ) ಈ ನೆನೆಸಿದ ಅಕ್ಕಿಯನ್ನೂ ನೀರೆಲ್ಲ ಬಸಿದು ತಿರುವಲು ಹಾಕಿ.

  ಇನ್ನು ಹತ್ತು ನಿಮಿಷದಷ್ಟು ಹೊತ್ತು ರುಬ್ಬಿ, ಉಪ್ಪು ಹಾಕಿ ಹಿಟ್ಟನ್ನು ತೆಗೆದಿಡಿ.

  ನೀವು ಹೇಳಿರುವ ವಿಧಾನಕ್ಕಿಂತ ಒಳ್ಳೆಯ ಇಡ್ಲಿಗಳಾಗದಿದ್ದರೆ, ಮತ್ತೆ ಹೇಳಿ 😉

 2. ನಮಸ್ಕಾರ ನಾವಡರೆ,
  ಸುಸ್ತಾಗಿಹೋದೆ. ಮುಂದಿನ ಬ್ಲಾಗ್ ಸಮ್ಮೇಳನದಲ್ಲಿ ನಿಮ್ಮ ನಳಪಾಕದ ಪ್ರಾತ್ಯಕ್ಷಿಕೆಯೊಂದನ್ನ ತಯಾರಿಸಿ ಪ್ರದರ್ಶಿಸೋಣ. ಗ್ಯಾರಂಟಿ ಸೂಪರ್ ಹಿಟ್!! ಎಲ್ಲಕಿಂತ ನೀವು ಪಾಕವಿಧಾನವನ್ನ ವಿವರಿಸುವ ರೀತಿಯೇ ಬಾಯಲ್ಲಿ ನೀರೂರಿಸುವ ಹಾಗಿರುತ್ತೆ. ಆಡುಗೆ ಅನ್ನೋದು ಕಡೆಗಣಿಸಿದರೆ ಎಷ್ಟು ಬೇಸರ ತರಿಸುತ್ತೋ, ಶ್ರದ್ಧೆ, ಪ್ರೀತಿಗಳಿಂದ ಮಾಡಿದರೆ ಅಷ್ಟೇ ಖುಶಿ ಕೊಡತ್ತೆ ಅನ್ನೋದು ನಿಮ್ಮಿಂದ ಕಲಿಯೋ ಹಾಗಾಯ್ತು. ತ್ಯಾಂಕು.
  -ಟೀನಾ

 3. “ದಯವಿಟ್ಟು ಐದು ನಿಮಿಷಕ್ಕೊಮ್ಮೆಯಾದರೂ ಕೈಯಲ್ಲಿ ನೀರು ಅದ್ದಿಕೊಂಡು ಹಿಟ್ಟಿಗೆ ಕೈ ಕೊಟ್ಟರೆ (ಸರಿಯಾಗಿ ಅರೆಯಲು ಅನುಕೂಲವಾಗುವಂತೆ) ಹಿಟ್ಟು ಬೇಗ ನುಣ್ಣಗಾಗುತ್ತದೆ ಮತ್ತು ಒದಗುತ್ತದೆ.”
  ಆ ’ದಯವಿಟ್ಟು’ ತುಂಬಾ ಇಷ್ಟ ಆಯ್ತು;) :p 😀 ಹಿಟ್ಟಿನ ಮೇಲೆ ಇಷ್ಟು ಅಕ್ಕರೆ- ಪ್ರೀತಿ ತೋರ್ಸಿದ್ರೆ ಮೆತ್ತಗಾಗ್ಲೇ ಬೇಕಲ್ವಾ!:))

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s