ಕಾಯಿರಸ

ಈ ಬಾರಿಯ ರೆಸಿಪಿ ಕಾಯಿರಸ.
ಸಾಮಾನ್ಯವಾಗಿ ಬೆಂಡೆಕಾಯಿ, ಹಾಗಲಕಾಯಿಯ ಕಾಯಿರಸ ಪ್ರಸಿದ್ಧ. ಇದು ದಕ್ಷಿಣ ಕನ್ನಡದ ಮೇಲೋಗರ. ನಿತ್ಯವೂ ಕಾಯಿ ಮಸಾಲೆ ತಿಂದು ತಿಂದೂ ಬೇಸರವಾದರೆ ಹಾಗೂ ತುರ್ತಾಗಿ ಒಂದು ಪದಾರ್ಥ (ಮೇಲೋಗರ) ಆಗ ಬೇಕೆಂದರೆ ಇದನ್ನು ಮಾಡಬಹುದು.
ಇದು ಊಟಕ್ಕೆ ರುಚಿ ಹಾಗೂ ಕೆಲಸವೂ ಕಡಿಮೆ. ಈಗಾಗಲೇ ಚೇತನಾ ಅವರು ಬೇಗ ಆಗಬಹುದಾದ, ಕಡಿಮೆ ಕೆಲಸವಿರುವ ಪಾಕ ವೈವಿಧ್ಯವನ್ನು ಹೇಳಿ ಎಂದು ಸೂಚಿಸಿದ್ದಾರೆ. ಅದಕ್ಕೆ ಪ್ರಯತ್ನಿಸುತ್ತೇನೆ. ಅದಿರಲಿ. ಈಗ ಅಡುಗೆ ಮನೆಗೆ ಹೋಗೋಣ.
ಈ ಕಾಯಿ ರಸಕ್ಕೆ ಎರಡು ಬೇಸರವನ್ನು ಕಳೆಯುತ್ತದೆ. ಒಂದು ನಿತ್ಯವೂ ಕಾಯಿ ತಿಂದು ಬೇಸರಗೊಂಡವರಿಗೆ ಹಾಗೂ ದಿನವೂ ಬೇಳೆ (ತೊಗರಿ) ತಿಂದು ಬೇಸರಗೊಂಡವರಿಗೆ ಖುಷಿ ನೀಡಬಲ್ಲದು. ಕಾರಣ ಇದಕ್ಕೆ ಕಾಯಿಯನ್ನೂ ಬಳಸುವುದಿಲ್ಲ. ಹಾಗೆಯೇ ಬೇಳೆಯನ್ನೂ ಬಳಸುವುದಿಲ್ಲ.
ಎಳೆ ಬೆಂಡೆಕಾಯಿ ಇದ್ದರೆ ಒಳ್ಳೆಯದು. ಇಬ್ಬರು ಅಥವಾ ಮೂವರು ಮನೆಯಲ್ಲಿದ್ದರೆ ಸುಮಾರು ಹತ್ತು ಬೆಂಡೆಕಾಯಿಯನ್ನು ತೊಳೆದು ಸಣ್ಣದಾಗಿ ಚೂರು ಮಾಡಿಕೊಳ್ಳಿ (ಬೆಂಡೆಕಾಯಿಯನ್ನು ಉದ್ದಕ್ಕೆ ಸೀಳಿ ಮತ್ತೆ ಮೂರು ಬಾರಿ ಸೀಳಿ ಅದನ್ನು ಅಡ್ಡ ಕತ್ತರಿಸಿದರೆ ಸಣ್ಣ ಚೂರುಗಳಾಗುತ್ತದೆ). ನಂತರ ಬಾಣಲೆ ಇಟ್ಟು ಎಣ್ಣೆ ಹಾಕಬೇಡಿ. ಬೆಂಡೆಕಾಯಿ ಚೂರುಗಳನ್ನು ಹಾಕಿ ಹುರಿಯಿರಿ. ಅದು ಪರಿಮಳ ಬರುವವರೆಗೆ ಹುರಿಯಬೇಕು. ಅದರ ನೋಳಿ (ಅಂಟಿನ ಅಂಶ) ಅಂಶ ಬಿಡುವಷ್ಟು ಹುರಿದು, ಅದಕ್ಕೆ ನೆನೆಸಿಟ್ಟುಕೊಂಡ ಹುಣಸೇಹಣ್ಣನ್ನು ಕಿವುಚಿ ತೆಗೆದ ರಸವನ್ನು ಸುರಿಯಬೇಕು. ಸ್ವಲ್ಪ ಉಪ್ಪು ಹಾಕಿ ಬೇಯಲು ಬಿಡಬೇಕು. ಒಂದು ಉಂಡೆ ಬೆಲ್ಲ ಹಾಕಿ. ಬೆಲ್ಲ ಬೇಡ ಎನ್ನುವವರು ಬಿಡಬಹುದು.
ಈ ಮಧ್ಯೆ ಸಣ್ಣ ಬಾಣಲಿ ಇಟ್ಟು, ಹತ್ತು ಕಾಳು ಮೆಂತೆ ಹಾಕಿ. ಜತೆಗೆ ಹದಿನೈದು ಕಾಳು ಉದ್ದಿನಬೇಳೆ, ಕಡ್ಲೇಬೇಳೆ ಹಾಕಿ ಹುರಿಯಿರಿ. ಅದು ಕೆಂಪಗೆ ಆಗುತ್ತಿದ್ದಂತೆ ಹದಿನೈದು ಕಾಳು ಜೀರಿಗೆ, ಇಪ್ಪತ್ತು ಕಾಳು ಕೊತ್ತಂಬರಿ, ಐದು ಒಣ ಮೆಣಸಿನಕಾಯಿ (ಬ್ಯಾಡಗಿ ಆದರೆ ಒಳ್ಳೆಯದು, ಕಲರ್ ಬರುತ್ತೆ) ಹಾಕಿ ಹುರಿಯಬೇಕು. ಹತ್ತು ಎಸಳು ಕರಿಬೇವು ಹಾಕಿ. ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಎಣ್ಣೆ ಹಾಕಿ ಹುರಿಯಬಾರದು. ಈಪುಡಿ ಇನ್ನೂ ಸ್ವಲ್ಪ ಮಾಡಿಟ್ಟುಕೊಂಡು ಆಗಾಗ್ಗೆ ಬಳಸಬಹುದು. ಪರಿಮಳ ಹೋಗದಂತ ಡಬ್ಬಿಯಲ್ಲಿ ಹಾಕಿಟ್ಟರೆ ಎರಡು ತಿಂಗಳು ಬಳಸಬಹುದು.
ಬೇಯಲು ಬಿಟ್ಟ ಬೆಂಡೆಕಾಯಿ ಅಷ್ಟರೊಳಗೆ ಬೆಂದಿರುತ್ತೆ. ಅದಕ್ಕೆ ಈ ಪುಡಿಯನ್ನು ಹಾಕಿ ಕಲಕಿ. ಅದು ಕುದಿಯಲಾರಂಭಿಸುತ್ತದೆ. ಒಲೆ ಸಣ್ಣಗೆ ಮಾಡಿ, ಒಂದೈದು ನಿಮಿಷ ಕುದಿಯಲಿ. ಒಂದು ಹದಕ್ಕೆ ಬಂದು ಹುಳಿಯಂತೆಯೇ ಆಗುತ್ತದೆ. ಅಲ್ಲಿಗೆ ಊಟಕ್ಕೆ ಅದು ಸಿದ್ಧ. ಇಳಿಸುವ ಮುನ್ನ ಸ್ವಲ್ಪ ಇಂಗು ಹಾಕಿ ಕಲಕಿ. ಇದಕ್ಕೆ ಬೇಳೆಯೂ ಬೇಡ, ಕಾಯಿಯೂ ಬೇಡ. ಇದೇ ರೀತಿಯಲ್ಲಿ ಹಾಗಲಕಾಯಿಯದ್ದೂ ಮಾಡಬಹುದು.

Advertisements

13 thoughts on “ಕಾಯಿರಸ

 1. ನಾವಡರೇ…
  ಅಲ್ಲಾರೀ, ಹತ್ತು ಬೆಂಡೆಕಾಯಿ ಕತ್ತರಿಸೋಕೆ ಮೂರು ಜನ ಬೇಕಾಗ್ತಾರೆ ಅಂತ ಗೊತ್ತಿರ್ಲಿಲ್ಲಪ್ಪ. 🙂
  ಅಂದಹಾಗೆ ಕೊನೆಯಲ್ಲಿ ಈ ಒಲೆಯನ್ನ ಯಾಕೆ ಸಣ್ಣಗೆ ಮಾಡ್ಕೋಬೇಕು ಅಂತ ಗೊತ್ತಾಗ್ಲಿಲ್ಲ. 🙂 ಉರಿಯನ್ನ ಸಣ್ಣದು ಮಾಡ್ಕೊಂಡ್ರೆ ಸಾಲ್ದಾ? 🙂
  ನೀವು ಹೇಳಿದ ಅಳತೆಗಿಂತ ಸ್ವಲ್ಪ ಜಾಸ್ತಿ ಕಾಯಿರಸ ಮಾಡ್ಬೇಕು ಅಂದ್ರೂ ಹಿಂದಿನ ದಿನಾನೇ ಜೀರಿಗೆ, ಮೆಂತೆ, ಕೊತ್ತುಂಬರಿನೆಲ್ಲ ಲೆಕ್ಕಮಾಡಿಟ್ಕೋಬೇಕಾಗತ್ತೆ ಅಲ್ವಾ? 🙂 ಕಡ್ಲೆಬೇಳೆ ಎಷ್ಟು ಹಾಕ್ಬೇಕು ಅಂತ ಹೇಳ್ಕೊಟ್ಟಿಲ್ಲ. 🙂
  ಸುಮ್ನೆ ತಮಾಷೆಗೆ ಕೇಳಿದೆ. ಬೇಸರ ಮಾಡ್ಕೋಬೇಡಿ. 🙂
  ಕಾಯಿರಸ ಮಾಡೋದು ಕಲಿಸಿಕೊಟ್ಟಿದ್ದಕ್ಕೆ ತುಂಬ ಥ್ಯಾಂಕ್ಸ್. ಅಲ್ಲದೇ ಈ ಕಾಯಿರಸ ತುಂಬ ರುಚಿಕರ ಕೂಡ. ಹೀಗೆ ಇನ್ನೊಂದಿಷ್ಟು ಅಡುಗೆಯ ವಿಧಾನಗಳು ಹರಿದುಬರಲಿ.

 2. ಹಾಂಗೆ ನಂದೂ ಒಂದು ಸಲಹೆ ಇತ್ತ್ ಕಾಣಿ…. ತಿಂತಾ ಇಪ್ಪುದು ಫೊಟೊ ಕೂಡ ಹಾಕ್ರೆ ಲಾಯ್ಕ್ ಆತ್ತ್.
  ಮಾಡಿ, ತಿಂದ್, ಗಟ್ಟೀಗಿದ್ರ್ ಅಂಬುವುದಕ್ಕೂ ಪ್ರೂಫು ಆತ್ತ್ ಅಲ್ದೆ ಅರ್ಚನಾ ಮೇಡಂ..:)
  ಅಡ್ಗೆ ಸೂಪರ್ ಮಾರಯ್ರೆ… ಪಸ್ಟ್ ಅಮ್ಮಂಗೆ ಹೊಯ್ ಹೇಳ್ಕ್ ಕಾಣಿ…

 3. ವಿಜಯ್,
  ಮಾಡ್ ಕಾಣಿ, ಮತ್ತ್ ಹೇಳ್ಕು.
  ಅರ್ಚನಾರೇ,
  ನೀವೂ ಹೇಳಿದ್ದು ನಿಜ. ಕಾಯಿ ಹಾಕೋದಿದೆ. ಆದ್ರೆ ವಾಸ್ತವವಾಗಿ ಕಾಯಿ ಹಾಕೋದಿಲ್ಲ, ಅದ್ಕೇ ಕಾಯಿರಸ ಅನ್ನೋದು. ಜತೆಗೆ, ಫೋಟೋ ಹಾಕಬೇಕು. ಆದರೆ ಫೋಟೋ ಹಾಕೋ ರೀತಿ ನನಗೆ ಸರಿಯಾಗಿ ಬರೋಲ್ಲ. ಅಲ್ಲದೇ, ಕಾಯಿರಸದ ಫೋಟೋ ತರೋದು ಎಲ್ಲಿಂದ? ಅಲ್ವೇ? ಆದರೂ ಮುಂದಿನ ಸಲದಿಂದ ಸಲಹೆಯನ್ನು ಸ್ವೀಕರಿಸ್ತೇನೆ.
  ನೀಲಿಹೂವಿನವರೇ,
  ಹೆಸರು ನಿಮ್ಮದು ಚೆನ್ನಾಗಿದೆ. ಫೋಟೋ ಹಾಕೋದು ಕಷ್ಟ್ ಕಾಣಿ. ಫ್ರೂಫು ಹುಡುಕ್ತಾ ಹೋಯ್ಕ್ ಅಂದ್ರೆ ಮೈಸೂರಿಗೆ ಬನ್ನಿ, ಕಾಣ್ತು. ಅಂದ್ಹಾಗೆ ಅಮ್ಮಂಗೆ ಗೊತ್ತಿತ್ತೇ..
  ನಾವಡ

 4. ಅಯ್ಯಯ್ಯೋ! ನೀವೊಳ್ಳೇ ಕಾಯಿ ರಸದ ರೆಸಿಪಿ ಹೇಳೋ ಹೊತ್ತಿಗೇ ನಮ್ಮನೆ ಮಿಕ್ಸಿ ಡಮಾರ್ ಅಂತ ಹೊತ್ತಿಕೊಂಡು ಉರಿದು ಹೋಗಿದೆ 😦
  ಆದ್ರೂ, ಬೆಂಡೇಕಾಯಿ ನಂಗಿಷ್ಟ. ಎದ್ರು ಮನೇಲಿ ಪುಡಿ ಮಾಡ್ಕೊಂಡ್ ಬಂದ್ ಮಾಡೋದೇ ಸೈ!
  ಮುಂದಿನ್ ಸಾರ್ತಿ ಅಮ್ಮ ಬರೋ ಹೊತ್ಗೆ ಮಗ್ಳು ಏನೆಲ್ಲ ಕಲ್ತು ಬಿಟ್ಟಿದಾಳೆ ಅಂತ ಅಚ್ಚರಿ ಪಡ್ಬೇಕು, ಹಾಗೆ ಕಲಿಸಿಕೊಡಿ ನಂಗೆ!!
  ಅಡ್ವಾನ್ಸಾಗಿ ಥ್ಯಾಂಕ್ಯೂ!

 5. ನಾನು ಇದನ್ನ ಮಾಡಕ್ಕೋಗಿ ಏನಾದರೂ ಎಡವಟ್ಟಾಗೋದ್ರೆ……. ಅಂತ ಇನ್ನೂ ಮಾಡ್ಲೋ ಬೇಡೋ ಅಂತ ಯೋಚನೆ ಮಾಡ್ತಿರುವಾಗ್ಲೇ ಹಸಿವು ಜಾಸ್ತಿ ಆಗಿ ಹೋಟೇಲ್ ಗೋಗಿ ಉಂಡ್ಕೊಂಡು ಬಂದುಬಿಟ್ಟೆ 🙂

  next item try ಮಾಡ್ತೀನಿ ನೋಡೋಣ 🙂

 6. ಅಯ್ಯೋ ಇದನ್ನ್ ನೋಡಿ ನನಗೆ ಪೂರ್ತಿ ಕನ್ಫ್ಯೂಶನ್!! ಕಾಯಿರಸ ಅಂದ್ರೆ ರುಬ್ಬಿದ ಕಾಯಿ/ಮೊಸರು ಹಾಕಿ ಮಾಡೋ ಒಂದು ಅಡಿಗೆ ಅಂತ ನಂಬ್ಕೊಂಡಿದ್ದೆ…ಸುಳ್ಳಾ? ಎನಿವೇ ಹೊಸ ಬ್ಲಾಗಿಗೆ ಅಭಿನಂದನೆಗಳು:) ರೀಡರಲ್ಲಿ ಕೂರ್ಸಿದೀನಿ, ಒಳ್ಳೊಳ್ಳೆ ಅಡಿಗೆ ಕಲ್ಸಿ ಸಾರ್:)

ನಿಮ್ಮದೊಂದು ಉತ್ತರ

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s