ಅವಲಕ್ಕಿ ಬಿಸಿ ಬೇಳೆಭಾತ್

ಬಿಸಿಬೇಳೆಭಾತ್ ಎಲ್ಲರಿಗೂ ತಿಳಿದದ್ದೇ. ಆದರೆ ನಾನು ಈ ಬಾರಿ ಹೇಳುತ್ತಿರುವುದು ಅವಲಕ್ಕಿ ಬಿಸಿಬೇಳೆಭಾತ್. ಬಹಳಷ್ಟು ಬಾರಿ ತರಕಾರಿ, ಬೇಳೆ, ಅನ್ನ ಎಲ್ಲವೂ ಸೇರಿಕೊಂಡ ಅಕ್ಕಿಯ ಬಿಸಿಬೇಳೆಬಾತ್ ಭಾರ ಎನಿಸೋದು ಸಹಜ. ಹೆಚ್ಚು ತಿಂದರೆ ರಾತ್ರಿ ತನಕ ಇನ್ನೇನೂ ಬೇಡಪ್ಪಾ ಎನಿಸೋತ್ತೆ. ಇಂಥ ತೊಂದರೆಗಳಿಗೆ ಅವಲಕ್ಕಿ ಬಿಸಿಬೇಳೆ ಭಾತ್ ಪರಿಹಾರ.
ಮಾಡೋದಕ್ಕೆ ತಗಲುವ ಸಮಯವೂ ಸಹ ಅಕ್ಕಿ ಭಾತ್ ಗಿಂತ ಕಡಿಮೆ.
ಮೂರು ಮಧ್ಯಮ ಗಾತ್ರದ ಕ್ಯಾರೆಟ್, ಹದಿನೈದು ಬೀನ್ಸ್, ಎರಡು ಎಳೆ ನವಿಲುಕೋಸು, ಒಂದು ಆಲೂಗೆಡ್ಡೆ, ಎರಡು ಟೊಮೆಟೊವನ್ನು ಸ್ವಲ್ಪ ಉದ್ದುದ್ದವಾಗಿ ಹೋಳುಗಳನ್ನಾಗಿ ಮಾಡಿಕೊಳ್ಳಿ. ಐವತ್ತು ಗ್ರಾಂ ಅಷ್ಟು ಹಸಿ ಬಟಾಣಿಯನ್ನು ಹಾಗೂ ಮೂರು ಮುಷ್ಟಿ ತೊಗರಿ ಬೇಳೆಯನ್ನು ಕುಕ್ಕರಿನಲ್ಲಿ ಬೇಯಿಸಿ.
ಕಾಲು ಕೆಜಿ ದಪ್ಪ ಅವಲಕ್ಕಿಯನ್ನು ಹತ್ತು ನಿಮಿಷ ನೆನೆಸಿ. ಅದು ಸಂಪೂರ್ಣ ನೆನೆಯುವುದಿಲ್ಲ, ಸ್ವಲ್ಪ ಗಟ್ಟಿ ಗಟ್ಟಿ ಇರುತ್ತದೆ. ಇರಲಿ ಗಾಬರಿಯಾಗುವುದು ಬೇಡ. ಜಾಸ್ತಿ ಹೊತ್ತು ನೆನೆದರೆ ಕರಗಿ ಹೋಗುತ್ತೆ.
ಇದಕ್ಕೆ ಹಾಕಬೇಕಾದ ಮಸಾಲೆ ಅಕ್ಕಿ ಬಿಸಿಬೇಳೆ ಭಾತ್ ಗೆ ಹಾಕುವಂಥದ್ದೇ. ಒಲೆ ಹಚ್ಚಿ ಇಟ್ಟ ಬಾಣಲಿಗೆ ಹಾಕಿದ ಎಣ್ಣೆ ಕಾದ ಮೇಲೆ ಹತ್ತು ಕಾಳು ಮೆಂತ್ಯೆ ಹಾಕಿ. ತಕ್ಷಣವೇ ಸ್ವಲ್ಪ ಉದ್ದಿನಬೇಳೆ ಹಾಕಿ, ಬೇಕಾದ್ರೆ ಕಡ್ಲೇಬೇಳೆಯನ್ನೂ ಹಾಕಬಹುದು (ಕಡ್ಲೇಬೇಳೆ ಹಾಕಿದರೆ ಭಾತ್ ದಪ್ಪ ಆಗುತ್ತದೆ). ಅದು ಸ್ವಲ್ಪ ಕೆಂಪಗೆ ಆಗುತ್ತಿದ್ದಂತೆ ಹದಿನೈದು ಕಾಳು ಜೀರಿಗೆ ಹಾಕಿ. ಜತೆಗೆ ಅಷ್ಟೇ ಕೊತ್ತಂಬರಿ ಕಾಳು ಹಾಕಿ. ಮೂರು ತುಂಡು ಚಕ್ಕೆ, ನಾಲ್ಕು ಲವಂಗ, ಏಲಕ್ಕಿ ಹಾಕಿ. ಆರು ಒಣ ಮೆಣಸು (ಬ್ಯಾಡಗಿ) ಮೂರು (ಗುಂಟೂರು) ಮೆಣಸು ಹಾಕಿ ಹುರಿಯಿರಿ. ಕರಿಬೇವಿನ ಸೊಪ್ಪು ಹಾಕಿ. ಅದನ್ನು ಸ್ವಲ್ಪ ತೆಂಗಿನ ಕಾಯಿ (ತೆಂಗಿನಕಾಯಿಯ ಅರ್ಧ ಭಾಗದಲ್ಲಿ ತುರಿದದ್ದರಲ್ಲಿ ಒಂದು ಭಾಗ)ಯನ್ನು ಹಾಕಿ ಮಸಾಲೆಯನ್ನು ರುಬ್ಬಿ. ಒಗ್ಗರಣೆಗೆ ಎರಡು ಕ್ಯಾಪ್ಸಿಕಂ ಮತ್ತು ಎರಡು ಈರುಳ್ಳಿಯನ್ನು ಉದ್ದವಾಗಿ ಹೆಚ್ಚಿಟ್ಟುಕೊಳ್ಳಿ.
ಬೆಂದ ತರಕಾರಿ (ನೀರೂ ಸಹಿತ) ಪಾತ್ರೆಗೆ ಹಾಕಿ ಒಲೆ ಮೇಲಿಡಿ. ಅದಕ್ಕೆ ಎರಡು ಮುಷ್ಟಿ ಶೇಂಗಾ ಬೀಜ ಹಾಕಿ. ಒಂದು ಕುದಿ ಬರಲಿ. ಆಗ ಅವಲಕ್ಕಿಯನ್ನೂ ಹಾಕಿ. ಜತೆಗೆ ಉಪ್ಪು, ರುಬ್ಬಿದ ಮಸಾಲೆ ಹಾಕಿ. ಚೆನ್ನಾಗಿ ಕುದಿ ಬರುವವರೆಗೂ ಕಾಯಿರಿ.
ಇದೇ ಸಂದರ್ಭದಲ್ಲಿ ಬಾಣಲಿಯಿಟ್ಟು ಎಣ್ಣೆ ಹಾಕಿ. ಹೆಚ್ಚಿಟ್ಟ ಈರುಳ್ಳಿ ಮತ್ತು ಕ್ಯಾಪ್ಸಿಕಂ ನ್ನು ಅದರಲ್ಲಿ ಹುರಿಯಿರಿ. ಸ್ವಲ್ಪ ಕೆಂಪಗಾದ ಮೇಲೆ ಕುದಿ ಬಂದ ಭಾತ್ ಗೆ ಹಾಕಿ ತಿರುವಿ. ಅಲ್ಲಿಗೆ ಅವಲಕ್ಕಿ ಬೇಳೆಭಾತ್ ಸಿದ್ಧ. ಬೆಳಗ್ಗೆ ತಿಂಡಿಗೆ ಓಕೆ. ಹೆಚ್ಚು ಹೊತ್ತು ಕಳೆದಷ್ಟೂ ಅದು ಹಿಗ್ಗುತ್ತದೆ. ಅಷ್ಟೇ ಅಲ್ಲ, ಅವಲಕ್ಕಿ ಮೆದುವಾಗುತ್ತದೆ. ಈರುಳ್ಳಿಯೊಂದಿಗೆ ಒಂದು ಸಣ್ಣ ಗೆಡ್ಡೆ ಬೆಳ್ಳುಳ್ಳಿಯನ್ನೂ ಹಾಕುವವರು ಹಾಕಬಹುದು.

Advertisements

ಕಲ್ಲಂಗಡಿ ಸಿಪ್ಪೆ ಪಲ್ಯ !

ಕಲ್ಲಂಗಡಿ ಹಣ್ಣು ಗೊತ್ತಲ್ಲ. ಅದರ ಸಿಪ್ಪೆಯ ಪಲ್ಯ ಗೊತ್ತೇ?
ಕೆಲವರಿಗೆ ಗೊತ್ತಿರಬಹುದು. ಅದರ ರುಚಿ ಅದ್ಭುತ. ನನ್ನ ಮೂರನೇ ರೆಸಿಪಿ ಅದೇ. “ಕಲ್ಲಂಗಡಿ ಸಿಪ್ಪೆ ಪಲ್ಯ’.
ಏನು ? ನಾವಡರು ಸಿಪ್ಪೆ ಇಡ್ಕೊಂಡಿದ್ದಾರಲ್ಲಾ ಅನ್ನಬೇಡಿ. ಇದೂ ಒಂದು ರೀತಿಯಲ್ಲಿ ಕಸವನ್ನು ರಸ ಮಾಡೋದು ಅಂತಲ್ಲ ; ಸಿಪ್ಪೆಯಿಂದ ಮೇಲೋಗರ ಮಾಡೋದು.
ಕಲ್ಲಂಗಡಿ ಸಿಪ್ಪೆ ಪಲ್ಯ ಮಾಡುವುದು ಬಹಳ ಸುಲಭ. ಹಣ್ಣು ತಿಂದ ಮೇಲೆ ಸಿಪ್ಪೇನಾ ತೆಗೆದಿಡಿ. ಫ್ರಿಜ್‌ನಲ್ಲಿಟ್ಟರೆ ನಾಲ್ಕು ದಿನದ ನಂತರವೂ ಆ ಸಿಪ್ಪೇನಾ ಬಳಸಬಹುದು.
ಸಿಪ್ಪೆಯ ಮೇಲಿನ ಸಿಪ್ಪೆಯನ್ನು (ಹಸಿರು ಇರುವಂಥದ್ದು) ತೆಳ್ಳನೆಯದಾಗಿ ತೆಗೆಯಿರಿ, ಕೆರೆದು ತೆಗೆಯಬೇಡಿ. ಚಾಕುವಿನಿಂದ ತೆಗೆತಬೇಕು ಪಪಾಯಿ ಹಣ್ಣಿನ ಸಿಪ್ಪೆ ತೆಗೆದ ಹಾಗೆ. ನಂತರ ಸಣ್ಣ ಸಣ್ಣದಾಗಿ ಹೋಳುಗಳನ್ನು ಮಾಡಿ. ಸಣ್ಣ ಸಣ್ಣ ಚೂರಾದಷ್ಟೂ ರುಚಿ.
ಒಲೆ ಹಚ್ಚಿ ಇಟ್ಟ ಬಾಣಲಿಗೆ ಎಣ್ಣೆ ಸ್ವಲ್ಪ ಹಾಕಿ. ನಂತರ ಒಗ್ಗರಣೆ ಕೊಟ್ಟು ತುಂಡು ಮಾಡಿದ ಕಲ್ಲಂಗಡಿ ಸಿಪ್ಪೆಯ ಚೂರುಗಳನ್ನು ಹಾಕಿ. ಜತೆಗೆ ನೆನೆಸಿದ್ದ ಕಡ್ಲೇಕಾಳಿದ್ದರೆ ಒಂದು ಮುಷ್ಠಿ ಹಾಕಿ (ಇದು ಒಳ್ಳೆ ರುಚಿ ಕೊಡುತ್ತೆ, ಇಲ್ಲದಿದ್ದರೆ ಹೆಸರುಕಾಳು ಚೆನ್ನಾಗಿರುತ್ತೆ). ಉಪ್ಪು ಹಾಕಿ, ಸ್ವಲ್ಪ ಹುಣಸೇಹಣ್ಣು ರಸ ಹಾಕಿ ಬೇಯಲು ಬಿಡಿ. ಸಣ್ಣ ಉರಿಯಲ್ಲಿ
ಹದಿನೈದು ನಿಮಿಷದ ನಂತರ ಅದು ನೀರು ಆರಿ ಬೆಂದಿರುತ್ತೆ.
ಇದಕ್ಕೆ ಸಾಸಿವೆ, ತೆಂಗಿನಕಾಯಿ, ಒಣ ಮೆಣಸು ಹಾಕಿ ಅರೆದ “ಕಾಯಿ ಮಸಾಲೆ’ ಯನ್ನಾದರೂ ಹಾಕಬಹುದು. ಇಲ್ಲದಿದ್ದರೆ ಬರೀ ಅಚ್ಚ ಮೆಣಸಿನ ಪುಡಿ ಹಾಗೂ ತೆಂಗಿನ ಕಾಯಿಯ ತುರಿ (ಎರೆದ ತೆಂಗಿನ ಕಾಯಿ) ಹಾಕಿ ಕಲೆಸಿದರೆ ಪಲ್ಯೆ ಸಿದ್ಧ. ನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕಾರ ಮಾಡಬಹುದು.

ಹೀರೇಕಾಯಿ ಸಿಪ್ಪೆ ಚಟ್ನಿ

ಗೊಜ್ಜು ೧-

ಹೀರೇಕಾಯಿ ಒಳ್ಳೆ ತರಕಾರಿ. ಅದರಲ್ಲಿ ದೋಸೆ, ಹುಳಿ ಹಾಗೂ ಸಿಹಿ ಮಾಡ್ತಾರೆ. ಆದರೆ ಅದರ ಸಿಪ್ಪೆಯ ಗೊಜ್ಜು ಬಹಳ ಚೆನ್ನಾಗಿರುತ್ತೆ. ಅದರಲ್ಲೂ ಬರೀ ಅನ್ನ ಕಲಸಿ ತಿನ್ನಲು ಸೂಪರ್. ಹಾಗೆಯೇ ಇಡ್ಲಿ, ದೋಸೆಗೂ ಓಕೆ. ಕೆಲಸ ಕಡಿಮೆ ಹಾಗೂ ಎಕಾನಮಿ !
ಹೇಗಿದ್ರೂ ಸಾಂಬಾರ್‌ಗೆ ಎಂದು ಹೀರೇಕಾಯಿ ತಂದಿರ್‍ತೀರಿ. ಅದರ ಮುಳ್ಳಿನಂತಿರುವ ಭಾಗವನ್ನು ಎರೆದು ಸಮತಟ್ಟಾಗಿಸಿ. ನಂತರ ಅದರ ಸಿಪ್ಪೆಯನ್ನು ತೆಗೆಯಿರಿ. ಇದನ್ನು ಕವರ್‌ನಲ್ಲಿಟ್ಟು ಫ್ರಿಜ್‌ನಲ್ಲಿಟ್ಟರೆ ಒಂದು ವಾರದವರೆಗೂ ಚೆನ್ನಾಗಿರುತ್ತೆ.
ಮನೆಯಲ್ಲಿ ಮೂರು ಮಂದಿಯಿದ್ದರೆ, ಒಂದು ಹತ್ತು ಸಿಪ್ಪೆ ಸಾಕು. ಅದನ್ನು ಚಿಕ್ಕ ಬಾಣಲಿಯಲ್ಲಿಟ್ಟು ಸ್ವಲ್ಪ ಎಣ್ಣೆ ಹಾಕಿ ಹುರಿಯಬೇಕು. ಹತ್ತು ನಿಮಿಷ ಹುರಿದ ಮೇಲೆ ಪಚ್ಚೆ ಹಸಿರಿನ ಬಣ್ಣ ನೀರಿನಲ್ಲಿ ಅದ್ದಿ ತೆಗೆದಂತಾಗುತ್ತದೆ. ನಂತರ ಅದನ್ನು ತಟ್ಟೆಗೆ ತೆಗೆದಿಟ್ಟು, ಅದೇ ಬಾಣಲಿಗೆ ಒಂದು ಚಮಚ ಎಣ್ಣೆ ಹಾಕಿ. ಎಣ್ಣೆ ಕಾದ ಕೂಡಲೇ ಸ್ವಲ್ಪ ಉದ್ದಿನಬೇಳೆ ಹಾಕಿ. ನಾಲ್ಕೈದು ಒಣಮೆಣಸು ಹಾಕಿ. ಹುರಿದು ಆ ಸಿಪ್ಪೆಯೊಂದಿಗೆ ಸೇರಿಸಿ ಮಿಕ್ಸಿಗೆ ಹಾಕಿ. ಜತೆಗೆ ಸ್ವಲ್ಪ ನೆನೆಸಿಟ್ಟ ಹುಣಸೆಹಣ್ಣು, ತೆಂಗಿನಕಾಯಿ (ಇಬ್ಬರಿಗೆ ತೆಂಗಿನಕಾಯಿಯ ಕಾಲು ಭಾಗದಷ್ಟು) ಹಾಗೂ ಉಪ್ಪು ಹಾಕಿ ರುಬ್ಬಿ. ಗೊಜ್ಜು ಸಿದ್ಧ.
ನಂತರ ಕರಿಬೇವಿನಸೊಪ್ಪಿನೊಂದಿಗೆ ಇಂಗಿನ ಒಗ್ಗರಣೆ ಹಾಕಿ.
ಬಹಳ ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೀರೇಕಾಯಿ ಸಿಪ್ಪೆ ಕಹಿ ಇದೆಯಾ ಎಂದು ಮೊದಲು ಚೂರು ತಿಂದು ನೋಡಿಕೊಳ್ಳಿ. ಇಲ್ಲವಾದರೆ ಕಾರ್ಕೋಟಕ ವಿಷ ಸೇವಿಸಿದ ಅನುಭವವಾದೀತು.
ಉದ್ದಿನಬೇಳೆ ಸರಿಯಾಗಿ ಹುರಿಯದಿದ್ದರೆ, ಸ್ವಲ್ಪ ಹಸಿ ವಾಸನೆ ಬರುತ್ತದೆ. ಹೀರೇಕಾಯಿಯನ್ನೂ ಸರಿಯಾಗಿ ಹುರಿಯದಿದ್ದರೆ ಹಸಿ ವಾಸನೆ ಸಾಮಾನ್ಯ. ರುಚಿಸದು.

ಕಾಯಿರಸ

ಈ ಬಾರಿಯ ರೆಸಿಪಿ ಕಾಯಿರಸ.
ಸಾಮಾನ್ಯವಾಗಿ ಬೆಂಡೆಕಾಯಿ, ಹಾಗಲಕಾಯಿಯ ಕಾಯಿರಸ ಪ್ರಸಿದ್ಧ. ಇದು ದಕ್ಷಿಣ ಕನ್ನಡದ ಮೇಲೋಗರ. ನಿತ್ಯವೂ ಕಾಯಿ ಮಸಾಲೆ ತಿಂದು ತಿಂದೂ ಬೇಸರವಾದರೆ ಹಾಗೂ ತುರ್ತಾಗಿ ಒಂದು ಪದಾರ್ಥ (ಮೇಲೋಗರ) ಆಗ ಬೇಕೆಂದರೆ ಇದನ್ನು ಮಾಡಬಹುದು.
ಇದು ಊಟಕ್ಕೆ ರುಚಿ ಹಾಗೂ ಕೆಲಸವೂ ಕಡಿಮೆ. ಈಗಾಗಲೇ ಚೇತನಾ ಅವರು ಬೇಗ ಆಗಬಹುದಾದ, ಕಡಿಮೆ ಕೆಲಸವಿರುವ ಪಾಕ ವೈವಿಧ್ಯವನ್ನು ಹೇಳಿ ಎಂದು ಸೂಚಿಸಿದ್ದಾರೆ. ಅದಕ್ಕೆ ಪ್ರಯತ್ನಿಸುತ್ತೇನೆ. ಅದಿರಲಿ. ಈಗ ಅಡುಗೆ ಮನೆಗೆ ಹೋಗೋಣ.
ಈ ಕಾಯಿ ರಸಕ್ಕೆ ಎರಡು ಬೇಸರವನ್ನು ಕಳೆಯುತ್ತದೆ. ಒಂದು ನಿತ್ಯವೂ ಕಾಯಿ ತಿಂದು ಬೇಸರಗೊಂಡವರಿಗೆ ಹಾಗೂ ದಿನವೂ ಬೇಳೆ (ತೊಗರಿ) ತಿಂದು ಬೇಸರಗೊಂಡವರಿಗೆ ಖುಷಿ ನೀಡಬಲ್ಲದು. ಕಾರಣ ಇದಕ್ಕೆ ಕಾಯಿಯನ್ನೂ ಬಳಸುವುದಿಲ್ಲ. ಹಾಗೆಯೇ ಬೇಳೆಯನ್ನೂ ಬಳಸುವುದಿಲ್ಲ.
ಎಳೆ ಬೆಂಡೆಕಾಯಿ ಇದ್ದರೆ ಒಳ್ಳೆಯದು. ಇಬ್ಬರು ಅಥವಾ ಮೂವರು ಮನೆಯಲ್ಲಿದ್ದರೆ ಸುಮಾರು ಹತ್ತು ಬೆಂಡೆಕಾಯಿಯನ್ನು ತೊಳೆದು ಸಣ್ಣದಾಗಿ ಚೂರು ಮಾಡಿಕೊಳ್ಳಿ (ಬೆಂಡೆಕಾಯಿಯನ್ನು ಉದ್ದಕ್ಕೆ ಸೀಳಿ ಮತ್ತೆ ಮೂರು ಬಾರಿ ಸೀಳಿ ಅದನ್ನು ಅಡ್ಡ ಕತ್ತರಿಸಿದರೆ ಸಣ್ಣ ಚೂರುಗಳಾಗುತ್ತದೆ). ನಂತರ ಬಾಣಲೆ ಇಟ್ಟು ಎಣ್ಣೆ ಹಾಕಬೇಡಿ. ಬೆಂಡೆಕಾಯಿ ಚೂರುಗಳನ್ನು ಹಾಕಿ ಹುರಿಯಿರಿ. ಅದು ಪರಿಮಳ ಬರುವವರೆಗೆ ಹುರಿಯಬೇಕು. ಅದರ ನೋಳಿ (ಅಂಟಿನ ಅಂಶ) ಅಂಶ ಬಿಡುವಷ್ಟು ಹುರಿದು, ಅದಕ್ಕೆ ನೆನೆಸಿಟ್ಟುಕೊಂಡ ಹುಣಸೇಹಣ್ಣನ್ನು ಕಿವುಚಿ ತೆಗೆದ ರಸವನ್ನು ಸುರಿಯಬೇಕು. ಸ್ವಲ್ಪ ಉಪ್ಪು ಹಾಕಿ ಬೇಯಲು ಬಿಡಬೇಕು. ಒಂದು ಉಂಡೆ ಬೆಲ್ಲ ಹಾಕಿ. ಬೆಲ್ಲ ಬೇಡ ಎನ್ನುವವರು ಬಿಡಬಹುದು.
ಈ ಮಧ್ಯೆ ಸಣ್ಣ ಬಾಣಲಿ ಇಟ್ಟು, ಹತ್ತು ಕಾಳು ಮೆಂತೆ ಹಾಕಿ. ಜತೆಗೆ ಹದಿನೈದು ಕಾಳು ಉದ್ದಿನಬೇಳೆ, ಕಡ್ಲೇಬೇಳೆ ಹಾಕಿ ಹುರಿಯಿರಿ. ಅದು ಕೆಂಪಗೆ ಆಗುತ್ತಿದ್ದಂತೆ ಹದಿನೈದು ಕಾಳು ಜೀರಿಗೆ, ಇಪ್ಪತ್ತು ಕಾಳು ಕೊತ್ತಂಬರಿ, ಐದು ಒಣ ಮೆಣಸಿನಕಾಯಿ (ಬ್ಯಾಡಗಿ ಆದರೆ ಒಳ್ಳೆಯದು, ಕಲರ್ ಬರುತ್ತೆ) ಹಾಕಿ ಹುರಿಯಬೇಕು. ಹತ್ತು ಎಸಳು ಕರಿಬೇವು ಹಾಕಿ. ನಂತರ ಅದನ್ನು ಮಿಕ್ಸಿಯಲ್ಲಿ ಪುಡಿ ಮಾಡಿ. ಎಣ್ಣೆ ಹಾಕಿ ಹುರಿಯಬಾರದು. ಈಪುಡಿ ಇನ್ನೂ ಸ್ವಲ್ಪ ಮಾಡಿಟ್ಟುಕೊಂಡು ಆಗಾಗ್ಗೆ ಬಳಸಬಹುದು. ಪರಿಮಳ ಹೋಗದಂತ ಡಬ್ಬಿಯಲ್ಲಿ ಹಾಕಿಟ್ಟರೆ ಎರಡು ತಿಂಗಳು ಬಳಸಬಹುದು.
ಬೇಯಲು ಬಿಟ್ಟ ಬೆಂಡೆಕಾಯಿ ಅಷ್ಟರೊಳಗೆ ಬೆಂದಿರುತ್ತೆ. ಅದಕ್ಕೆ ಈ ಪುಡಿಯನ್ನು ಹಾಕಿ ಕಲಕಿ. ಅದು ಕುದಿಯಲಾರಂಭಿಸುತ್ತದೆ. ಒಲೆ ಸಣ್ಣಗೆ ಮಾಡಿ, ಒಂದೈದು ನಿಮಿಷ ಕುದಿಯಲಿ. ಒಂದು ಹದಕ್ಕೆ ಬಂದು ಹುಳಿಯಂತೆಯೇ ಆಗುತ್ತದೆ. ಅಲ್ಲಿಗೆ ಊಟಕ್ಕೆ ಅದು ಸಿದ್ಧ. ಇಳಿಸುವ ಮುನ್ನ ಸ್ವಲ್ಪ ಇಂಗು ಹಾಕಿ ಕಲಕಿ. ಇದಕ್ಕೆ ಬೇಳೆಯೂ ಬೇಡ, ಕಾಯಿಯೂ ಬೇಡ. ಇದೇ ರೀತಿಯಲ್ಲಿ ಹಾಗಲಕಾಯಿಯದ್ದೂ ಮಾಡಬಹುದು.